ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ‘ಮೀನುಗಾರಿಕೆಯನ್ನು ಬಲಗೊಳಿಸುವ ಮತ್ಸ್ಯ ಸಂಪದ’

Published 20 ಫೆಬ್ರುವರಿ 2024, 15:21 IST
Last Updated 20 ಫೆಬ್ರುವರಿ 2024, 15:21 IST
ಅಕ್ಷರ ಗಾತ್ರ

ಮಂಗಳೂರು: ಮೀನುಗಾರಿಕೆ, ಮೀನುಗಾರರನ್ನು ಅಭಿವೃದ್ಧಿಗೊಳಿಸುವ ಮೂಲಕ ದೇಶದ ಆರ್ಥಿಕತೆ ಬಲಪಡಿಸುವುದು. ಪೌಷ್ಟಿಕಾಂಶ ಆಹಾರ ಕೊರತೆ ನೀಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆ ಜಾರಿಗೊಳಿಸಿದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎನ್‌.ಎ. ಪಾಟೀಲ ಹೇಳಿದರು. 

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ‌ ಹೈದರಾಬಾದ್‌, ಮೀನುಗಾರಿಕಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು, ಹೆಸರಘಟ್ಟ, ಹೆಬ್ಬಾಳ, ಭೂತನಾಳ, ಅಂಕೋಲಾ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರಗಳು, ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ಮತ್ಸ್ಯಸಂಪದ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು  ಮಾತನಾಡಿದರು.

ಮೀನುಗಾರಿಕೆ ದೇಶದ ಜಿಡಿಪಿಗೆ ಶೇ 1ರಷ್ಟು ಕೊಡುಗೆ ನೀಡುವ ಮೂಲಕ ಆರ್ಥಿಕತೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದೆ. ದೇಶದ ಜನರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿದೆ. ಮೀನುಗಾರಿಕೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ವಿಕಾಸ ಯೋಜನೆ, ಮತ್ಸ್ಯಸಂಪದ ಯೋಜನೆ ಮುಂತಾದ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡಿದೆ. ಇವು ಮೀನುಗಾರರಿಗೆ, ರೈತರಿಗೆ ಎಷ್ಟರಮಟ್ಟಿಗೆ, ಎಷ್ಟು ಪರಿಣಾಮಕಾರಿಯಾಗಿ ತಲುಪುತ್ತಿವೆ ಎನ್ನುವ ಬಗ್ಗೆ ಜಾಗೃತಿ ಮೂಡಿಸಲು, ಮಾಹಿತಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ತಿಳಿಸಿದರು.

ವರ್ಚುವಲ್‌ ಮೂಲಕ ಮಾತನಾಡಿದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್‌. ನರಸಿಂಹಮೂರ್ತಿ, ಮೀನುಗಾರಿಕೆ ಕ್ಷೇತ್ರಕ್ಕೆ ಸರ್ಕಾರದಿಂದ ಏನೆಲ್ಲಾ ಯೋಜನೆಗಳು ಜಾರಿಯಾಗಿವೆ, ಎಷ್ಟರಮಟ್ಟಿಗೆ ಅವು ಫಲಾನುಭವಿಗಳಿಗೆ ತಲುಪಿವೆ, ತಲುಪುವಲ್ಲಿನ ತೊಂದರೆಗಳು, ಕಾರಣಗಳು, ಮುಂದೆ ಆಗಬೇಕಾದ ಸುಧಾರಣೆಗಳು, ಕಾರ್ಯಕ್ರಮ–ಯೋಜನೆಗಳ ಬಗ್ಗೆ ಅವಲೋಕನ ಆಗಬೇಕು ಎಂದರು.

ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ವಿಜ್ಞಾನಿ ಕೆ.ಎಂ. ರಾಜೇಶ್‌ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮತ್ಸ್ಯ ಉತ್ಪಾದನಾ ಕೇಂದ್ರಗಳಿಲ್ಲ. ಅವುಗಳ ಅವಶ್ಯಕತೆಯಿದ್ದು, ಸ್ಥಾಪನೆ ಮಾಡುವ ದಿಸೆಯಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಕೇವಲ ಒಂದು ಮತ್ಸ್ಯ ‍ಪಾಲನಾ ಕೇಂದ್ರ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು. 

ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‌, ಕಾರ್ಯಕ್ರಮ ನಿರ್ದೇಶಕ ಎಚ್‌.ಎನ್‌. ಅಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ನಿರ್ದೇಶಕ ಬಿ.ವಿ. ಶಿವಪ್ರಕಾಶ್‌, ಉಡುಪಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್‌ ಆರ್, ಜಿಲ್ಲಾ ಕೃಷಿ ವಿಜ್ಞಾನ ಕೇಮದ್ರ ಮುಖ್ಯಸ್ಥ ಟಿ.ಜೆ. ರಮೇಶ್‌, ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಸಂಯೋಜಕ ಎ.ಟಿ. ರಾಮಚಂದ್ರ ನಾಯ್ಕ, ಹೆಬ್ಬಾಳ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಸಹ ಸಂಯೋಜಕ ಕೆ.ಬಿ. ರಾಜಣ್ಣ, ಹೆಸರಘಟ್ಟ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಸಹ ಸಂಯೋಜಕ ಮಂಜಪ್ಪ ಎನ್‌ ಇದ್ದರು. ವಿಜಯಪುರ ಮೀನುಗಾರಿಕೆ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಸಹ ಸಂಯೋಜಕ ವಿಜಯ್‌ಕುಮಾರ್‌ ಎಸ್‌. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT