ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಿಎಗೆ ತೆರೆದುಕೊಂಡ ಕಾವೂರು ಕಾಲೇಜು

ಹಸಿರು ತುಂಬಿದ ಸುಂದರ ಪರಿಸರದಲ್ಲಿ ಕ್ಯಾಂಪಸ್‌; ಸ್ಕಿಲ್ ಇಂಡಿಯಾದತ್ತ ಚಿತ್ತ
Published 22 ಮೇ 2024, 7:14 IST
Last Updated 22 ಮೇ 2024, 7:14 IST
ಅಕ್ಷರ ಗಾತ್ರ

ಮಂಗಳೂರು: ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಲ್ಲಿಯ ವರೆಗಿದ್ದ ಮೂರು ವಿಭಾಗಗಳ ಜೊತೆ ಈ ವರ್ಷದಿಂದ ಬಿಸಿಎ (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್‌) ಕೋರ್ಸ್ ಕೂಡ ಸೇರಿಕೊಂಡಿದೆ.

2002ರಿಂದ ಕಾರ್ಯಾಚರಿಸುತ್ತಿರುವ ಕಾಲೇಜಿನಲ್ಲಿ ಈ ವರೆಗೆ ಬಿಎ, ಬಿಕಾಂ ಮತ್ತು ಬಿಬಿಎ ಕೋರ್ಸ್‌ಗಳು ಮಾತ್ರ ಇದ್ದವು. 30 ವಿದ್ಯಾರ್ಥಿಗಳಿಗೆ ಅವಕಾಶ ಇರುವ ಬಿಸಿಎ ಕೋರ್ಸ್‌ಗೆ ಈಗ ಮಾನ್ಯತೆ ಸಿಕ್ಕಿದ್ದು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. 30 ಕಂಪ್ಯೂಟರ್‌ಗಳು ಕೂಡ ವಿಭಾಗಕ್ಕೆ ಬಂದಿವೆ.

ಕಾವೂರಿನಿಂದ ಕೂಳೂರಿಗೆ ಹೋಗುವಾಗ ಅರ್ಧ ಕಿಲೊಮೀಟರ್‌ಗೂ ಮೊದಲು ಎಡಬದಿಯಲ್ಲಿ ಕಾಂಕ್ರಿಟ್ ರಸ್ತೆ ಮೂಲಕ ನೂರಿನ್ನೂರು ಮೀಟರ್‌ ದೂರ ಸಾಗಿದರೆ ಹೈಸ್ಕೂಲ್‌, ಪಿಯು ಕಾಲೇಜು ಮತ್ತು ಪದವಿ ಕಾಲೇಜು ಜೊತೆಯಾಗಿರುವ ಆವರಣ ಸಿಗುತ್ತದೆ. ಕ್ರೀಡಾ ಚಟುವಟಿಕೆಗೆ ತೆರೆದ ಮೈದಾನ, ಸುತ್ತಲೂ ಮರ ಗಿಡಗಳಿಂದ ಕಂಗೊಳಿಸುವ ಸುಂದರ ಪರಿಸರದಲ್ಲಿ ಈ ಶಿಕ್ಷಣ ಸಂಸ್ಥೆ ಇದೆ. ಒಟ್ಟು 18 ಮಂದಿ ಉಪನ್ಯಾಸಕರಲ್ಲಿ 12 ಮಂದಿ ‘ಅತಿಥಿ’ಗಳು. ಆಡಳಿತ ವಿಭಾಗದಲ್ಲಿ ಇಬ್ಬರು ಸಿಬ್ಬಂದಿಯೂ ಇದ್ದಾರೆ.

ಕ್ರೀಡಾ ಸಾಧಕ ವಿದ್ಯಾರ್ಥಿಗಳು ಇದ್ದರೂ ದೈಹಿಕ ಶಿಕ್ಷಣ ವಿಭಾಗಕ್ಕೆ ನಿರ್ದೇಶಕರಿಲ್ಲ. ದೂರ ಅಂತರದ ಓಟಗಾರ ಲಾರಾ ಫ್ರಾನ್ಸಿಸ್ ಸಿದ್ದಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ 1500 ಮೀಟರ್ಸ್ ಓಟದಲ್ಲಿ ಚಾಂಪಿಯನ್ ಆಗಿದ್ದು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಖಾಸಗಿ ಸಂಸ್ಥೆ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ 3ನೇ ಸ್ಥಾನ ಗಳಿಸಿದ್ದಾರೆ. 400 ಮೀಟರ್ಸ್ ಮತ್ತು 800 ಮೀಟರ್ಸ್ ಓಟದಲ್ಲೂ ಸಾಧನೆ ಮಾಡುತ್ತಿದ್ದಾರೆ. ಅಂಜಲಿ ಜೋಗಿ ಕರಾಟೆಯಲ್ಲಿ ಮಂಜುನಾಥ ಬಾಕ್ಸಿಂಗ್‌ನಲ್ಲಿ ಹೆಸರು ಮಾಡಿದ್ದಾರೆ.

‘ಕನಿಷ್ಠ 1 ಸಾವಿರ ವಿದ್ಯಾರ್ಥಿಗಳು ಇದ್ದರೆ ಮಾತ್ರ ದೈಹಿಕ ಶಿಕ್ಷಣ ವಿಭಾಗಕ್ಕೆ ನಿರ್ದೇಶಕರನ್ನು ನೀಡುವ ಪದ್ಧತಿ ಜಾರಿಗೆ ಬಂದ ನಂತರ ಇಲ್ಲಿನ ನಿರ್ದೇಶಕರನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಈಗ ಅಧ್ಯಾಪಕರೊಬ್ಬರು ದೈಹಿಕ ಶಿಕ್ಷಣ ವಿಭಾಗದ ಉಸ್ತುವಾರಿಯಲ್ಲಿದ್ದಾರೆ’ ಎಂದು ಪ್ರಾಚಾರ್ಯೆ ಗೀತಾ ಎಂ.ಎಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಈ ಕಾಲೇಜು ಬಾಡಿಗೆ ಕಟ್ಟಡಲ್ಲಿ ಕಾರ್ಯಾಚರಿಸುತ್ತಿತ್ತು. ಸ್ವಂತ ಕಟ್ಟಡ ಆದ ನಂತರ ಸುಸಜ್ಜಿತವಾಗಿದೆ. ಸ್ವಲ್ಪ ಒಳಪ್ರದೇಶದಲ್ಲಿದ್ದರೂ ಉತ್ತಮ ಫಲಿತಾಂಶ ಗಳಿಸಲು ಸಾಧ್ಯವಾಗಿದೆ. ಈ ಬಾರಿ ಬಿಎ ಐದನೇ ಸೆಮಿಸ್ಟರ್‌ನಲ್ಲಿ ಶೇ 94.74 ಫಲಿತಾಂಶ ಬಂದಿದೆ. ಬಿಬಿಎಯಲ್ಲಿ ಶೇ 83 ಮತ್ತು ಬಿಕಾಂನಲ್ಲಿ ಶೇ 70 ಫಲಿತಾಂಶ ಗಳಿಸಲು ಸಾಧ್ಯವಾಗಿದೆ’ ಎಂದು ಗೀತಾ ವಿವರಿಸಿದರು.

ಸ್ಕಿಲ್ ಇಂಡಿಯಾ ಕೋರ್ಸ್‌ನತ್ತ...

ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಯತ್ತ ಗಮನ ಹರಿಸಲು ಕಾಲೇಜು ಮುಂದಾಗಿದೆ. ಇದಕ್ಕಾಗಿ ಐಟಿಐ ಜೊತೆ ಒಪ್ಪಂದ ಮಾಡುವ ಚಿಂತನೆ ಇದೆ. ಈ ವರ್ಷವೇ ಇದು ಸಾಧ್ಯವಾಗುವ ಭರವಸೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲ ಆಗಲಿದೆ. ಕೌಶಲಾಧಾರಿತ ತರಬೇತಿ ನೀಡಲಾಗುತ್ತಿದ್ದು ಪ್ಲೇಸ್‌ಮೆಂಟ್ ಮತ್ತು ಉದ್ಯೋಗಾರ್ಥಿಗಳಿಗೆ ನೆರವಿನ ಸೌಲಭ್ಯ ಇದೆ. ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಕ್ಯಾಂಪಸ್‌ನಲ್ಲಿ ವೈಫೈ ಸೌಲಭ್ಯ ಇದೆ’ ಎಂದು ಪ್ರಾಚಾರ್ಯರು ತಿಳಿಸಿದರು.

‘ಸರ್ಕಾರ, ಅರೆ ಸರ್ಕಾರ ಮತ್ತು ವಿಶ್ವವಿದ್ಯಾಲಯ ಶುಲ್ಕದ ಪೈಕಿ ಅರೆಸರ್ಕಾರಿ ಶುಲ್ಕದಲ್ಲಿ ರಿಯಾಯಿತಿ ನೀಡಲು ಕಾಲೇಜು ಆಡಳಿತಕ್ಕೆ ಅಧಿಕಾರ ಇದೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಹೀಗಾಗಿ ಇತರ ಸರ್ಕಾರಿ ಕಾಲೇಜಿಗಿಂತ ಇಲ್ಲಿ ಶುಲ್ಕ ಪ್ರಮಾಣ ಕಡಿಮೆ. ಎಲ್ಲ ಕೋರ್ಸ್‌ಗಳಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದ್ದು ಎನ್‌ಎಸ್‌ಎಸ್‌, ಕಲೆ, ರೋವರ್ಸ್‌–ರೇಂಜರ್ಸ್‌, ಯುವ ರೆಡ್ ಕ್ರಾಸ್‌ನಂಥ ಚಟುವಟಿಕೆಯಲ್ಲೂ ಕಾಲೇಜು ಮುಂಚೂಣಿಯಲ್ಲಿ ಇದೆ. ವಿದ್ಯಾರ್ಥಿನಿಯರ ಶುಲ್ಕವನ್ನು ವಾಪಸ್ ನೀಡುವ ಯೋಜನೆಯೂ ಇದೆ’ ಎಂದು ಅವರು ವಿವರಿಸಿದರು.

ಸಂಪರ್ಕ ಸಂಖ್ಯೆ: 08242482036

ಇಮೇಲ್‌: gfgckavoor@gmail.com

ಆನ್‌ಲೈನ್‌ ಪ್ರವೇಶಕ್ಕೆ: https://uucms.karnataka.gov.in/login

ಮಾನವೀಯತೆ; ದತ್ತು ಯೋಜನೆ

ಕಾಲೇಜಿನ ಅಧ್ಯಾಪಕರು ಪಾಠ ಮಾಡಿ ವಿದ್ಯಾರ್ಥಿಗಳ ಜ್ಞಾನದಾಹ ತಣಿಸುವುದರ ಜೊತೆಯಲ್ಲಿ ಆರ್ಥಿಕ ಸಂಕಷ್ಟವಿದ್ದರೆ ನೆರವು ನೀಡುವುದಕ್ಕೂ ಮುಂದಾಗುತ್ತಿದ್ದಾರೆ. ಈಚೆಗೆ ತಂದೆ ತೀರಿಹೋದ ವಿದ್ಯಾರ್ಥಿನಿಯ ಶುಲ್ಕವನ್ನು ಅಧ್ಯಾಪಕರೇ ಭರಿಸಿದ್ದಾರೆ. 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಧ್ಯಾಪಕರ ಪ್ರಾಯೋಜಕತ್ವದಲ್ಲಿ ಕಲಿಯುತ್ತಿದ್ದಾರೆ. ಅಧ್ಯಾಪಕಿಯೊಬ್ಬರು ಹೊರ ಜಿಲ್ಲೆಯ ಇಬ್ಬರ ಪ್ರಾಯೋಜಕತ್ವ ವಹಿಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT