ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಗ್ಯಾರಂಟಿ ಬೇಕೋ, ಮೋದಿ ಗ್ಯಾರಂಟಿ ಬೇಕೋ

ಚುನಾವಣೆಯಲ್ಲಿ ಜನರಿಂದಲೇ ಉತ್ತರ: ವಿನಯ್ ಕುಮಾರ್‌ ಸೊರಕೆ
Published 17 ಏಪ್ರಿಲ್ 2024, 5:19 IST
Last Updated 17 ಏಪ್ರಿಲ್ 2024, 5:19 IST
ಅಕ್ಷರ ಗಾತ್ರ

ಮಂಗಳೂರು: ‘ಈ ಲೋಕಸಭಾ ಚುನಾವಣೆಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಯನ್ನು ನಂಬುತ್ತಾರೋ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಗ್ಯಾರಂಟಿಗಳನ್ನು ನಂಬುತ್ತಾರೋ ಎಂಬುದು ತೀರ್ಮಾನವಾಗಲಿದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಮನೆ ಮನೆಗೆ ಗ್ಯಾರಂಟಿ ಯೋಜನೆ ತಲುಪಿಸಿ ನುಡಿದಂತೆ ನಡೆದಿದ್ದೇವೆ. ಈ ಯೋಜನೆ ಶೇ 80ರಷ್ಟು ಬಡವರನ್ನು ತಲುಪುತ್ತಿದೆ. ಈ ಹಿಂದೆ ಬಿಜೆಪಿಗೆ ಬೀಳುತ್ತಿದ್ದ ಶೇ 10ರಿಂದ ಶೇ 15ರಷ್ಟು ಮತಗಳು  ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್‌ಗೆ ಬೀಳಲಿವೆ. ರಾಜ್ಯದಲ್ಲಿ ಪಕ್ಷವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಲಕ್ಷಣವನ್ನು ಕಾಣುತ್ತಿದ್ದೇವೆ. ಉಡುಪಿ–ಚಿಕ್ಕಮಗಳೂರು ಕ್ಷೇತ್ರವನ್ನು ನಾವೇ ಗೆಲ್ಲುತ್ತೇವೆ. ದಕ್ಷಿಣ ಕನ್ನಡದಲ್ಲೂ ಗೆಲ್ಲುವ ಅವಕಾಶ ಇದೆ’ ಎಂದರು.

‘ಕಾಂಗ್ರೆಸ್‌ ಪಕ್ಷವು ಗ್ಯಾರಂಟಿ ಯೋಜನೆಗಳು ಅನುಷ್ಠಾನವಾಗುತ್ತದೆ ಎಂದು ಯಾರೂ ನಂಬಲಿಲ್ಲ. ಗ್ಯಾರಂಟಿ ಕಾರ್ಡ್‌ಗಳನ್ನು ಕಸದ ಬುಟ್ಟಿಗೆ ಹಾಕಿ ಎಂದು ಬಿಜೆಪಿಯವರು ಹೇಳಿದರು. ಗ್ಯಾರಂಟಿ ಅನುಷ್ಠಾನವಾದರೆ ತಲೆ ಬೋಳಿಸುತ್ತೇನೆ ಎಂದು  ಬಿಜೆಪಿಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಸವಾಲು ಹಾಕಿದ್ದರು. ಐದೂ ಗ್ಯಾರಂಟಿಗಳು ಅನುಷ್ಠಾನ ಆದ ಬಳಿಕ ಅವರಿಗೆ ವಿವಿಧ ಬ್ರ್ಯಾಂಡ್‌ಗಳ ಬ್ಲೇಡ್‌ಗಳನ್ನು ಕಳುಸಹಿಸಿದ್ದೇವೆ’ ಎಂದರು.

‘ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಬಡ ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷದಷ್ಟು ಹಣವನ್ನು ಸಂದಾಯವಾಗಲಿದೆ. ದೇಶದಲ್ಲಿ 2013ರಲ್ಲಿ ಶೇ 4.9ರಷ್ಟಿದ್ದ ನಿರುದ್ಯೋಗ ಪ್ರಮಾಣ ಈಗ ಶೇ 8 ಕ್ಕೆ ತಲುಪಿದೆ. ನಾವು ನಿರುದ್ಯೋಗಿ ಯುವಕರಿಗೆ ಭತ್ಯೆ ಘೋಷಿಸಿದ್ದೇವೆ. ರೈತರ ಸಾಲ ಮನ್ನಾ ಮಾಡುತ್ತೇವೆ. ಕೃಷಿಯುತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲಿದ್ದೇವೆ. ಕೃಷಿ ಉಪಕರಣ ಜಿಎಸ್‌ಟಿ ತೆಗೆಯುತ್ತೇವೆ’ ಎಂದು ಭರವಸೆ ನೀಡಿದರು. 

‘ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಶೇ 70ರಷ್ಟಿದ್ದ ಬಡತನ 2014ರಲ್ಲಿ ಶೇ 14.8 ಕ್ಕೆ ಇಳಿದಿತ್ತು. ಈಗ 19 ಕೋಟಿ ಜನ ಒಪ್ಪೊತ್ತಿನ ಊಟ ಇಲ್ಲದೇ ಹಸಿದ ಹೊಟ್ಟೆಯಲ್ಲಿ ಮಲಗುವ ಸ್ಥಿತಿ ಇದೆ’ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್‌, ‘ಮಂಗಳೂರಿಗೆ ಬಂದ ನರೇಂದ್ರ ಮೋದಿ ಅವರು ಏನಾದರೂ ಸಂದೇಶ ನೀಡಬಹುದು ಎಂಬ ನಿರೀಕ್ಷೆ ಇತ್ತು. ಅವರು ಒಂದು ಮಾತನ್ನೂ ಆಡದೇ ಮರಳಿದ್ದಾರೆ. ನಾವು ಕೇಳಿದ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ. ಕನಿಷ್ಠಪಕ್ಷ ಅವರ ಸಂಸದರು ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂಬುದನ್ನಾದರೂ ಹೇಳಬಹುದಿತ್ತು’ ಎಂದರು. 

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೃಷ್ಣಪ್ಪ, ಟಿ.ಎಂ.ಶಹೀದ್, ಶಾಲೆಟ್ ಪಿಂಟೊ, ಟಿ.ಕೆ.ಸುಧೀರ್, ಸದಾನಂದ ಮಾವಜಿ, ನೀರಜ್ ಪಾಲ್, ಯೋಗೇಶ್ ಕುಮಾರ್ ಭಾಗವಹಿಸಿದ್ದರು.

‘ಜಲಸಿರಿ ನಲ್ಲಿಯಲ್ಲಿ ಗಾಳಿ ಮಾತ್ರ ನೀರಿಲ್ಲ’

‘ಕೇಂದ್ರದ ಜಲಸಿರಿ ಯೋಜನೆಯಡಿ ಮನೆ ಮನೆಗೆ ಕೊಳವೆಗಳ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಕುಡಿಯುವ ನೀರಿನ ಮೂಲವನ್ನೇ ಕಂಡುಕೊಂಡಿಲ್ಲ. ಹಾಗಾಗಿ ಈ ಯೋಜನೆಯ ನಲ್ಲಿಗಳಲ್ಲಿ ಗಾಳಿ ಬರು‌ತ್ತದೆಯೇ ಹೊರತು ನೀರು ಬರುವುದಿಲ್ಲ. ಬೇಟಿ ಪಢಾವೊ ಬೇಟಿ ಬಚಾವೊ ಎಂಬ ಘೋಷವಾಕ್ಯ ಕೇಂದ್ರದ್ದು ವಿದ್ಯಾರ್ಥಿನಿಯರ ಶುಲ್ಕ ಕಟ್ಟುವುದು ನಾವು. ಅವರಿಗೆ ಸಮವಸ್ತ್ರ ಪುಸ್ತಕ ಕೊಡುವುದು ನಾವು. ಆದರೆ ಫ್ಲೆಕ್ಸ್‌ಗಳಲ್ಲಿ ಮೋದಿಯವರ ಚಿತ್ರ. ಹಿಡಿಸೂಡಿ ನಮ್ಮದು ಗುಡಿಸುವುದು ನಾವು. ಆದರೆ ಸ್ವಚ್ಛಭಾರತ ಯೋಜನೆಯಲ್ಲಿ ಪೋಟೊ ‌ಮಾತ್ರ ಮೋದಿಯವರದು’ ಎಂದು ಸೊರಕೆ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT