ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್ ಚುನಾವಣೆ| ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಪರಿಣಾಮ ಬೀರದು: ವಿಜಯೇಂದ್ರ

Published 27 ಮೇ 2024, 11:28 IST
Last Updated 27 ಮೇ 2024, 11:28 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನ ಪರಿಷತ್ತಿನ ಚುನಾವಣೆಯ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧ ಬಂಡಾಯವಾಗಿ ಕೆಲವರು ಸ್ಪರ್ಧಿಸಿದ್ದರೂ, ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ನಮ್ಮ ಪಕ್ಷದ ಮುಖಂಡರು ಹಾಗೂ ಹಿರಿಯಲು ಸಾಕಷ್ಟು ಶ್ರಮವನ್ನು ಹಾಕುತ್ತಿದ್ದಾರೆ. ಇದರ ಪರಿಣಾಮ ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಂಡಾಯ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊ ಬಳಸಿಕೊಂಡು, ತಾವೇ ಬಿಜೆಪಿ ಅಭ್ಯರ್ಥಿಗಳು ಎಂದು ಮತ ಯಾಚಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ನಿನ್ನೆಯಿಂದ ಈ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮತದಾರರನ್ನು ತಲುಪುತ್ತಿದ್ದಾರೆ. ಮತದಾರರೂ ಪ್ರಬುದ್ಧರಿದ್ದಾರೆ. ಬಿಜೆಪಿ ಬಗ್ಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಬಗ್ಗೆ ವಿಶ್ವಾಸವಿಟ್ಟುಕೊಂಡಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಎಸ್‌.ಎಲ್‌.ಭೋಜೇಗೌಡ ಹಾಗೂ ನೈರುತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರ ಗೆಲುವಿನ ಅಂತರ ಈ ಸಲ ಜಾಸ್ತಿ ಆಗಲಿದೆ’ ಎಂದರು.

‘ವಿಧಾನಸಭೆ ಸದಸ್ಯರು ವಿಧಾನಪರಿಷತ್ತಿನ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಆಕಾಂಕ್ಷಿಗಳ ಪ್ರಾಂತವಾರು ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಿದ್ದೇವೆ. ಅಭ್ಯರ್ಥಿಗಳು ಯಾರಾಗಬೇಕು ಎಂಬುದನ್ನು ವರಿಷ್ಠರೇ ತೀರ್ಮಾನ ಮಾಡುತ್ತಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಶಾಸಕ ಹರೀಶ್‌ ಪೂಂಜ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಿನಾಕಾರಣ ನಮ್ಮ ಕಾರ್ಯಕರ್ತರ ಹೆಸರನ್ನು ಎಫ್‌ಐಆರ್‌ ನಲ್ಲಿ ಸೇರಿಸಿ ಅಧಿಕಾರ ದುರ್ಬಳಕೆ ಮಾಡುವ ಮೂಲಕ ರಾಜಕೀಯ ತೀಟೆ ತೀರಿಸುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಬಿಜೆಪಿಯ ಯುವಮೋರ್ಚಾದ ಬೆಳ್ತಂಗಡಿ ಮಂಡಲದ ಅಧ್ಯಕ್ಷ (ಶಶಿರಾಜ್‌ ಶೆಟ್ಟಿ) ಹೆಸರನ್ನು ದುರುದ್ದೇಶದಿಂದ ಎಫ್‌ಐಆರ್‌ನಲ್ಲಿ ಸೇರಿಸಿದ್ದು ಖಂಡನೀಯ. ಇದರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT