ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ಕ್ವೇರ್‌ ಫೀಟ್‌ ಮಂತ್ರಿ‘ ಹುದ್ದೆ ಸೃಷ್ಟಿಸಿದರೂ ಆಶ್ಚರ್ಯವಿಲ್ಲ: ವಿಜಯೇಂದ್ರ

Published 30 ಜನವರಿ 2024, 16:31 IST
Last Updated 30 ಜನವರಿ 2024, 16:31 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಬೆಂಗಳೂರಿನಲ್ಲಿ ಜಾಗ ಖರೀದಿಸುವವರು ಪ್ರತಿ ಚದರ ಅಡಿಗೆ ನೂರು ರೂಪಾಯಿ ಲಂಚ ನೀಡಬೇಕು. ರಾಜ್ಯದ ಮಂತ್ರಿ ಮಂಡಲ ವಿಸ್ತರಣೆಯಾಗುವಾಗ ‘ಸ್ಕ್ವೇರ್‌ ಫೀಟ್‌ ಮಂತ್ರಿ’ ಎಂಬ ಹುದ್ದೆ ಸೃಷ್ಟಿಸಿದರೂ ಆಶ್ಚರ್ಯವಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಗಿ ಹೇಳಿದರು.

ಇಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸತೀಶ್‌ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಬೆಂಗಳೂರಿನಲ್ಲಿ ಮನೆ ನಿರ್ಮಾಣದ ವಿನ್ಯಾಸ ಮಂಜೂರಾತಿ ವೇಳೆ, ಮಂಜೂರಾತಿ ಆದ ಬಳಿಕ, ವಿದ್ಯುತ್‌ ಸಂಪರ್ಕ ಪಡೆಯುವಾಗ ಪ್ರತಿ ಬಾರಿಯೂ ಸ್ಕ್ವೇರ್‌ ಫೀಟ್‌ಗೆ ನೂರು ರೂಪಾಯಿಯಂತೆ ಹಣ ನೀಡಬೇಕಾದ ಸ್ಥಿತಿ ಇದೆ. ಇಷ್ಟಾಗಿಯೂ ಕಾಂಗ್ರೆಸ್‌ನವರು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಮಾಡುತ್ತಾರೆ’ ಎಂದರು.

‘ಈ ಸರ್ಕಾರ ಅಧಿಕಾರಿಕ್ಕೆ ಬಂದ ನಾಲ್ಕು ತಿಂಗಳಲ್ಲೇ ನಡೆದ ಆದಾಯ ತೆರಿಗೆ ದಾಳಿ ವೇಳೆ ಕಾಂಗ್ರೆಸ್‌ ನಾಯಕರ ಮನೆಯೊಂದರಲ್ಲಿ ₹ 150 ಕೋಟಿಗೂ ಅಧಿಕ ಹಣ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ ಮುಖಂಡರು, ‘ಕೇಂದ್ರದ ಬಿಜೆಪಿ ಸರ್ಕಾರ ನಮ್ಮನ್ನು ಗುರಿಯಾಗಿಸಿ ದಾಳಿ ಮಾಡಿದೆ’ ಎಂದರೇ ಹೊರತು, ಕಪ್ಪುಹಣ ಪತ್ತೆಯಾದ ವ್ಯಕ್ತಿಯನ್ನು ಬಂಧಿಸಿ ಎಂದು ಹೇಳಿಲ್ಲ. ದಾಳಿ ವೇಳೆ ಸಿಕ್ಕಿದ ಹಣ ಕಾಂಗ್ರೆಸ್‌ ಪಕ್ಷದ್ದೇ ಎಂದು ಅವರು ಒಪ್ಪಿದ್ದಾರೆ’ ಎಂದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT