ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಉಪಬೆಳೆ ಜಾಯಿಕಾಯಿಗೆ ‘ದೋಷ’ ಬಾಧೆ!

ಉತ್ತಮ ಫಸಲು, ಕನಿಷ್ಠ ನಿರ್ವಹಣೆ, ಅಧಿಕ ಆದಾಯ
Published 12 ಏಪ್ರಿಲ್ 2024, 6:15 IST
Last Updated 12 ಏಪ್ರಿಲ್ 2024, 6:15 IST
ಅಕ್ಷರ ಗಾತ್ರ

ಮಂಗಳೂರು: ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆಯಬಹುದಾದ ಜಾಯಿಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ, ಕೃಷಿಕರ ನಿರಾಸಕ್ತಿಯಿಂದಾಗಿ ಈ ಬೆಳೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಹಿತವಾದ ಪರಿಮಳದ ಜಾಯಿಕಾಯಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಸಂಬಾರ ಪದಾರ್ಥ. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುವ ಜಾಯಿಕಾಯಿ ಬಲಿತ ನಂತರ ದೊರೆಯುವ ಪತ್ರೆ ಮತ್ತು ಗೋಟು (ಕಾಯಿ) ಎರಡಕ್ಕೂ ಗರಿಷ್ಠ ಬೆಲೆ ಲಭ್ಯವಾಗುತ್ತಿದೆ.

‘ಅಡಿಕೆ, ತೋಟದ ರಾಜನಾದರೂ, ಕಾಳುಮೆಣಸು, ಜಾಯಿಕಾಯಿ, ಕೊಕ್ಕೊ ಇವೆಲ್ಲ ಸೈನಿಕರಂತೆ. ಮುಖ್ಯ ಬೆಳೆ ಮುಗ್ಗರಿಸಿದಾಗ ಉಪ ಬೆಳೆಗಳು ಕೃಷಿಕನ ಕೈ ಹಿಡಿಯುತ್ತವೆ. ಒಂದು ಎಕರೆ ಅಡಿಕೆ ತೋಟದಲ್ಲಿ 40 ಅಡಿ ಅಂತರದಲ್ಲಿ 20ರಿಂದ 22 ಗಿಡಗಳನ್ನು ನಾಟಿ ಮಾಡಬಹುದು. ಅಡಿಕೆ ಮರ ಎತ್ತರಕ್ಕೆ ಹೋದಂತೆ, ನಿಧಾನಕ್ಕೆ ಅದರ ಆಯಸ್ಸು ಕಡಿಮೆಯಾಗಬಹುದು. ಆದರೆ, ಜಾಯಿಕಾಯಿಗೆ ಶತಮಾನಕ್ಕೂ ಅಧಿಕ ಆಯಸ್ಸು. ಗಿಡ ಬೆಳೆಯುತ್ತ ಹೋದಹಾಗೆ ಗೆಲ್ಲು (ಟೊಂಗೆ) ಹೆಚ್ಚಾಗಿ, ಹೆಚ್ಚು ಫಲ ಸಿಗುತ್ತದೆ. ಅಡಿಕೆಗಿಂತ ತುಸು ಹೆಚ್ಚು ಗೊಬ್ಬರ ಹಾಕುವುದಷ್ಟೇ ಇದಕ್ಕೆ ಬೇಕಾಗುವ ನಿರ್ವಹಣೆ’ ಸುಳ್ಯ ತಾಲ್ಲೂಕು ಕಲ್ಮಡ ಗ್ರಾಮದ ಬೆಳೆಗಾರ ಸುರೇಶ್ಚಂದ್ರ ತೊಟ್ಟೆತೋಡಿ.

‘2011ರಲ್ಲಿ ಸುಮಾರು 300 ಗಿಡಗಳನ್ನು ನಾಟಿ ಮಾಡಿದ್ದು, ಶೇ 70ರಷ್ಟು ಫಲ ಕೊಡುತ್ತಿವೆ. ಒಂದು ಮರದಿಂದ ಸರಾಸರಿ ₹2,000 ಆದಾಯ ನಿರೀಕ್ಷಿಸಬಹುದು. 25 ವರ್ಷ ಆಯಸ್ಸಿನ ಒಂದು ಮರದಿಂದ ₹10 ಸಾವಿರದಿಂದ ₹25 ಸಾವಿರದಷ್ಟು ಆದಾಯ ಸಿಗಬಹುದು. ಕಸಿ ಗಿಡ ಒಂದು ವರ್ಷಕ್ಕೆ ಫಲ ಕೊಡುತ್ತದೆ. ಉತ್ಪನ್ನಗಳ ಮಾರುಕಟ್ಟೆಗೂ ಸಮಸ್ಯೆ ಇಲ್ಲ. ಆದರೆ, ಜಾಯಿಕಾಯಿ ಬಲಿತು ಮರದಿಂದ ಬಿದ್ದಾಗಲೇ ಅದನ್ನು ಹೆಕ್ಕಿ, ಸಂಸ್ಕರಣೆ ಮಾಡಬೇಕಾಗುತ್ತದೆ. ಇದಕ್ಕೆ ಉದಾಸೀನ ತೋರಬಾರದು. ‘ಜಾಯಿಕಾಯಿ ನಮ್ಮಲ್ಲಿ ಬೆಳೆಯಲು ಆಗದು’ ಎನ್ನುವ ಮನೋಭಾವವೇ ಈ ಬೆಳೆಯ ಪ್ರದೇಶ ವಿಸ್ತರಣೆಗೆ ಆಗಿರುವ ಹಿನ್ನಡೆ. ಈ ದೋಷ ಪರಿಹಾರವಾದರೆ, ಜಾಯಿಕಾಯಿ ಎಲ್ಲ ರೈತರ ತೋಟದಲ್ಲಿ ನಳನಳಿಸಬಹುದು’ ಎನ್ನುವುದು ಅವರ ಸಲಹೆ.

ಅಡಿಕೆ ಹಳದಿ ರೋಗಕ್ಕೆ ತುತ್ತಾಗಿರುವ ಸುಳ್ಯ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಪರ್ಯಾಯ ಬೆಳೆಗೆ ತೋಟಗಾರಿಕಾ ಇಲಾಖೆ ನೆರವು ನೀಡುತ್ತಿದೆ. ಈ ನೆರವು ಪಡೆದು ಜಾಯಿಕಾಯಿ ಗಿಡ ಹಾಕಿದವರಲ್ಲಿ ಸುಳ್ಯ ತಾಲ್ಲೂಕಿನ ಅರಂಬೂರಿನ ಪದ್ಮನಾಭ ನಾಯರ್. ‘ಲಾಭದಾಯಕ ಎಂದು ಹಲವರು ಸಲಹೆ ನೀಡಿದ್ದರಿಂದ 100 ಗಿಡ ನಾಟಿ ಮಾಡಿದ್ದು, ಮೂರನೇ ವರ್ಷಕ್ಕೆ ಫಸಲು ಬಂದಿದೆ. ಜಿಲ್ಲೆಯ ಹವಾಮಾನಕ್ಕೆ ಈ ಬೆಳೆ ಸೂಕ್ತವಾಗಿದೆ’ ಎನ್ನುತ್ತಾರೆ ಅವರು.

ಕಸಿ ಗಿಡವೊಂದಕ್ಕೆ ₹300ರಿಂದ ₹2,000ವರೆಗೆ ದರ ಜಾಯಿಪತ್ರೆ ಕೆ.ಜಿ.ಗೆ ₹1,100 ದರ ಜಾಯಿಕಾಯಿ ಕೆ.ಜಿ.ಗೆ ₹220 ದರ

ಇಲಾಖೆಯಿಂದ ಸಹಾಯಧನ ಲಭ್ಯ

ಜಾಯಿಕಾಯಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಶ್ರಬೆಳೆಯಾಗಿ ಬೆಳೆಯಬಹುದು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಅಡಿಯಲ್ಲಿ ಇದಕ್ಕೆ ಸಹಾಯಧನವೂ ದೊರೆಯುತ್ತದೆ. ಮಾರುಕಟ್ಟೆ ಸಮಸ್ಯೆಯೂ ಇಲ್ಲ. ಇಲಾಖೆಯಿಂದ ಸಾಕಷ್ಟು ಪ್ರೋತ್ಸಾಹ ನೀಡಿದರೂ ಅಡಿಕೆ ಕೃಷಿಕರು ಉಪಬೆಳೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಜಾಯಿಕಾಯಿ ಕ್ಷೇತ್ರ ವಿಸ್ತರಣೆ ಅಷ್ಟಾಗಿ ಆಗುತ್ತಿಲ್ಲ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಪ್ರವೀಣ್.   

ಜಾಯಿಕಾಯಿ ಬೆಳೆಯುವ ಪ್ರದೇಶ

ತಾಲ್ಲೂಕು;ಪ್ರದೇಶ (ಹೆಕ್ಟೇರ್‌ಗಳಲ್ಲಿ)

ಬಂಟ್ವಾಳ;5.68

ಬೆಳ್ತಂಗಡಿ;0.82

ಕಡಬ;5.29

ಮಂಗಳೂರು;0.35

ಪುತ್ತೂರು;17.26

ಸುಳ್ಯ;21.64

ಮೂಡುಬಿದಿರೆ;0

ಮೂಲ್ಕಿ;0

ಉಳ್ಳಾಲ;0

ಒಟ್ಟು;51.04

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT