ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಶೇ10ಕ್ಕೆ ಇಳಿದ ಪೆಟ್ರೋಲ್, ಡೀಸೆಲ್ ಬಳಕೆ

ಹೆಚ್ಚುತ್ತಿದೆ ಅಡುಗೆ ಅನಿಲಕ್ಕೆ ಬೇಡಿಕೆ: ಶನಿವಾರ ಮಾರಾಟವೇ ಇಲ್ಲ
Last Updated 28 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಮಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯು ಕುಸಿತವಾಗಿದ್ದರೂ, ‘ಲಾಕ್‌ಡೌನ್’ ಪರಿಣಾಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 90ರಷ್ಟು ಪೆಟ್ರೋಲ್–ಡೀಸೆಲ್ ಮಾರಾಟ ಇಳಿಕೆಯಾಗಿದೆ. ಶನಿವಾರ ಬಹುತೇಕ ಶೂನ್ಯಕ್ಕೆ ತಲುಪಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಐಒಸಿಎಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಹಾಗೂ ಇತರ ಖಾಸಗಿ ಕಂಪನಿಗಳ ಒಟ್ಟು 400 ಪಂಪ್‌ (ಔಟ್‌ಲೆಟ್)ಗಳಿವೆ. ಪ್ರತಿನಿತ್ಯ ಸುಮಾರು 11 ಲಕ್ಷ ಲೀಟರ್‌ನಷ್ಟು ವ್ಯಾಪಾರ ನಡೆಯುತ್ತದೆ. ಈ ಪೈಕಿ ಶೇ60ರಷ್ಟು ಡೀಸೆಲ್ ಹಾಗೂ ಶೇ 40ರಷ್ಟು ಪೆಟ್ರೋಲ್‌. ಆದರೆ, ‘ಲಾಕ್‌ಡೌನ್’ ಬಳಿಕ ಪ್ರತಿನಿತ್ಯದ ಮಾರಾಟ ಸುಮಾರು 1 ಲಕ್ಷ ಲೀಟರ್‌ ಮಾತ್ರ.

ಪೆಟ್ರೋಲ್ –ಡೀಸೆಲ್ ಅವಶ್ಯ ಸೇವೆಗಳಲ್ಲಿ ಸೇರಿದ್ದರೂ, ಶನಿವಾರ ಸಂಪೂರ್ಣ ಸ್ಥಗಿತಕ್ಕೆ ಜಿಲ್ಲಾಡಳಿತ ಆದೇಶಿಸಿದೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೆಡೆ ಅನಗತ್ಯ ಸಂಚಾರಕ್ಕೆ ಕಡಿವಾಣ ಬಿದ್ದರೆ, ಇನ್ನೊಂದೆಡೆ ಜೀವ ರಕ್ಷಣೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಪೆಟ್ರೋಲ್–ಡೀಸೆಲ್ ಸಿಗದೇ ಹಲವರು ಪರದಾಡಿದ್ದಾರೆ.

ಅವಶ್ಯ ಸೇವೆ

‘ಪೆಟ್ರೋಲ್ –ಡೀಸೆಲ್ ಅವಶ್ಯ ಸೇವೆಗಳಲ್ಲಿ ಸೇರಿದ್ದು, ಕನಿಷ್ಠ ಸಿಬ್ಬಂದಿ ಮೂಲಕ ಸೇವೆ ನೀಡಲು ಸಿದ್ಧರಿದ್ದೇವೆ.ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಮ್ಮ ಸಿಬ್ಬಂದಿ ಸೇವೆ ನೀಡುತ್ತಿದ್ದಾರೆ. ಆದರೆ, ಈ ಬಗ್ಗೆ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವಿತರಕರ ಸಂಘಟನೆ ಅಧ್ಯಕ್ಷ ಪಿ. ವಾಮನ ಪೈ.

‘ನಾಗರಿಕ–ಸರ್ಕಾರಿ ಸೇವೆ, ಹಾಲು, ಪತ್ರಿಕೆಗಳು, ಆಂಬುಲೆನ್ಸ್ ಮತ್ತಿತರ ಅವಶ್ಯ ಸೇವೆಯಲ್ಲಿ ಇರುವವರಿಗೆ ಮಾತ್ರ ಪೆಟ್ರೋಲ್ –ಡೀಸೆಲ್ ನೀಡುವ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ನಿರ್ದಿಷ್ಟ ಗುರುತಿನ ಚೀಟಿಗಳನ್ನು ಅವರಿಗೆ ನೀಡಬೇಕು. ಅಲ್ಲದೇ, ನಮ್ಮ ಸಿಬ್ಬಂದಿಗೆ ಕರ್ತವ್ಯಕ್ಕೆ ಬರಲು ಜಿಲ್ಲಾಡಳಿತಗಳು ಗುರುತಿನ ಚೀಟಿ ನೀಡಬೇಕು. ಆಗ ಮಾತ್ರ ‘ಲಾಕ್‌ಡೌನ್’ ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಈ ರೀತಿ ಕೈಗೊಳ್ಳುವ ಯಾವುದೇ ನಿರ್ದೇಶನಗಳಿಗೆ ನಾವು ಸದಾ ಬದ್ಧರಿದ್ದು, ಸೇವೆ ನೀಡುತ್ತೇವೆ. ನಷ್ಟವಾದರೂ ಪರವಾಗಿಲ್ಲ. ‘ಕೊರೊನಾ’ ನಿವಾರಣೆ ನಿಟ್ಟಿನಲ್ಲಿ ನಮ್ಮ ಸಂಘ ಸೇವೆ ನೀಡಲಿದೆ’ ಎಂದರು.

ಎಲ್‌ಪಿಜಿಗೆ ಹೆಚ್ಚಿದ ಬೇಡಿಕೆ!

ಲಾಕ್‌ಡೌನ್‌ ಬಳಿಕ ಗೃಹ ಬಳಕೆಯ ಎಲ್‌ಪಿಜಿಗೆ ಬೇಡಿಕೆ ಏರುತ್ತಿದ್ದರೆ, ಇತರ ಉತ್ಪನ್ನಗಳಿಗೆ ಕುಸಿಯುತ್ತಿದೆ. ಆದರೆ, ಎಲ್‌ಪಿಜಿ ಉತ್ಪಾದನೆ ಪ್ರಕ್ರಿಯೆಯಲ್ಲಿಕಚ್ಛಾ ತೈಲವನ್ನು ವಿಭಜಿಸಿದಾಗ ಪೆಟ್ರೋಲ್‌, ವೈಟ್‌ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ನ್ಯಾಪ್ತಾ, ಫರ್ನೆಸ್ ಆಯಿಲ್ ಮತ್ತಿತರ ಉತ್ಪನ್ನಗಳೂ ಬರುತ್ತವೆ. ಇದರಿಂದಾಗಿ ಉತ್ಪಾದನೆಗೊಂಡ ಪೆಟ್ರೋಲ್ ಹಾಗೂ ಡೀಸೆಲ್‌ ಶೇಖರಿಸಿಡುವ ಇರಿಸುವ ಸಮಸ್ಯೆಯೂ ಕಾಡಬಹುದು’ ಎನ್ನುತ್ತಾರೆ ತೈಲೋದ್ಯಮದ ತಜ್ಞರು.

‘ಎಲ್‌ಪಿಜಿ ಜೊತೆ ಇತರ ಉತ್ಪನ್ನಗಳೂ ಉತ್ಪಾದನೆಗೊಳ್ಳುತ್ತವೆ. ಆದರೆ, ಇದರ ಶೇಖರಣೆ ಹಾಗೂ ವಿನಿಯೋಗದ ಬಗ್ಗೆ ಸಂಸ್ಥೆಯು ಪರ್ಯಾಯ ಕ್ರಮಗಳನ್ನು ಕೈಗೊಂಡಿದೆ’ ಎನ್ನುತ್ತಾರೆ ಎಂ.ಆರ್.ಪಿ.ಎಲ್. ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೋನ್ಹಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT