ಶುಕ್ರವಾರ, ಅಕ್ಟೋಬರ್ 18, 2019
27 °C
ಕೇಂದ್ರಕ್ಕೆ ನಿಯೋಗ ಕರೆದೊಯ್ಯುವಂತೆ ಶಾಸಕ ಯು.ಟಿ.ಖಾದರ್‌ ಆಗ್ರಹ

ಎನ್‌ಎಂಪಿಟಿ ಖಾಸಗೀಕರಣಕ್ಕೆ ವಿರೋಧ

Published:
Updated:
prajavani

ಮಂಗಳೂರು: ನವ ಮಂಗಳೂರು ಬಂದರನ್ನು (ಎನ್‌ಎಂಪಿಟಿ) ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದನ್ನು ವಿರೋಧಿಸಲು ಜಿಲ್ಲೆಯ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರು ಇಲ್ಲಿನ ಎಲ್ಲ ಶಾಸಕರ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಎಸ್‌ಎನ್‌ಎಲ್‌ ಹಾಗೂ ವಿಮಾನ ನಿಲ್ದಾಣಗಳ ಖಾಸಗೀಕರಣ ಪ್ರಕ್ರಿಯೆ ಆರಂಭಿಸಿದ್ದ ಕೇಂದ್ರ ಸರ್ಕಾರ, ಈಗ ಎನ್‌ಎಂಪಿಟಿಯನ್ನೂ ಖಾಸಗೀಕರಣ ಮಾಡಲು ಮುಂದಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಆಘಾತಕಾರಿ ನಡೆ’ ಎಂದರು.

ಎನ್‌ಎಂಪಿಟಿಯಲ್ಲಿನ ಕಂಟೇನರ್‌ಗಳ ನಿರ್ವಹಣೆಯ ಒಂದು ವಿಭಾಗವನ್ನು ಚೆಟ್ಟಿನಾಡ್‌ ಕಂಪನಿಗೆ ಈಗಾಗಲೇ ವಹಿಸಲಾಗಿದೆ. ಇನ್ನೊಂದು ವಿಭಾಗವನ್ನು ಎರಡು ತಿಂಗಳೊಳಗೆ ಜೆಎಸ್‌ಡಬ್ಲ್ಯು ಸಂಸ್ಥೆಗೆ ನೀಡಲು ತೀರ್ಮಾನಿಸಲಾಗಿದೆ. ಬಂದರಿನಲ್ಲಿ ಸುಮಾರು 40 ಶಿಪ್ಪಿಂಗ್‌ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಖಾಸಗೀಕರಣ ಮಾಡಿದರೆ ನಾಲ್ಕು ಸಾವಿರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಜಿ ಸಂಸದ ಯು.ಶ್ರೀನಿವಾಸ ಮಲ್ಯ ಅವರು ಹಾಗೂ ಹಿಂದಿನ ಸಂಸದರುಗಳು ಸ್ಥಳೀಯರಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಬಂದರು ನಿರ್ಮಾಣಕ್ಕೆ ಶ್ರಮಿಸಿದ್ದರು. ಇದರಿಂದ ಜಿಲ್ಲೆಯ ಅಭಿವೃದ್ಧಿಯೂ ಆಗಿದೆ. ಈಗ ಖಾಸಗೀಕರಣ ಮಾಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಈ ಸಮಯದಲ್ಲಿ ಸಂಸದರು ಜಿಲ್ಲೆಯ ಎಲ್ಲ ಶಾಸಕರ ನಿಯೋಗವನ್ನು ಕರೆದೊಯ್ದು, ಬಂದರು ಖಾತೆಯ ಸಚಿವರ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

‘ಖಾಸಗೀಕರಣವನ್ನು ವಿರೋಧಿಸಿದರೆ ಸಾಲದು. ಈಗಾಗಲೇ ಉದ್ಯೋಗ ಕಳೆದುಕೊಂಡಿರುವವರು ಮತ್ತು ಉದ್ಯೋಗ ಕಳೆದುಕೊಳ್ಳುವವರಿಗೆ ಆದ್ಯತೆಯ ಮೇಲೆ ಕೆಲಸ ನೀಡಲು ಒತ್ತಡ ತರಬೇಕು. ಬಂದರಿನಲ್ಲಿರುವ ಉದ್ಯೋಗಗಳ ಪೈಕಿ ಶೇಕಡ 50ರಷ್ಟನ್ನು ಸ್ಥಳೀಯರಿಗೆ ಮೀಸಲಿಡುವಂತೆ ಬೇಡಿಕೆ ಸಲ್ಲಿಸಬೇಕು’ ಎಂದರು.

ಎನ್ಆರ್‌ಸಿ ಬಗ್ಗೆ ಆತಂಕ ಬೇಡ:

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅನುಷ್ಠಾನದ ಬಗ್ಗೆ ಯಾರಿಗೂ ಆತಂಕ ಬೇಡ. ಕಾನೂನು ಮತ್ತು ನಿಯಮಗಳನ್ನು ಅರಿತುಕೊಂಡು, ಜಾಗರೂಕರಾಗಿರಬೇಕು ಎಂದು ಖಾದರ್‌ ಹೇಳಿದರು.

1955ರಲ್ಲೇ ನಾಗರಿಕ ಹಕ್ಕು ಕಾಯ್ದೆ ಜಾರಿಯಾಗಿದೆ. 2003ರಲ್ಲಿ ನಿಯಮ ರಚಿಸಲಾಗಿತ್ತು. ಈಗ ಪರಿಷ್ಕರಣೆ ಮಾಡಿ, ಜಾರಿಗೆ ತರಲಾಗುತ್ತಿದೆ. ಕಾಯ್ದೆಯ ಅನುಷ್ಠಾನದಲ್ಲಿ ಇದರಲ್ಲಿ ಲೋಪದೋಷ ಇದ್ದಲ್ಲಿ ಸರಿಪಡಿಸಬೇಕು. ಬಡವರು, ನಿರ್ಗತಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

‘ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡಬಾರದು’ ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಖಾದರ್‌, ‘ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಸಚಿವರು ಗೊಂದಲ ಈ ವಿಚಾರದಲ್ಲಿ ಸೃಷ್ಟಿಸುತ್ತಿದ್ದಾರೆ. ಎನ್‌ಆರ್‌ಸಿ ಜಾರಿಯ ವಿಚಾರದಲ್ಲಿ ರಾಜ್ಯದ ಗೃ ಸಚಿವರು ಸ್ಪಷ್ಟವಾದ ಹೇಳಿಕೆ ನೀಡಬೇಕು’ ಎಂದರು.

ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಮುಹಮ್ಮದ್ ಕುಂಞಿ, ಫಾರೂಕ್, ಸುದರ್ಶನ್ ಶೆಟ್ಟಿ, ಸಿರಾಜ್, ಸುನೀತಾ ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)