ಗುರುವಾರ , ಆಗಸ್ಟ್ 5, 2021
23 °C
ಕುವೈತ್‌ನಲ್ಲಿ ವಲಸೆ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಿದ್ಧತೆ

50 ಸಾವಿರ ಕನ್ನಡಿಗರಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್ ಭೀತಿಯಿಂದ ಉದ್ಯೋಗ ಕಳೆದುಕೊಳ್ಳುವ ಸಂಕಷ್ಟ ಒಂದೆಡೆಯಾಗಿದ್ದರೆ, ಇದೀಗ ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಸಂಸದೀಯ ಸಮಿತಿ ವಿದೇಶಿ ವಲಸೆ ಮೀಸಲಾತಿ ಮಸೂದೆಗೆ ಅಂಗೀಕಾರ ನೀಡಿದೆ. ಇದರಿಂದಾಗಿ ಎಂಟು ಲಕ್ಷ ಭಾರತೀಯರು ಕುವೈತ್ ತೊರೆಯಬೇಕಾಗಲಿದೆ ಎಂದು ಹೇಳಲಾಗುತ್ತಿದ್ದು, ಈ ಪೈಕಿ 50 ಸಾವಿರ ಜನರು ಕನ್ನಡಿಗರಾಗಿದ್ದಾರೆ.

ಭಾರತೀಯ ಸಮುದಾಯದ ಜನರು ಕುವೈತ್‌ನ ಒಟ್ಟು ಜನಸಂಖ್ಯೆಯ ಶೇ 15ರಷ್ಟು ಮೀರದಂತೆ ಕಾನೂನು ರೂಪಿಸಲಾಗಿದೆ. ಸದ್ಯ ಕುವೈತ್‌ನ ಜನಸಂಖ್ಯೆ 43 ಲಕ್ಷವಿದ್ದು, ಅಲ್ಲಿ 30 ಲಕ್ಷ ಮಂದಿ ವಿದೇಶೀಯರೇ ಇದ್ದಾರೆ. ಇದರಲ್ಲಿ ಭಾರತೀಯರ ಸಂಖ್ಯೆ 14 ಲಕ್ಷ. ಶೇ 15ರಷ್ಟು ಮೀಸಲಾತಿ ಜಾರಿಯಾದರೆ, ಸುಮಾರು 8 ಲಕ್ಷ ಭಾರತೀಯರು ಕುವೈತ್ ತೊರೆಯಬೇಕಾಗುತ್ತದೆ.

ವಿದೇಶಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಕುವೈತ್ ಸಮಗ್ರ ಯೋಜನೆಯನ್ನು ರೂಪಿಸುತ್ತಿರುವುದು ಭಾರತೀಯ ಸಮುದಾಯಕ್ಕೆ ದೊಡ್ಡ ಆಘಾತ ನೀಡಿದೆ ಎಂದು ವರದಿ ತಿಳಿಸಿದೆ.

ವೈದ್ಯರು, ಪರಿಣತ ಕೆಲಸಗಾರರು ಬೇಕು:

ಕುವೈತ್ ಜನಸಂಖ್ಯೆ ಶೇ 70 ರಷ್ಟು ವಲಸಿಗರಾಗಿದ್ದಾರೆ. ಅದರಲ್ಲೂ ಹೆಚ್ಚು ಗಂಭೀರ ವಿಷಯವೆಂದರೆ, ದೇಶದಲ್ಲಿರುವ 33.5 ಲಕ್ಷ ವಲಸಿಗರ ಪೈಕಿ 13 ಲಕ್ಷ ಮಂದಿ ಅನಕ್ಷರಸ್ಥರು ಅಥವಾ ಅವರಿಗೆ ಕೇವಲ ಓದಲು ಮತ್ತು ಬರೆಯಲು ಮಾತ್ರ ಗೊತ್ತು. ಇಂಥ ಜನರು ಕುವೈತ್ ಗೆ ಬೇಕಾಗಿಲ್ಲ ಎಂದು ಕುವೈತ್‌ ಅಸೆಂಬ್ಲಿ ಸ್ಪೀಕರ್ ಮರ್ಝೂಕ್ ಅಲ್-ಗಾನಿಮ್ ಅವರು, ಕುವೈತ್ ಟಿವಿಗೆ ತಿಳಿಸಿದ್ದಾರೆ.

‘ನಾವು ವೈದ್ಯರನ್ನು ಮತ್ತು ಪರಿಣತ ಕೆಲಸಗಾರರನ್ನು ನೇಮಿಸಿಕೊಳ್ಳುವುದರಲ್ಲಿ ಅರ್ಥವಿದೆ, ಅಕೌಶಲ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗದು. ನಮ್ಮ ಜನಸಂಖ್ಯೆಯ ವೈರುಧ್ಯಕ್ಕೆ ಇದು ಕಾರಣವಾಗಿದೆ’ ಎಂದು ಗಾನಿಮ್ ಹೇಳಿದ್ದಾರೆ.

ಕುವೈತ್‌ ಉದ್ಯಮದಿಂದ ವಿರೋಧ: ಭಾರತಕ್ಕೆ ಹಣ ಬರುವ ವಿದೇಶಗಳ ಪಟ್ಟಿಯಲ್ಲಿ ಕುವೈತ್ ಅಗ್ರಸ್ಥಾನದಲ್ಲಿದೆ. 2018ರಲ್ಲಿ ಭಾರತಕ್ಕೆ ಕುವೈತ್‌ನಿಂದ 4.8 ಬಿಲಿಯ ಡಾಲರ್ (ಸುಮಾರು ₹36ಸಾವಿರ ಕೋಟಿ) ಹಣ ಹರಿದು ಬಂದಿದೆ.

ನಿರ್ಮಾಣ, ಹೋಟೆಲ್‌, ತೈಲೋತ್ಪನ್ನ ಉದ್ಯಮ ಸೇರಿದಂತೆ ಕುವೈತ್‌ಗೆ ಆದಾಯ ತಂದು ಕೊಡುವ ಪ್ರಮುಖ ಕ್ಷೇತ್ರಗಳಲ್ಲಿ ಭಾರತೀಯ ಮೂಲದವರ ಪಾತ್ರ ಮಹತ್ತರವಾಗಿದೆ. ಹೀಗಾಗಿ ಹೊಸ ಮಸೂದೆ ಜಾರಿಗೆ ಬಂದಲ್ಲಿ, ಕುವೈತ್‌ನ ಅರ್ಥ ವ್ಯವಸ್ಥೆಗೆ ತೊಂದರೆ ಆಗಲಿದೆ ಎನ್ನುವ ಮೂಲಕ ಕುವೈತ್‌ನ ಉದ್ಯಮ ಕ್ಷೇತ್ರ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.