ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಂಕಣಿ ಸಾಹಿತಿ ಫಾ. ಮಾರ್ಕ್‌ ವಲ್ದರ್‌ ನಿಧನ

Published 8 ಮಾರ್ಚ್ 2024, 6:16 IST
Last Updated 8 ಮಾರ್ಚ್ 2024, 6:16 IST
ಅಕ್ಷರ ಗಾತ್ರ

ಮಂಗಳೂರು: ಕೊಂಕಣಿ ಸಾಹಿತಿ, ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಮಾರ್ಕ್‌ ವಲ್ದರ್‌ (87) ಗುರುವಾರ ಸಂಜೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನರಾದರು.

ಜೆಪ್ಪು ಜೂಜ್‌ ವಾಸ್ ಹೋಮ್‌ನಲ್ಲಿ ವಾಸವಾಗಿದ್ದ ಅವರನ್ನು ಅನಾರೋಗ್ಯದ ಕಾರಣ ಈಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೆರ್ಮುದೆಯಲ್ಲಿ ಜನಿಸಿದ ಮಾರ್ಕ್‌ 1966ರಲ್ಲಿ ಧರ್ಮಗುರುವಾಗಿ ನೇಮಕವಾಗಿದ್ದರು.

ಅಮ್ಮೆಂಬಳ, ತಣ್ಣೀರುಬಾವಿ, ಸಿದ್ದಕಟ್ಟೆ ಮತ್ತು ಗಂಟಲಕಟ್ಟೆಯಲ್ಲಿ ಧರ್ಮಗುರುವಾಗಿ, ಬಾರ್ಕೂರು, ಕಾಸಿಯಾ ಮತ್ತು ಶಿರ್ವದಲ್ಲಿ ಸಹಾಯಕ ಧರ್ಮಗುರುವಾಗಿ ಕಾರ್ಯನಿರ್ವಹಿಸಿದ್ದ ಅವರು 1973ರಿಂದ 1985ರ ವರೆಗೆ ಕೊಂಕಣಿ ಸಾಪ್ತಾಹಿಕ ‘ರಾಕ್ಣೊ’ದ ಸಂಪಾದಕಾಗಿದ್ದರು. ಈ ಸಂದರ್ಭದಲ್ಲಿ ಅವರು ಮೈಸೂರು ವಿವಿ ಮತ್ತು ಮುಂಬೈನ ಸೇಂಟ್ ಜೇವಿಯರ್ಸ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಿಂದ ಪತ್ರಿಕೋದ್ಯಮ ಡಿಪ್ಲೋಮಾ ಗಳಿಸಿದ್ದರು.  

ಆಲಂಗಾರು ಮೌಂಟ್ ರೊಜಾರಿ ಸಂಸ್ಥೆಯಲ್ಲಿ 8 ವರ್ಷ ಚಾಪ್ಲೇನ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಯೇಸು ಕ್ರಿಸ್ತನ ಬಗ್ಗೆ ಪುಸ್ತಕಗಳನ್ನು ಬರೆದಿದ್ದ ಮಾರ್ಕ್‌ ಅವರು ಕೊಂಕಣಿ ಲೇಖಕರ ಕಾದಂಬರಿ ಮತ್ತು ಇತರ ಕೃತಿಗಳ ಸಂಪಾದಕತ್ವ ವಹಿಸಿದ್ದರು.

ಯುವ ತಲೆಮಾರಿನವರಿ ಗಾಗಿ ನೈತಿಕ ಪಾಠದ ‘ಪ್ರೇಮ ಮತ್ತು ಜೀವನ’ ಕೈಪಿಡಿ ರಚಿಸಿದ್ದ ಅವರು ಕೊಂಕಣಿ ಜಾನಪದ, ಮಂಗಳೂರು ಹಾಗೂ ಗೋವಾ ಕೊಂಕಣಿ ಸಾಹಿತ್ಯದ ಇತಿಹಾಸ ಕುರಿತ ‘ಅಮರ್‌ ಕೊಂಕಣಿ’, ಆರೋಗ್ಯಕ್ಕೆ ಸಂಬಂಧಿಸಿದ ಪ್ರಬಂಧಗಳ ಸಂಕಲನ ‘ಬೊರಿ ಭಲಾಯ್ಕಿ’, ಕ್ರೈಸ್ತ ಮಿಷನರಿಗಳ ಕುರಿತ ಐತಿಹಾಸಿಕ ಪ್ರಬಂಧಗಳ ಸಂಕಲನ  ‘ಸುವಾರ್ತಾ ಪ್ರಸಾರ್‌’ನ ಸಂಪಾದಕರಾಗಿದ್ದರು. ವಿ.ಜೆ.ಪಿ ಸಲ್ಡಾನ, ಎ.ಟಿ.ಲೋಬೊ, ಜೆ.ಎಸ್‌.ಅಳ್ವಾರಿಸ್‌, ಎಡ್ವಿನ್ ಜೆ.ಎಫ್‌ ಡಿಸೋಜ ಮತ್ತು ಜೆರಿ ಕುಲಶೇಖರ ಅವರ ಕಾದಂಬರಿಗಳನ್ನು ಪ್ರಕಟಗೊಳಿಸಿದ್ದರು.  

ಮಾರ್ಕ್ ಅವರ ಅಂತಿಮ ಸಂಸ್ಕಾ ರದ ವಿಧಿವಿಧಾನಗಳು ವೆಲೆನ್ಸಿ ಯಾದ ಸೇಂಟ್ ವಿನ್ಸೆಂಟ್ ಫೆರೆರ್ ಚರ್ಚ್‌ ಆವರಣದಲ್ಲಿ ಇದೇ 9ರಂದು ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿವೆ ಎಂದು ಧರ್ಮಪ್ರಾಂತ್ಯದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT