ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ಜೆಎನ್‌.1 ಉಪತಳಿ: ಗಡಿಯಲ್ಲಿ ಚೆಕ್‌ಪೋಸ್ಟ್

ದ.ಕ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಇಲ್ಲ: ಡಿಎಚ್‌ಒ
Published 20 ಡಿಸೆಂಬರ್ 2023, 13:29 IST
Last Updated 20 ಡಿಸೆಂಬರ್ 2023, 13:29 IST
ಅಕ್ಷರ ಗಾತ್ರ

ಮಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್‌ 19ರ ಉಪತಳಿ ಜೆಎನ್‌.1 ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಗಡಿಭಾಗದಲ್ಲಿ ಐದು ಚೆಕ್‌ಪೋಸ್ಟ್‌ಗಳನ್ನು ತೆರೆದು, ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಆರ್. ತಿಮ್ಮಯ್ಯ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕೇರಳ ರಾಜ್ಯದ ಜನರು ತಮ್ಮ ದೈನಂದಿನ ಚಟುವಟಿಕೆ ಹಾಗೂ ಆರೋಗ್ಯ ಸೇವೆಗೆ ಮಂಗಳೂರನ್ನು ಅವಲಂಬಿಸಿರುವುದರಿಂದ ಇಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆಯಂತೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ, ಸೋಂಕಿತರನ್ನು ಪತ್ತೆ ಮಾಡಲು ಹಾಗೂ ವೈರಾಣು ಹರಡುವುದನ್ನು ತಡೆಗಟ್ಟಲು ಎಲ್ಲ ಸಿದ್ಧತೆ ನಡೆಸಿದೆ, ಜನರು ಆತಂಕಪಡುವ ಅಗತ್ಯವಿಲ್ಲ’ ಎಂದರು.

‘ತಲಪಾಡಿ, ಬಂಟ್ವಾಳ ತಾಲ್ಲೂಕಿನ ಸಾರಡ್ಕ, ಪುತ್ತೂರು ತಾಲ್ಲೂಕಿನ ಸ್ವರ್ಗ ಮತ್ತು ಸುಳ್ಯ ಪದವು, ಸುಳ್ಯ ತಾಲ್ಲೂಕಿನ ಜಾಲ್ಸೂರು ಈ ಐದು ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು. ಆದರೆ, ಸದ್ಯ ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ. ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲೂ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಗುವುದು. ಸರ್ಕಾರದ ಹಿರಿಯ ಅಧಿಕಾರಿಗಳು ಮಂಗಳವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಬುಧವಾರ ಇಲ್ಲಿ ಸಭೆ ನಡೆದಿದ್ದು, ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡುವಂತೆ ಅವರು ಸೂಚನೆ ನೀಡಿದ್ದಾರೆ’ ಎಂದು ವಿವರಿಸಿದರು.

ಕೇರಳದಲ್ಲಿ ಜೆಎನ್‌.1 ತಳಿಯ 27 ಪ್ರಕರಣಗಳು ಪತ್ತೆಯಾಗಿವೆ. ಅವರಲ್ಲಿ ಇಬ್ಬರು ಗುಣಮುಖರಾಗಿ ಮನೆಗೆ ತೆರಳಿದ್ದು, 25 ಮಂದಿ ಹೋಮ್ ಐಸೊಲೇಷನ್‌ನಲ್ಲಿ ಇದ್ದಾರೆ. ಅಲ್ಲಿನ ಜಿಲ್ಲಾ ಆರೋಗ್ಯಾಧಿಕಾರಿ ಸಂಪರ್ಕಿಸಿದಾಗ, ದಿನಕ್ಕೆ ಒಂದು ಅಥವಾ ಎರಡು ಪ್ರಕರಣಗಳು ಮಾತ್ರ ಪತ್ತೆಯಾಗುತ್ತಿವೆ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ಸಹಿತ ಹಾಸಿಗೆ, ಐಸಿಯು, ಜಂಬೊ ಸಿಲಿಂಡರ್ ಸೇರಿದಂತೆ ಎಲ್ಲವನ್ನೂ ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲಿ ಐಎಲ್‌ಐ (ಶೀತ, ನೆಗಡಿ, ಜ್ವರ ಅನಾರೋಗ್ಯದ  ಲಕ್ಷಣಗಳು) ಇದ್ದರೆ ಅವರನ್ನು ತಪಾಸಣೆಗೆ ಒಳಪಡಿಸುವಂತೆ ಎಲ್ಲ ವಿದ್ಯಾಸಂಸ್ಥೆಗೆ ಪತ್ರ ಬರೆಯಲಾಗುವುದು. ಜಿಲ್ಲೆಯಲ್ಲಿ ದಿನವೊಂದಕ್ಕೆ 100 ರ್‍ಯಾಪಿಡ್‌ ಟೆಸ್ಟ್‌, 221 ಆರ್‌ಟಿಪಿಸಿಆರ್ ಟೆಸ್ಟ್‌ ಸೇರಿದಂತೆ ಒಟ್ಟು 321 ಜನರನ್ನು ತಪಾಸಣೆಗೆ ಒಳಪಡಿಸುವಂತೆ ಗುರಿ ನಿಗದಿಯಾಗಿದೆ. ಈಗಾಗಲೇ ಇರುವ 100 ಕಿಟ್‌ಗಳನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 1,000 ಕಿಟ್ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಎಲ್ಲ ‘ಸಾರಿ’ ಪ್ರಕರಣಗಳು (ಉಸಿರಾಟದ ಸಮಸ್ಯೆ), ಐಎಲ್‌ಐ ಪ್ರಕರಣಗಳಲ್ಲಿ ಪ್ರತಿ 20ರಲ್ಲಿ ಒಬ್ಬರನ್ನು ತಪಾಸಣೆಗೆ ಒಳಪಡಿಸಲಾಗುವುದು.

ದ.ಕ. ಜಿಲ್ಲೆಯಲ್ಲಿ ಲಭ್ಯವಿರುವ ಹಾಸಿಗೆ– 10986

ಆಮ್ಲಜನಕ ಸಹಿತ ಐಸಿಯು ಹಾಸಿಗೆ–1376

ಐಸಿಯು ಹಾಸಿಗೆ– 722

ವೆಂಟಿಲೇಟರ್ ಸಹಿತ ಹಾಸಿಗೆ 336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT