ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಉಪವಾಸ: ಡ್ರೈಫ್ರೂಟ್ಸ್‌ ‘ಶಕ್ತಿ’

ಮಂಗಳೂರು ಮಾರುಕಟ್ಟೆಗೆ ಜೋರ್ಡಾನ್, ಪ್ಯಾಲೆಸ್ಟೀನ್‌ನಿಂದ ಆಮದು; ರೂಹಬ್ಜಾ ಪಾನೀಯಕ್ಕೂ ಬೇಡಿಕೆ
Published 22 ಮಾರ್ಚ್ 2024, 6:58 IST
Last Updated 22 ಮಾರ್ಚ್ 2024, 6:58 IST
ಅಕ್ಷರ ಗಾತ್ರ

ಮಂಗಳೂರು: ರಂಜಾನ್ ಉಪವಾಸ ಅರಂಭಗೊಂಡು ಆಗಲೇ ಒಂದು ವಾರ ಆಗುತ್ತ ಬಂತು. ಉಪವಾಸ ವ್ರತ ಕೈಗೊಳ್ಳುವವರ ಪ್ರತಿ ಮನೆಯಲ್ಲೂ ಡ್ರೈ ಫ್ರೂಟ್ಸ್‌ ಇದ್ದೇ ಇರುತ್ತದೆ. ಅದರಲ್ಲೂ ಖರ್ಜೂರ ಇಲ್ಲದ ಮನೆ ಇರಲಾರದು. ಯಾಕೆಂದರೆ ಉಪವಾಸ ತೊರೆಯಲು ಬಹುತೇಕ ಮಂದಿ ಖರ್ಜೂರ ಬಳಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲೂ ಖರ್ಜೂರಕ್ಕೆ ಭಾರಿ ಬೇಡಿಕೆ.

ಮಂಗಳೂರಿನ ಬಂದರು ಭಾಗದಲ್ಲಿರುವ ಚಿಲ್ಲರೆ ಮಾರಾಟದ ಡ್ರೈ ಫ್ರೂಟ್ಸ್ ಅಂಗಡಿಗಳಲ್ಲಿ ಖರ್ಜೂರ ಭಾರಿ ಪ್ರಮಾಣದಲ್ಲಿ ಬಿಕರಿಯಾಗುತ್ತಿದೆ. ನಗರದಲ್ಲಿ 12 ಸಗಟು ವ್ಯಾಪಾರಿಗಳಿದ್ದು ಅವರೆಲ್ಲ ಆಗಲೇ ವ್ಯಾಪಾರ ಮುಗಿಸಿ ನಿರಾಳವಾಗಿದ್ದಾರೆ. ಯಾಕೆಂದರೆ ಅವರ ಮಳಿಗೆಗಳಲ್ಲಿ ವ್ಯಾಪಾರ ನಡೆಯುವುದು ರಂಜಾನ್ ಆರಂಭಕ್ಕೂ ಮೊದಲು. ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರರಾಜ್ಯದ ಚಿಲ್ಲರೆ ಮಾರಾಟಗಾರರು ಮಂಗಳೂರಿಗೆ ಬಂದು ಖರ್ಜೂರ ಮತ್ತು ಇತರ ಡ್ರೈ ಫ್ರೂಟ್ಸ್ ಖರೀದಿಸಿಕೊಂಡು ಹೋಗುತ್ತಾರೆ. ಆದ್ದರಿಂದ ರಂಜಾನ್‌ಗೆ ಒಂದೆರಡು ವಾರ ಇರುವಾಗ ಈ ಮಳಿಗೆಗಳ ಮುಂದೆ ಸಾಲು ಸಾಲು ಜನರು ಕಾಣಸಿಗುತ್ತಾರೆ.

ಮಂಗಳೂರಿಗೆ ಬೇರೆ ರಾಜ್ಯಗಳಿಂದ ಮಾತ್ರವಲ್ಲ, ಹಲವು ದೇಶಗಳಿಂದಲೂ ಖರ್ಜೂರ ಆಮದಾಗುತ್ತದೆ. ಸೌದಿ ಅರೆಬಿಯಾ, ಬಹರೇನ್‌, ಕತಾರ್‌, ಒಮಾನ್ ಮುಂತಾದ ಕೊಲ್ಲಿ ರಾಷ್ಟ್ರಗಳಿಂದ ಹೆಚ್ಚು ಆಮದಾಗುತ್ತದೆ. ಪ್ಯಾಲೆಸ್ಟೀನ್ ಮತ್ತು ಜೋರ್ಡಾನ್‌ನಿಂದಲೂ ಖರ್ಜೂರ ತರುವ ವ್ಯಾಪಾರಿಗಳು ಇದ್ದಾರೆ.

‘ಜೋರ್ಡಾನ್ ಮತ್ತು ಪ್ಯಾಲೆಸ್ಟೀನ್‌ನಿಂದ ಬರುವ ಖರ್ಜೂರಕ್ಕೆ ಹೆಚ್ಚು ಬೇಡಿಕೆ ಇದೆ. ಅದರ ಗಾತ್ರ ದೊಡ್ಡದು. ಆದ್ದರಿಂದ ಬಹಳ ಮಂದಿ ಅದನ್ನು ಇಷ್ಟಪಡುತ್ತಾರೆ. ಗರಿಷ್ಠ ಬೆಲೆ ಕೆಜಿಗೆ ₹ 1200ಕ್ಕೆ ಇವು ಮಾರಾಟ ಆಗುತ್ತವೆ. ಉಳಿದಂತೆ ₹ 80, ₹ 120, ₹ 900 ಮುಂತಾದ ದರದಲ್ಲಿ ಮಾರಾಟ ಆಗುತ್ತವೆ’ ಎಂದು ಎ.ಕೆ.ಟ್ರೇಡರ್ಸ್‌ನ ಮಾಲೀಕ ಎ.ಕೆ.ಸಿನಾನ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸ್ವಾದಿಷ್ಟ, ಪೋಷಕಯುಕ್ತ ಖರ್ಜೂರದ ಜೊತೆಯಲ್ಲಿ ಗೋಡಂಬಿ, ಬಾದಾಮ್‌, ಶೇಂಗಾ (ನೆಲಕಡಲೆ) ಮುಂತಾದವುಗಳಿಗೂ ಬೇಡಿಕೆ ಇದೆ. ಉಪವಾಸ ಮಾಡಿದ ದೇಹಕ್ಕೆ ತಂಪೆರೆಯಲು ಹಲುವ ಬಗೆಯ ಶರಬತ್‌ಗಳು ಕೂಡ ಬೇಕಾಗುತ್ತವೆ. ರೂಹಬ್ಜಾ, ಕಾಮಕಸ್ತೂರಿ ಮತ್ತು ಇಸಬ್‌ಗೋಲ್ ಪುಡಿಯಿಂದ ತಯಾರಿಸಿದ ಪಾನೀಯಗಳು ಈ ಸಂದರ್ಭಗಳಲ್ಲಿ ಬೇಕೇಬೇಕು. ರೂಹಬ್ಜಾದಲ್ಲಿ ಭಾರತೀಯ ಮತ್ತು ನೆರೆರಾಷ್ಟ್ರದ್ದು ಎಂಬ ಎರಡು ವಿಧಗಳು ಇವೆ. ರೂಹಬ್ಜಾದಲ್ಲಿ ಗುಲಾಬಿಯ ಮಿಶ್ರಣ ಇರುವುದರಿಂದ ಹೆಚ್ಚು ಮಂದಿ ಇಷ್ಟಪಡುತ್ತಾರೆ’ ಎಂದು ಸಿನಾನ್ ಹೇಳಿದರು.

ಖರ್ಜೂರದಲ್ಲಿ ನೈಸರ್ಗಿಕವಾದ ಸಕ್ಕರೆ ಅಂಶ ಸಿಗುವುದರಿಂದ ಉಪವಾಸ ಮುರಿದು ನವಚೇತನ ಹೊಂದಲು ಅನುಕೂಲ ಆಗುತ್ತದೆ. ಖನಿಜ ಮತ್ತು ನಾರಿನ ಅಂಶಗಳು ಕೂಡ ಇದರಲ್ಲಿ ಧಾರಾಳ ಇರುವುದರಿಂದ ಆರೋಗ್ಯಕರ ಎಂಬುದು ವೈದ್ಯಲೋಕವೂ ಹೇಳುತ್ತದೆ. ಈ ಕಾರಣದಿಂದಲೇ ಧಾರ್ಮಿಕವಾಗಿಯೂ ಇದಕ್ಕೆ ಮಹತ್ವ ಬಂದಿರಬೇಕು ಎನ್ನುತ್ತಾರೆ ಇಸ್ಲಾಂ ಪಂಡಿತರು. ಉಪವಾಸದ ಸಂದರ್ಭದಲ್ಲಿ ಆಹಾರಪದ್ಧತಿಯಲ್ಲಿ ದಿಢೀರ್ ಬದಲಾವಣೆಗಳು ಆಗುವುದರಿಂದ ಕೆಲವರಿಗೆ ಮಲಬದ್ಧತೆಯಂಥ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಇದಕ್ಕೆ ಡ್ರೈ ಫ್ರೂಟ್ಸ್ ಜೊತೆಯಲ್ಲಿ ವಿಶಿಷ್ಟ ಬಗೆಯ ಶರಬತ್ತುಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

‘ಇಫ್ತಾರ್‌ಗೆ ಖರ್ಜೂರ ಬಳಸಲೇಬೇಕು ಎಂದು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರೇ ಸೂಚಿಸಿದ್ದಾರೆ. ಖರ್ಜೂರ ಅಥವಾ ಬಿಸಿನೀರು ಬಳಸುವುದನ್ನು ಅವರು ಸುನ್ನಾ (ಮಾದರಿ) ಆಗಿ ಮಾಡಿದ್ದರು. ಅದನ್ನು ಈಗಲೂ ಪಾಲಿಸಲಾಗುತ್ತದೆ’ ಎಂದು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಹೇಳಿದರು.

‘ಧಾರ್ಮಿಕ ನಂಬಿಕೆಗಳ ಜೊತೆಯಲ್ಲಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರವೂ ಜೋರಾಗಿ ನಡೆಯುತ್ತದೆ. ಆದ್ದರಿಂದ ಹಬ್ಬವು ನಮಗೆ ಧರ್ಮಾಚರಣೆಗೆ ಅವಕಾಶ ಮಾಡಿಕೊಡುವುದರ ಜೊತೆಯಲ್ಲಿ ಬದುಕಿನ ಹಾದಿಯನ್ನು ಗಟ್ಟಿಗೊಳಿಸುವುದಕ್ಕೂ ನೆರವಾಗುತ್ತದೆ’ ಎಂಬುದು ಎ.ಕೆ.ಸಿನಾನ್ ಅಭಿಪ್ರಾಯ.

ರೂಹಮ್ಜಾ ಪಾನೀಯ
ರೂಹಮ್ಜಾ ಪಾನೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT