ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಮುವಾದ, ಮೌಢ್ಯ ನೀಗಲು ಗಟ್ಟಿ ವಿಚಾರ ದೀವಿಗೆ: ಕೆ.ಟಿ.ಗಟ್ಟಿ

ನುಡಿ ನಮನದಲ್ಲಿ ಚಿಂತಕರ ಅಭಿಮತ
Published 25 ಫೆಬ್ರುವರಿ 2024, 4:39 IST
Last Updated 25 ಫೆಬ್ರುವರಿ 2024, 4:39 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯನ್ನು ಕಾಡುತ್ತಿರುವ ಕೋಮುವಾದ, ಮರೆಯಾಗುತ್ತಿರುವ ವೈಚಾರಿಕ ಪ್ರಜ್ಞೆ, ಸೊರಗುತ್ತಿರುವ ವೈಜ್ಞಾನಿಕ ಮನೋಭಾವ, ಹೆಚ್ಚುತ್ತಿರುವ ಮೌಢ್ಯಗಳನ್ನು ಎದುರಿಸುವ ಸವಾಲಿನ ಕುರಿತ ಜಿಜ್ಞಾಸೆಗೆ ಕೆ.ಟಿ.ಗಟ್ಟಿ ಅವರ ನುಡಿನಮನ ಕಾರ್ಯಕ್ರಮ ವೇದಿಕೆಯಾಗಿತು.

ಕರಾವಳಿಯಲ್ಲಿ ಸಾಮರಸ್ಯ ಉಳಿಸಲು ಹಾಗೂ ಜನರಲ್ಲಿ ವೈಚಾರಿಕ ಮನೋಭಾವ ರೂಪಿಸಲು ಕೆ.ಟಿ.ಗಟ್ಟಿಯವರಂತೆ ದೃಢ ನಿಲುವು ಹಾಗೂ ಗಟ್ಟಿ ವಿಚಾರಧಾರೆಯನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಅವರ ಅಭಿಮಾನಿಗಳು ಹಾಗೂ ಸಾಹಿತಿಗಳು ‍ತುಳು ಪರಿಷತ್‌ ಇಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಶಿವರಾಮ ಶೆಟ್ಟಿ, ‘ಕರಾವಳಿಯ ಗಾಳಿಯಲ್ಲೂ ಸಮಾಜವನ್ನೇ ನಿರ್ನಾಮ‌ಮಾಡುವ ಕೊಮುವಾದದ ಸೋಂಕು ತುಂಬಿದೆ.‌ ಇಲ್ಲಿ ಮೆರೆಯುತ್ತಿರುವ ಮೌಢ್ಯಗಳನ್ನು ಮೀರಲು, ಕೋಮುವಾದವನ್ನು ಹತ್ತಿಕ್ಕಲು ಕೆ.ಟಿ.ಗಟ್ಟಿ ಹಾಗೂ ಶಿವರಾಮ ಕಾರಂತರು ತೋರಿದ ದಾರಿಯಲ್ಲಿ ಸಾಗಬೇಕಿದೆ’ ಎಂದರು.

‘ತಮ್ಮ ಕಾದಂಬರಿಗಳಲ್ಲಿ ಬಡತನ, ನೋವು, ಸಂಕಟ ಹಾಗೂ ಬದುಕಿನ ಸಂಬಂಧಗಳ ಚಿತ್ರಣದೊಂದಿಗೆ  ಅವರು ಕಟ್ಟಿಕೊಟ್ಟ ಭಾವ ಪ್ರಪಂಚ ಜನರನ್ನು ಆಕರ್ಷಿಸಿತ್ತು.  ಅವರ ಕಾದಂಬರಿಗಳ ಪಾತ್ರಗಳಲ್ಲಿ ಓದುಗರು ತಮ್ಮ ಬಿಂಬವನ್ನೇ ಕಾಣುತ್ತಿದ್ದರು. ಒಂದು ಕಾಲಘಟ್ಟದಲ್ಲಿ ಶಿವರಾಮ ಕಾರಂತ, ಎಸ್‌.ಎಲ್‌.ಬೈರಪ್ಪ ಅವರಿಗಿಂತಲೂ  ದೊಡ್ಡ ಓದುಗ ವರ್ಗವನ್ನು ಹೊಂದಿದ್ದ ಕಾದಂಬರಿಕಾರ ಅವರಾಗಿದ್ದರು’ ಎಂದು ತಿಳಿಸಿದರು. 

ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ, 'ಜೀವಪರ‌ ಸಾಹಿತ್ಯವನ್ನು ನಾವು ಎಷ್ಟರಮಟ್ಟಿಗೆ ಉಳಿಸಿಕೊಳ್ಳಬಲ್ಲೆವು ಎಂಬ ಆತ್ಮಶೋಧನೆಗೆ ಈ ಕಾರ್ಯಕ್ರಮ ಪ್ರೇರಣೆ ಆಗಬೇಕು’ ಎಂದರು. 

ಮೂಲ್ಕಿ ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ವಾಸುದೇವ ಬೆಳ್ಳೆ, ‘20ನೇ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿಯನ್ನು ಹೆಗಲಿಕೇರಿಸಿಕೊಂಡ ಗಟ್ಟಿ ಅವರ ಬದುಕು ಬಾಲ್ಯದ ಕಹಿ ಘಟನೆಗಳು, ಜಾತಿ ಕಾರಣಕ್ಕಾಗಿ ಎದುರಿಸಿದ ಅವಮಾನಗಳಿಂದ ಮಾಗಿತ್ತು.  ಹಾಗಾಗಿಯೇ  ಅವರ ಬರಹಗಳಲ್ಲೂ ಬಡ ಮಧ್ಯಮ ವರ್ಗದ ಜನರ ಬವಣೆಯ ಬದುಕು, ಹೆಣ್ಣಿನ ಶೋಷಣೆಗಳನ್ನು ಬಿಂಬಿಸಿದ್ದಾರೆ.  ವೈಚಾರಿಕತೆಯ ಮಹತ್ವವನ್ನು ಸಾರಿದ್ದಾರೆ’ ಎಂದರು.

ಗಟ್ಟಿ ಅವರ ಪುತ್ರ ಸತ್ಯಜಿತ್‌, ‘ಅಪ್ಪನ‌ ಅಗಾಧ ಪ್ರಭಾವ ನನ್ನ ಮೇಲೂ ಆಗಿದೆ. ಅನಾನಸು ಹಣ್ಣನ್ನು ಕತ್ತರಿಸುವುದರಿಂದ ಹಿಡಿದು  ಷೇಕ್ಸ್‌ಪಿಯರ್ ಚಿಂತನೆಗಳವರೆಗೆ ಅವರಿಂದ ಬಹಳಷ್ಟನ್ನು ಕಲಿತಿದ್ದೇನೆ. ಕೈ ತುಂಬಾ ಸಂಬಳ ತರುತ್ತಿದ್ದ ನೌಕರಿ  ತೊರೆದು ಬರೆದೇ ಬದುಕು ಕಟ್ಟಿಕೊಳ್ಳುತ್ತೇನೆ ಎಂಬುದನ್ನು ಆಯ್ಕೆಮಾಡಲು ಅವರಿಗೆ ಹೇಗೆ ಧೈರ್ಯಬಂತು,  ಹೇಗೆ ಅಷ್ಟು ನಿರಾಳರಾಗಿ ಬರೆದರು ಎಂಬ ಪ್ರಶ್ನೆ ನನ್ನನ್ನು ಈಗಲೂ ಕಾಡುತ್ತಿದೆ’ ಎಂದರು. 

ಚೇತನ್‌ ಸೋಮೇಶ್ವರ, ‘ಮಾನವ ಕಲ್ಯಾಣದ ಅಭೀಪ್ಸೆ ಪ್ರತಿಪಾದಿಸಿದವರು ಕೆ.ಟಿ.ಗಟ್ಟಿ. ಬಡವರಿಗಾಗಿ ದುಡಿದ, ಸ್ವಾಭಿಮಾನಕ್ಕಾಗಿ ತುಡಿದ ಗಟ್ಟಿ ಅವರ ಹಾಗೂ ನನ್ನ ತಂದೆ ಅಮೃತ ಸೋಮೇಶ್ವರರ ಸಾಹಿತ್ಯಕ್ಕೆ ನ್ಯಾಯ ಒದಗಿಸುವಂತಹ  ವಿಮರ್ಶೆ ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕಿಯರಾದ ಪಿ.ಉಷಾ ರೈ,  ಮೀನಾಕ್ಷಿ ರಾಮಚಂದ್ರ, ಮೀನಾಕ್ಷಿ ಕಳವಾರು, ಉಪನ್ಯಾಸಕ ಸಿ.ಕೆ.ಮಾಧವ, ನಂದಗೋಪಾಲ್‌, ಮಮತಾಗಟ್ಟಿ ಮಾತನಾಡಿದರು. ತಾರಾನಾಥ ಕಾಪಿಕಾಡ್‌ ಅವರು ನಿರೂಪಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT