ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು |ಅಕ್ರಮವಾಗಿ ಕಸ ಹಾಕುವ ಕೃತ್ಯ: ಸಿಸಿಟಿವಿ ಕ್ಯಾಮೆರಾ ಕಣ್ಣಿಗೆ ಮಣ್ಣು

ಎಚ್ಚರಿಕೆ ಫಲಕ ಹಾಕಿದರೂ ನಿಂತಿಲ್ಲ ಅಕ್ರಮವಾಗಿ ಕಸ ಹಾಕುವ ಕೃತ್ಯ
Published 11 ಜನವರಿ 2024, 6:43 IST
Last Updated 11 ಜನವರಿ 2024, 6:43 IST
ಅಕ್ಷರ ಗಾತ್ರ

ಮಂಗಳೂರು: ನಗರದ ವೆಲೆನ್ಸಿಯಾದಿಂದ ಗೋರಿಗುಡ್ಡ ಹೋಗುವ ರಸ್ತೆಯಲ್ಲಿ ಚರ್ಚ್ ಸಮೀಪ ಅಕ್ರಮವಾಗಿ ತಂದು ಎಸೆಯುವ ಕಸದ ರಾಶಿಯಿಂದ ದಾರಿಹೋಕರು ಬೇಸತ್ತಿದ್ದಾರೆ.

ರಸ್ತೆ ಬದಿಯ 50 ಮೀಟರ್ ಅಂತರದಲ್ಲಿ ದೊಡ್ಡ ಪ್ಲಾಸ್ಟಿಕ್ ಕವರ್‌ಗಳು, ಚೀಲಗಳಲ್ಲಿ ಕಸದ ರಾಶಿ ಬಿದ್ದಿರುತ್ತದೆ. ಅದರಲ್ಲಿರುವ ಕೊಳೆತ ತಿನಿಸುಗಳು, ಕುರುಕಲು ತಿಂಡಿಗಳ ವಾಸನೆಗೆ ಬೀದಿನಾಯಿಗಳು ಚೀಲವನ್ನು ಕಚ್ಚಿ ಹರಿದು, ಆಹಾರ ಅರಸುತ್ತವೆ. ಇದರಿಂದ ಕಸ ರಸ್ತೆಯವರೆಗೆ ಹರಡುತ್ತದೆ.

ಇಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಮರದ ಮೇಲೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಆ ಕ್ಯಾಮೆರಾ ಕೆಳಗೇ ಕಸ ತುಂಬಿದ ಹತ್ತಾರು ಚೀಲಗಳು ಬಿದ್ದಿರುತ್ತವೆ. ಇದು ಪ್ರತಿನಿತ್ಯದ ಸಮಸ್ಯೆ ಆಗಿದ್ದರೂ, ಪಾಲಿಕೆ ಅಧಿಕಾರಿಗಳು ಕಸ ಹಾಕುವವರನ್ನು ಪತ್ತೆ ಮಾಡಿ, ದಂಡ ಹಾಕುವಲ್ಲಿ ವಿಫಲರಾಗಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಕಸ ಹಾಕುವುದನ್ನು ಕಂಡು ಬೇಸತ್ತ ಪರಿಸರ ಕಾರ್ಯಕರ್ತ ಜಯಪ್ರಕಾಶ್ ಎಕ್ಕೂರ್ ಅವರು ಎರಡು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಏಕಾಂಗಿಯಾಗಿ ಒಂದು ವಾರ ಪ್ರತಿಭಟನೆ ನಡೆಸಿದ್ದರು. ಫಲಕ ಹಿಡಿದು ದಿನಕ್ಕೆ ಎರಡು ತಾಸು ನಿಂತು ಅವರು ಪ್ರತಿಭಟಿಸಿದ್ದರು. ಇದಾದ ಕೆಲವು ದಿನಗಳ ನಂತರ ಮಹಾನಗರ ಪಾಲಿಕೆ ಅಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿತು. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

‘ಗೋರಿಗುಡ್ಡದ ಯು.ಬಿ.ಯಂ.ಸಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿಟೆಲ್ ಮೆಮೋರಿಯಲ್ ಪ್ರೌಢಶಾಲೆಗೆ ಹೋಗುವ ಮಕ್ಕಳು, ಚರ್ಚ್‌ಗೆ ಹೋಗುವವರು, ವಾಕಿಂಗ್ ಹೋಗುವವರು ಇದೇ ದಾರಿಯಲ್ಲಿ ಓಡಾಡುತ್ತಾರೆ. ಈ ದಾರಿಯಲ್ಲಿ ಹೋಗುವವರಿಗೆ ಪ್ರತಿದಿನ ಕಸದ ರಾಶಿಯ ಅಸಹ್ಯ ದೃಶ್ಯ ನೋಡುವ ಗೋಳು ತಪ್ಪಿಲ್ಲ’ ಎನ್ನುತ್ತಾರೆ ಜಯಪ್ರಕಾಶ್ ಎಕ್ಕೂರ್.

‘ಕೇಟರಿಂಗ್ ಉದ್ಯಮದವರು ಬೇರೆ ಎಲ್ಲಿಂದಲೋ ಬಂದು ಇಲ್ಲಿ ಕಸ ಎಸೆದು ಹೋಗುವ ಅನುಮಾನವಿದೆ. ರಾತ್ರಿ ಮತ್ತು ಬೆಳಗಿನ ಜಾವದಲ್ಲಿ ಕಸಗಳು ಬಂದು ಬೀಳುತ್ತವೆ. ಪಾಲಿಕೆ ಅಧಿಕಾರಿಗಳು ನಿಗಾವಹಿಸಿದರೆ ಇದನ್ನು ಪತ್ತೆ ಹಚ್ಚಬಹುದು’ ಎಂದು ಸ್ಥಳೀಯರಾದ ರಾಕೇಶ್ ಪ್ರತಿಕ್ರಿಯಿಸಿದರು.

‘ಯಾರೋ ಬಂದು ಕಸ ಚೆಲ್ಲಿ ಹೋಗುತ್ತಾರೆ. ಆದರೆ, ಜನರು ವಾರ್ಡ್ ಸದಸ್ಯರನ್ನು ಪ್ರಶ್ನಿಸುತ್ತಾರೆ. ಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಹೇಳಿ ಬೇಸತ್ತಿದ್ದೇನೆ. ಕಸ ಹಾಕುವ ಜಾಗದಲ್ಲಿ ಗೋಡೆಯ ಮೇಲೆ ಒಂದು ಎಚ್ಚರಿಕೆ ಫಲಕ ಹಾಕಿ, ಸಿಸಿಟಿವಿ ಕ್ಯಾಮೆರಾ ಹಾಕಿದ್ದಾರೆ. ಇದರ ಜೊತೆಗೆ ಈ ಕೃತ್ಯ ಮಾಡುವವರನ್ನು ಪತ್ತೆ ಹಚ್ಚಿದರೆ, ಸಮಸ್ಯೆ ಪರಿಹಾರವಾಗುತ್ತಿತ್ತು’ ಎಂದು ಫಳ್ನೀರ್ ವಾರ್ಡ್ ಸದಸ್ಯೆ ಜೆಸಿಂತಾ ಬೇಸರ ವ್ಯಕ್ತಪಡಿಸಿದರು.

ಮಂಗಳೂರಿನ ಫಳ್ನೀರ್ ವಾರ್ಡ್‌ನ ವೆಲೆನ್ಸಿಯಾದಿಂದ ಗೋರಿಗುಡ್ಡ ಹೋಗುವ ಮಾರ್ಗದ ರಸ್ತೆ ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕೆಳಗೆ ಕಸ ಎಸೆದಿರುವುದು
ಮಂಗಳೂರಿನ ಫಳ್ನೀರ್ ವಾರ್ಡ್‌ನ ವೆಲೆನ್ಸಿಯಾದಿಂದ ಗೋರಿಗುಡ್ಡ ಹೋಗುವ ಮಾರ್ಗದ ರಸ್ತೆ ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕೆಳಗೆ ಕಸ ಎಸೆದಿರುವುದು

ಅಕ್ರಮವಾಗಿ ಕಸ ಹಾಕುವುದನ್ನು ನಿಯಂತ್ರಿಸುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಪ್ರತಿದಿನ ಕಸ ತೆಗೆಯುವಂತೆಯೂ ಹೇಳಿದ್ದೇನೆ. - ಜೆಸಿಂತಾ ಫಳ್ನೀರ್ ವಾರ್ಡ್ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT