ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ: ಪಿಎಫ್‌ಐ ಮುಖಂಡರ ವಶ ಖಂಡಿಸಿ ಪ್ರತಿಭಟನೆ–ಲಾಠಿ ಚಾರ್ಜ್

ಮಂಗಳೂರು ಪೊಲೀಸ್ ದೌರ್ಜನ್ಯ ಎಂದು ಟ್ವಿಟರ್‌ನಲ್ಲಿ ಟ್ರೆಂಡಿಂಗ್
Last Updated 15 ಡಿಸೆಂಬರ್ 2021, 9:48 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಇಲ್ಲಿನ ಹಳೆಗೇಟ್ ಸುಬ್ರಹ್ಮಣ್ಯ ಕ್ರಾಸ್ ಬಳಿ 9 ದಿನಗಳ ಹಿಂದೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದ ಮೂವರು ಪಿಎಫ್ಐ ಮುಖಂಡರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಠಾಣೆಯ ಎದುರು ಪಿಎಫ್ಐ ಕಾರ್ಯಕರ್ತರು ಸೋಮವಾರ ರಾತ್ರಿ 8ರ ವರೆಗೆ ಪ್ರತಿಭಟನೆ ನಡೆಸಿದರು.

ಪಿಎಫ್ಐ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫಿ ಅವರನ್ನು ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ವಶದಲ್ಲಿರುವವರನ್ನು ಬಿಡುಗಡೆ ಗೊಳಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನ
ಕಾರರು ಸ್ಥಳದಿಂದ ತೆರಳಿದರು.

ಮುಖಂಡರನ್ನು ವಶಕ್ಕೆ ಪಡೆದ ವಿಷಯ ತಿಳಿದ ಪಿಎಫ್ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಬೆಳಿಗ್ಗಿನಿಂದಲೇ ಠಾಣೆ ಮುಂದೆ ಸೇರಿದ್ದರು. ಹಲವು ಬಾರಿ ಮುಖಂಡರು ಪೊಲೀಸ್ ಠಾಣೆಯೊಳಗೆ ತೆರಳಿ ಅವರ ಬಿಡುಗಡೆಗೆ ಮಾತುಕತೆ ನಡೆಸಿದರು. ಆದರೆ, ಪೊಲೀಸರು ಮಣಿಯದಿದ್ದಾಗ ಠಾಣೆಯ ಎದುರಿನ ರಸ್ತೆಗೆ ಅಡ್ಡವಾಗಿ ನಿಂತು, ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಮಧ್ಯಾಹ್ನದವರೆಗೂ ಉಪ್ಪಿನಂಗಡಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಕುಮಾರ್ ಕಾಂಬ್ಳೆ, ‘ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ರೀತಿಯಲ್ಲಿ ಸೋಟಿಸ್ ಜಾರಿಗೊಳಿಸಿ ಮೂವರನ್ನು ವಿಚಾರಣೆಗೆ ಕರೆಯಲಾಗಿದೆ. ಈಗ ನೀವು ಸೇರಿರುವುದು ಅಕ್ರಮ ಕೂಟ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಪೊಲೀಸ್ ಕರ್ತವ್ಯಕ್ಕೂ ನೀವು ಅಡ್ಡಿ ಪಡಿಸುತ್ತಿದ್ದೀರಿ. ಕೋವಿಡ್ ನಿಯಮಾವಳಿಯೂ ಇಲ್ಲಿ ಉಲ್ಲಂಘನೆ ಆಗುತ್ತಿದೆ. ಆದ್ದರಿಂದ ಎಲ್ಲರೂ ಇಲ್ಲಿಂದ ತೆರಳಬೇಕೆಂದು ಧ್ವನಿವರ್ಧಕದ ಮೂಲಕ ಮನವಿ ಮಾಡಿದರು. ತಪ್ಪಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು. ಬಳಿಕ ಕೆಲಕಾಲ ಅಲ್ಲಿದ್ದು, ನಂತರ ಸಮೀಪದಲ್ಲಿರುವ ಮಸೀದಿಯತ್ತ ತೆರಳಿದರು.

ಪ್ರತಿಭಟನೆಯ ಕಾವು: ಸಂಜೆ ಪ್ರತಿಭಟನಕಾರರು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಮಹಿಳೆಯರು, ಪುರುಷರೆನ್ನದೆ ಹಲವು ಮಂದಿ ರಾತ್ರಿ 8 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗತೊಡಗಿದರು.

ರಸ್ತೆಯಲ್ಲೇ ನಮಾಜ್: ಸಂಜೆ 4 ಗಂಟೆಯ ಹಾಗೂ ಸೂರ್ಯಾಸ್ತದ ನಮಾಜ್‌ ಅನ್ನು ಪ್ರತಿಭಟನಕಾರರು ರಸ್ತೆಯಲ್ಲೇ ನಿರ್ವಹಿಸಿದರು.

ಮಾತುಕತೆಗೆ ಆಹ್ವಾನ: ಡಿವೈಎಸ್ಪಿ ಡಾ. ಗಾನಾ ಕುಮಾರಿ ಸಂಜೆ ಸ್ಥಳಕ್ಕೆ ಬಂದು, ‘ನಾಲ್ಕೈದು ಮುಖಂಡರು ಮಾತ್ರ ಠಾಣೆಯೊಳಗೆ ಮಾತುಕತೆಗೆ ಬನ್ನಿ. ಉಳಿದವರನ್ನು ಇಲ್ಲಿಂದ ಕಳುಹಿಸಿ. ಹಾಗಾದರೆ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಲಾಗುವುದು’ ಎಂದರು.

ಬಳಿಕ ಮುಖಂಡರು ಪ್ರತಿಭಟನನಿರತ ಕಾರ್ಯಕರ್ತರನ್ನು ಸ್ಥಳದಿಂದಪಕ್ಕದಲ್ಲಿರುವ ಮಸೀದಿಯ ಬಳಿ ತೆರಳಲು ಹೇಳಿದರು. ಪೊಲೀಸರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಅಬ್ದುಲ್ ಹಮೀದ್ ಮೆಜೆಸ್ಟಿಕ್‌ರನ್ನು ಬಿಡುಗಡೆಗೊಳಿಸಿದ್ದು, ಬಳಿಕ ಉಳಿದಿಬ್ಬರನ್ನು ಬಿಡುಗಡೆಗೊಳಿಸಲಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸ್ ತುಕಡಿಗಳು ಬೀಡು ಬಿಟ್ಟಿವೆ.

ಘಟನೆಯ ಬಗ್ಗೆ ಡಿವೈಎಸ್ಪಿ ಗಾನಾ ಕುಮಾರಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ‘ಈ ಬಗ್ಗೆ ಎಸ್‌ಪಿ ಸಾಹೇಬರು ಮಾಹಿತಿ ಕೊಡುತ್ತಾರೆ’ ಎಂದು ಉತ್ತರಿಸಿದ್ದಾರೆ. ಆದರೆ, ಎಸ್‌ಪಿ. ಅವರು ಕರೆ ಸ್ವೀಕರಿಸಲಿಲ್ಲ.

ಲಾಠಿ ಚಾರ್ಜ್: ಪ್ರತಿಭಟನಾಕಾರರು ಮತ್ತೆ ಠಾಣೆ ಮುಂದೆ ಸೇರಿ ಇನ್ನಿಬ್ಬರನ್ನು ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದರು. ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ಟ್ವಿಟರ್‌ನಲ್ಲಿ ಟ್ರೆಂಡಿಂಗ್: ಲಾಠಿ ಚಾರ್ಚ್ ವೇಳೆ ಕೆಲ ಪ್ರತಿಭಟನಾಕಾರರಿಗೆ ಉಪ್ಪಿನಂಗಡಿ ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ ಎಂದು ಇಂದು #MangalorePoliceBrutality ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT