ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ನಮಾಜ್‌ ಸಮಯ ಬದಲು

Published 24 ಏಪ್ರಿಲ್ 2024, 21:11 IST
Last Updated 24 ಏಪ್ರಿಲ್ 2024, 21:11 IST
ಅಕ್ಷರ ಗಾತ್ರ
Introduction

ಮಂಗಳೂರು: ಲೋಕಸಭಾ ಚುನಾವಣೆಯ ಮತದಾನವು ಶುಕ್ರವಾರ (ಏ.29)ವೇ ಇರುವುದರಿಂದ, ಮತ ಚಲಾವಣೆಗೆ ಅನುಕೂಲ ಕಲ್ಪಿಸಲು ಅಂದು ದಕ್ಷಿಣ ಕನ್ನಡ ಜಿಲ್ಲೆಯ ಮಸೀದಿಗಳಲ್ಲಿ ನಮಾಜ್‌ನ ಸಮಯದಲ್ಲಿ ಮಾರ್ಪಾಡು ಮಾಡಲಾಗುತ್ತಿದೆ.

‘ಮುಸ್ಲಿಮರು ಶುಕ್ರವಾರ ಮಸೀದಿಗೆ ತೆರಳಿ ನಮಾಜ್‌ ಸಲ್ಲಿಸುತ್ತಾರೆ. ಬಹುತೇಕ ಮಸೀದಿಗಳಲ್ಲಿ ಶುಕ್ರವಾರದ  ನಮಾಜ್‌ (ಪ್ರಾರ್ಥನೆ) ಸಮಯ ಒಂದೇ ಇರುತ್ತದೆ. ಈ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ಇರುವುದರಿಂದ ಒಂದೇ  ಊರಿನ ಬೇರೆ ಬೇರೆ ಮಸೀದಿಗಳಲ್ಲಿ ಬೇರೆ ಬೇರೆ ಸಮಯದಲ್ಲಿ ನಮಾಜ್‌ ಮಾಡಲು ಅವಕಾಶ ಕಲ್ಪಿಸುವಂತೆ ಜಿಲ್ಲಾ ವಕ್ಫ್‌ ಸಲಹಾ ಸಮಿತಿಯು ಮಸೀದಿಗಳ ಆಡಳಿತ ಸಮಿತಿಗಳಿಗೆ ಸಲಹೆ ನೀಡಿದೆ’ ಎಂದು ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್‌ ಲಕ್ಕಿಸ್ಟಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶುಕ್ರವಾರ ಮಧ್ಯಾಹ್ನದ ವಿಶೇಷ ನಮಾಜ್‌ನಲ್ಲಿ ಪಾಲ್ಗೊಳ್ಳಲು ಕೆಲವರು ಮಧ್ಯಾಹ್ನ 12 ಗಂಟೆ ಬಳಿಕ  ಮಸೀದಿಗೆ ತೆರಳುತ್ತಾರೆ. ಸುಮಾರು 1 ಗಂಟೆ  ಖುತ್ಬಾ ಪಾರಾಯಣ ನಡೆದು, ನಂತರ ಸಾಮೂಹಿಕ ನಮಾಜ್‌ ನಡೆಯುವುದು ವಾಡಿಕೆ.

‘ಮತಗಟ್ಟೆಗೆ ತೆರಳಿದವರು ಮಸೀದಿಗೆ ಬರಲು ತಡವಾಗಬಹುದು. ಹಾಗಾಗಿ ಬೇರೆ ಬೇರೆ ಮಸೀದಿಗಳಲ್ಲಿ ಬೇರೆ ಬೇರೆ ಸಮಯದಲ್ಲಿ ನಮಾಜ್‌ ಏರ್ಪಡಿಸಲು ಸಲಹೆ ನೀಡಿದ್ದೇವೆ. ಕೆಲವು ಮಸೀದಿಗಳಲ್ಲಿ ಮಧ್ಯಾಹ್ನ 1 ಗಂಟೆಗೆ ನಮಾಜ್‌ ನಡೆದರೆ, ಇನ್ನು ಕೆಲವು ಮಸೀದಿಗಳಲ್ಲಿ ಮಧ್ಯಾಹ್ನ 1.15ಕ್ಕೆ, 1.30ಕ್ಕೆ ನೆರವೇರಲಿದೆ’ ಎಂದರು.

‘ಬಹುತೇಕ ಮಸೀದಿಗಳ ಖತೀಬರು ಮತ್ತು ಸಿಬ್ಬಂದಿ ಪರವೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.  ಮತದಾನ ಮಾಡಲು ಅವರು ತಮ್ಮ ತಮ್ಮ ಊರುಗಳಿಗೆ ತೆರಳಬೇಕಾಗುತ್ತದೆ. ಹಾಗಾಗಿ ಜಿಲ್ಲೆಯ ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಮೌಲ್ವಿಗಳು ಹಾಗೂ ಇತರ ಸಿಬ್ಬಂದಿಗೆ ಏ. 26ರಂದು ರಜೆ ನೀಡುವಂತೆ ನಿರ್ದೇಶನ ನೀಡಿದ್ದೇವೆ’ ಎಂದು ಹೇಳಿದರು.