ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು | ಸ್ಮಾರ್ಟ್‌ಸಿಟಿ ಕಾಮಗಾರಿ– ಶ್ವೇತಪತ್ರಕ್ಕೆ ಜೆ.ಆರ್‌.ಲೋಬೊ ಆಗ್ರಹ

ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ: ಜೆ.ಆರ್‌.ಲೋಬೊ
Last Updated 3 ಡಿಸೆಂಬರ್ 2022, 5:39 IST
ಅಕ್ಷರ ಗಾತ್ರ

ಮಂಗಳೂರು: ‘ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಆರೋಪಿಸಿದರು. ಈ ಯೋಜನೆಯ ಕಾಮಗಾರಿಗಳ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಕಮಾಂಡ್‌ ಸೆಂಟರ್‌ನ ₹ 32 ಕೋಟಿ ಮೊತ್ತದ ಕಾಮಗಾರಿಯಲ್ಲಿ ಗುತ್ತಿಗೆ ಕರಾರು ಉಲ್ಲಂಘಿಸಿ ನಗರದಲ್ಲಿ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಡಿಜಿಟಲ್‌ ಸಾಧನಗಳ ಅಳವಡಿಕೆಯಿಂದ ಆಂತರಿಕ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಮಾತೆತ್ತಿದರೆ ರಾಷ್ಟ್ರಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿ ಇದಕ್ಕೆ ಅವಕಾಶ ಕಲ್ಪಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಅನುದಾನ ಮಂಜೂರಾಗಿದ್ದು ನಾನು ಶಾಸಕನಾಗಿದ್ದ ಅವಧಿಯಲ್ಲಿ. ಆಗ ಹಳೆ ಬಂದರು ಪ್ರದೇಶದ ಅಭಿವೃದ್ಧಿ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದ ಶಾಶ್ವತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶ ಇತ್ತು. ಆದರೆ, ಈಗ ಪಾಲಿಕೆ ನಿರ್ವಹಿಸಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನೂ ಸ್ಮಾರ್ಟ್‌ಸಿಟಿ ಯೊಜನೆ ಅಡಿ ಕೈಗೊಳ್ಳುತ್ತಿರುವುದು ವಿಪರ್ಯಾಸ’ ಎಂದರು.

‘ಕಾಂಗ್ರೆಸ್‌ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲಿದ್ದು, ಸ್ಮಾರ್ಟ್‌ಸಿಟಿ ಕಾಮಗಾರಿಗಳ ಭ್ರಷ್ಟಾಚಾರದ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಿದೆ. ಆಗ ರಾಜಕಾರಣಿಗಳು ನುಣುಚಿಕೊಳ್ಳುತ್ತಾರೆ. ಆದರೆ, ತಪ್ಪತಸ್ಥ ಅಧಿಕಾರಿಗಳು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಪಾಲಿಕೆ ಸದಸ್ಯರಾದ ಎ.ಸಿ.ವಿನಯರಾಜ್‌, ಅನಿಲ್‌ಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಪ್ರಕಾಶ್‌ ಸಾಲ್ಯಾನ್‌, ವಿಶ್ವಾಸ್‌ದಾಸ್‌, ಟಿ.ಕೆ. ಸುಧೀರ್‌, ಶಾಂತಲಾ ಗಟ್ಟಿ ಮತ್ತು ಇತರರು ಇದ್ದರು.

ಪಾಲಿಕೆ ಸದಸ್ಯಗೆ ಅಗೌರವ – ಆಕ್ಷೇಪ

‘ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯ ಎ.ಸಿ.ವಿನಯರಾಜ್‌ ಅವರಿಗೆ ‘ಕುಳಿತುಕೊಳ್ಳಿ’ ಎಂದು ಆಜ್ಞಾಪಿಸುವ ಮೂಲಕ ಚುನಾಯಿತ ಸದಸ್ಯರಿಗೆ ಅಗೌರವ ತೋರಿದ್ದಾರೆ’ ಎಂದು ಜೆ.ಆರ್‌.ಲೋಬೊ ಆಕ್ಷೇಪ ವ್ಯಕ್ತಪಡಿಸಿದರು.

‘ಪಾಲಿಕೆ ಆಯುಕ್ತರ ವರ್ತನೆ ಅವರ ಹುದ್ದೆಯ ಘನತೆಗೆ ತಕ್ಕುದಲ್ಲ. ಅವರಿಗೆ ಆ ಅಧಿಕಾರವಿಲ್ಲ. ಪಾಲಿಕೆ ಇತಿಹಾಸದಲ್ಲಿ ಯಾವತ್ತೂ ಹೀಗಾಗಿರಲಿಲ್ಲ. ಆಡಳಿತ ಪಕ್ಷದವರೂ ಇದಕ್ಕೆ ಅವಕಾಶ ಕಲ್ಪಿಸಬಾರದಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT