ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಸ್ಲಿಂ ಲೀಗ್– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೋಲಿಕೆ

ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವತ್ಥ ನಾರಾಯಣ ಟೀಕೆ
Published 9 ಏಪ್ರಿಲ್ 2024, 8:06 IST
Last Updated 9 ಏಪ್ರಿಲ್ 2024, 8:06 IST
ಅಕ್ಷರ ಗಾತ್ರ

ಮಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಮತ್ತು 1936ರಲ್ಲಿ ಮುಸ್ಲಿಂ ಲೀಗ್ ಸಿದ್ಧಪಡಿಸಿದ್ದ ಚುನಾವಣಾ ಪ್ರಣಾಳಿಕೆಗೆ ಹೋಲಿಕೆ ಇದೆ. ದೇಶ ವಿಭಜನೆ ಕಾರಣವಾದ ಮುಸ್ಲಿಂ ಲೀಗ್ ಕಾಂಗ್ರೆಸ್‌ಗೆ ಮಾರ್ಗದರ್ಶಿಕೆಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಅಶ್ವತ್ಥ ನಾರಾಯಣ ಟೀಕಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಮುಸ್ಲಿಂ ಲೀಗ್ ಶರಿಯತ್ ಪ್ರಕಾರ ವೈಯಕ್ತಿಕ ಕಾನೂನು ರಕ್ಷಣೆಗೆ ಬದ್ಧ ಎಂದು ಹೇಳಿದ್ದರೆ, ಪ್ರಸ್ತುತ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನು ರಕ್ಷಣೆಗೆ ಬದ್ಧ ಎಂದಿದೆ. ಅಂದು ಮುಸ್ಲಿಂ ಲೀಗ್ ಮುಸ್ಲಿಮರಿಗೆ ವಿಶೇಷ ಸ್ಕಾಲರ್‌ಷಿಪ್ ಮತ್ತು ಉದ್ಯೋಗ ಘೋಷಿಸಿದ್ದರೆ, ಇಂದು ಕಾಂಗ್ರೆಸ್ ವಿದೇಶದಲ್ಲಿ ವ್ಯಾಸಂಗ ಮಾಡಲು ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.

ಅಲ್ಲದೆ, ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಆಡಳಿತಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಗ್ಯಾರಂಟಿ ಘೋಷಿಸಿದೆ. ಇದಕ್ಕೆ ವಾರ್ಷಿಕವಾಗಿ ಅಂದಾಜು ₹30 ಲಕ್ಷ ಕೋಟಿ ಅಗತ್ಯವಿದೆ. ಕೇಂದ್ರ ಬಜೆಟ್ ಗಾತ್ರವೇ ₹40 ಲಕ್ಷ ಕೋಟಿ ಆಗಿರುವಾಗ, ಗ್ಯಾರಂಟಿ ಈಡೇರಿಸಲು ಅಗತ್ಯವಿರುವ ಹಣಕಾಸಿನ ಮೂಲ ಬಹಿರಂಗ ಪಡಿಸಬೇಕು ಎಂದರು.

ಅಧಿಕಾರಕ್ಕೆ ಬಂದ 100 ದಿನಗಳಲ್ಲೇ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಭ್ರಷ್ಟಾಚಾರ ತಾಂಡವವಾಡುತ್ತದೆ. ದೇಶ ವಿರೋಧಿ ಶಕ್ತಿಗಳು ತಲೆ ಎತ್ತುತ್ತವೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪ್ರಮುಖರಾದ ಗಣೇಶ್ ಕಾರ್ಣಿಕ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ರವಿಶಂಕರ್ ಮಿಜಾರು, ಸಂಜಯ್ ಪ್ರಭು, ವಸಂತ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT