ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಸಮಾಜಗಳ ಜೊತೆಯಲ್ಲಿ ಒಯ್ಯುವ ಬಂಟರು: ಗುರುದೇವಾನಂದ ಸ್ವಾಮೀಜಿ

Published 22 ಫೆಬ್ರುವರಿ 2024, 4:34 IST
Last Updated 22 ಫೆಬ್ರುವರಿ 2024, 4:34 IST
ಅಕ್ಷರ ಗಾತ್ರ

ಮಂಗಳೂರು: ‘ಇತರ ಸಮಾಜಗಳನ್ನೂ ಒಟ್ಟಿಗೆ ಕರೆದೊಯ್ಯುವ ಉದಾತ್ತ ಧೋರಣೆ ಹೊಂದಿರುವ ಸಮಾಜ ಬಂಟರದು.‌ ಧರ್ಮ ಸಂಸ್ಕೃತಿ ಉಳಿಸಿಕೊಳ್ಳುವ ಧೀಮಂತಿಕೆ‌ ಇವರಲ್ಲಿದೆ’ ಎಂದು ಒಡಿಯೂರು ಗುರುದೇವಾನಂದ ಸ್ವಾಮೀಜಿ ಹೇಳಿದರು.

ಕಾವೂರು ಬಂಟರ ಸಂಘವು ನಿರ್ಮಿಸಲಿರುವ ‘ಕಾವೂರು ಬಂಟರ ಭವನ’ದ ಭೂಮಿಪೂಜೆ ಮತ್ತು ಸಂಘದ ಆಡಳಿತ ಕಚೇರಿ ಹಾಗೂ ಬಯಲು ರಂಗ ಮಂದಿರ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ‌ ನೀಡಿದರು.

‘ಯಾವುದೇ ಕಾರ್ಯಕ್ಕೆ ಕೈ ಹಾಕಿದರೆ, ಅದನ್ನು ಯಶಸ್ವಿಗೊಳಿಸುವ ಸಾಮರ್ಥ್ಯ ಈ ಸಮಾಜದವರಲ್ಲಿದೆ. ಹೂವನ್ನು ಎತ್ತಿದಷ್ಟು ಹಗುರವಾಗಿ ಈ ಭವನ ನಿರ್ಮಾಣವಾಗಲಿ’ ಎಂದು ಹಾರೈಸಿದರು. 

ಸಂಸದ ನಳಿನ್‌ ಕುಮಾರ್‌ ಕಟೀಲ್, 'ಈ ಭವನ ಬಂಟರಿಗೆ‌ ಸೀಮಿತವಾಗದೇ, ಎಲ್ಲ ಸಮಾಜದವರಿಗೂ ಪ್ರಯೋಜನವಾಗಬೇಕು.‌ ಇಲ್ಲಿ ವಿದ್ಯಾರ್ಥಿ ಭವನವೂ ಆದಷ್ಟು ಬೇಗ ನಿರ್ಮಾಣ ಆಗಲಿ’ ಎಂದರು.

ಕಾಂಗ್ರೆಸ್‌ ಮುಖಂಡ ಬಿ.ರಮಾನಾಥ ರೈ, ‘ಬಂಟರಿಗೆ ಶಕ್ತಿ ತುಂಬಿದ್ದು ಇತರ ಸಮಾಜಗಳು. ಎಲ್ಲ ಸಮಾಜಗಳಿಗೆ ನಾಯಕತ್ವ ನೀಡುವ ಗುಣವನ್ನು ಬಂಟರ ಮುಂದಿನ ತಲೆಮಾರು ಕೂಡ ಮುಂದುವರಿಸಬೇಕು’ ಎಂದರು.

ಆಡಳಿತ ಕಚೇರಿಯನ್ನು ಉದ್ಘಾಟಿಸಿದ ಬಂಟರ ಯಾನೆ‌ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ ಕುಮಾರ್‌ ರೈ, ‘ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಂಟ ಸಮುದಾಯದ ಸುಮಾರು 69 ಸಾವಿರ  ಕುಟುಂಬಗಳಿವೆ. ಅವರ, ಉದ್ಯೋಗ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸಿ ವಿಶ್ವ ಬಂಟರ ಮಾಹಿತಿ ಕೋಶವನ್ನು ನಿರ್ಮಿಸಲಾಗುತ್ತಿದ್ದು, ಎಲ್ಲರೂ ಸಹಕರಿಸಬೇಕು’ ಎಂದರು.

ಇಂಟರ್‌ನ್ಯಾಷನಲ್‌ ಬಂಟ್ಸ್‌ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪಾಲಿಕೆ‌ ಪ್ರತಿಪಕ್ಷದ ನಾಯಕ ಪ್ರವೀಣಚಂದ್ರ ಆಳ್ವ, ಸದಸ್ಯರಾದ ಸುಮಂಗಲಾ ರಾವ್, ಅನಿಲ್‌ ಕುಮಾರ್, ಉದ್ಯಮಿಗಳಾದ ಪ್ರಕಾಶ ಶೆಟ್ಟಿ, ಕನ್ಯಾನ‌ ಸದಾಶಿವ ಶೆಟ್ಟಿ,  ಬಿ.ನಾಗರಾಜ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಮನೋಹರ ಎಸ್‌. ಶೆಟ್ಟಿ,  ಗಿರೀಶ್ ಶೆಟ್ಟಿ, ಮಾತೃ ಸಂಘದ ಪ್ರಧಾನ‌ ಕಾರ್ಯದರ್ಶಿ ವಸಂತ ಶೆಟ್ಟಿ,  ಮಂಗಳೂರು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಹೈದರಾಬಾದ್ ಬಂಟರ ಸಂಘದ ಮಾಜಿ ಅಧ್ಯಕ್ಷ ರತ್ನಾಕರ‌ ರೈ, ಬಯಲು ರಂಗ ಮಂದಿರ ನಿರ್ಮಾತೃ ಸುಷ್ಮಾ ಮಲ್ಲಿ, ಆಶಾ ಜ್ಯೋತಿ ರೈ, ಕಟ್ಟಡ ಸಮಿತಿ ಅಧ್ಯಕ್ಷ ಡಿ.ಸುಧಾಕರ ಶೆಟ್ಟಿ ಮುಗ್ರೋಡಿ, ಸಂಚಾಲಕ ಎಂ.ಎಸ್.ಶೆಟ್ಟಿ ಸರಪಾಡಿ, ಪ್ರಧಾನ ಕಾರ್ಯದರ್ಶಿ ಸುಧಾಕರ ಆಳ್ವ ಕಾವೂರು, ಖಜಾಂಚಿ ಶಂಭು ಶೆಟ್ಟಿ ಕಾಮಣ್ಣಮನೆ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಯಾ ಎಸ್‌.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೇಖಾ ವಿ.ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ‌ ಶೆಟ್ಟಿ, ‘ನೂತನ ಭವನದಲ್ಲಿ ಬೋಜನಾಲಯ, ಮಿನಿಹಾಲ್, ನಿತ್ಯಾನಂದ ಸ್ವಾಮಿ ಮಂದಿರ, ಮೊದಲ ಮಹಡಿಯಲ್ಲಿ ವಿಶಾಲ ಸಭಾಭವನಗಳು ನಿರ್ಮಾಣಗೊಳ್ಳಲಿವೆ’ ಎಂದರು.

‘23 ವರ್ಷಗಳ ಹಿಂದೆ ಆರಂಭವಾದ ಕಾವೂರು ಬಂಟರ ಸಂಘವು ಕೂಳೂರು ಕೆಪಿಟಿವರೆಗೆ ಹಾಗೂ ಪಚ್ಚನಾಡಿಯಿಂದ‌ ಮರವೂರಿನವರೆಗೆ 9 ಗ್ರಾಮಗಳ ವ್ಯಾಪ್ತಿಯ 1,450 ಸದಸ್ಯರನ್ನು ಹೊಂದಿದೆ’ ಎಂದು ತಿಳಿಸಿದರು.

‘ಬಂಟರ ನಿಗಮ ರಚಿಸದಿದ್ದರೆ ಹೋರಾಟ’

‘ವಿಶ್ವ ಬಂಟರ ಸಮ್ಮೇಳನಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟರಿಗೆ ಪ್ರತ್ಯೇಕ ನಿಗಮ ಒದಗಿಸುವ ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖ ಮಾಡಿಲ್ಲ. ಸಮಾಜಕ್ಕೆ ನಿಗಮವನ್ನು ಪಡೆಯಲು ಬಂಟ ಸಮುದಾಯದ ಎಲ್ಲರೂ ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ನಿಗಮಕ್ಕೆ ₹ 500 ಕೋಟಿ ನೀಡಲು ಸಾಧ್ಯವಾಗದಿದ್ದರೆ ₹ 250 ಕೋಟಿ ಅನುದಾನವನ್ನಾದರೂ ನೀಡಲಿ. ಸಮಾಜದ ಶೇ 50ರಷ್ಟು ಮಂದಿ ಈಗಲೂ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.  ಈ ಬೇಡಿಕೆ ಈಡೇರದಿದ್ದರೆ ಬೀದಿಗೆ ಇಳಿಯುವುದು ಅನಿವಾರ್ಯ’ ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ ತಿಳಿಸಿದರು.

ಅಂಕಿ ಅಂಶ

33000 ಚ.ಅಡಿ ಕಾವೂರಿನಲ್ಲಿ ನಿರ್ಮಾಣಗೊಳ್ಳುವ ಬಂಟರ ಭವನದ ವಿಸ್ತೀರ್ಣ 2600  ಬಂಟರ ಭವನದ ಮೊದಲ‌ ಮಹಡಿಯ ಸಭಾಭವನದಲ್ಲಿನ ಆಸನ ವ್ಯವಸ್ಥೆ ₹ 10 ಕೋಟಿ ನೂತನ ಕಟ್ಟಡಕ್ಕೆ ತಗಲುವ ಅಂದಾಜು ವೆಚ್ಚ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT