ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಖಾರ್‌ಲ್ಯಾಂಡ್‌ ಕಾಮಗಾರಿಗೆ ನದಿ ಒತ್ತುವರಿ?

Published 17 ಮೇ 2024, 7:00 IST
Last Updated 17 ಮೇ 2024, 7:00 IST
ಅಕ್ಷರ ಗಾತ್ರ

ಮಂಗಳೂರು: ಒಂದೆಡೆ ಕಾಂಡ್ಲ ಸಸ್ಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರವೇ ‘ಮಿಸ್ಟಿ’ ಯೋಜನೆ ಹಮ್ಮಿಕೊಂಡಿದ್ದರೆ, ಇನ್ನೊಂದೆಡೆ ಸರ್ಕಾರದ ಕಾಮಗಾರಿಗಳಿಂದಾಗಿಯೇ ಕಾಂಡ್ಲ ಕಾಡುಗಳು ಆಪತ್ತು ಎದುರಿಸುವ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ಫಲ್ಗುಣಿ ನದಿ ದಂಡೆಯುದ್ದಕ್ಕೂ ನಗರದ ದಂಬೆಲ್‌ನಲ್ಲಿ ಲೋಡ್‌ಗಟ್ಟಲೆ ಮಣ್ಣು ಸುರಿದು ಒತ್ತುವರಿ ಮಾಡಲಾಗಿದ್ದು, ಇಲ್ಲಿನ ಕಾಂಡ್ಲ ಗಿಡಗಳು ನಾಶವಾಗುವ ಆತಂಕ ಎದುರಾಗಿದೆ.

‘ದಂಬೆಲ್‌ನಲ್ಲಿ ಮಣ್ಣು ಸುರಿದು 2ಮೀಟರ್‌ನಿಂದ 3 ಮೀಟರ್‌ವರೆಗೆ ನದಿಯನ್ನು ಒತ್ತುವರಿ ಮಾಡಲಾಗಿದೆ. ಫಲ್ಗುಣಿಯನ್ನು ಸೇರುವ ತೊರೆಯ ಪಕ್ಕವೂ ಮಣ್ಣು ಸುರಿಯಲಾಗಿದೆ. ಕೆಲವು ಕಡೆ ಏಳೆಂಟು ಮೀಟರ್‌ಗಳಷ್ಟು ನದಿ  ಒತ್ತುವರಿಯಾಗಿದೆ’ ಎಂದು ದೂರುತ್ತಾರೆ ಸ್ಥಳೀಯರು. ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ನದಿಗೆ ಲೋಡ್‌ಗಟ್ಟಲೆ ಮಣ್ಣು ಸುರಿದಿರುವುದು ಗುರುವಾರ ಕಂಡುಬಂತು. ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕಾಂಡ್ಲ ಸಸ್ಯಗಳೂ ಇದ್ದವು.

‘ಯಾವ ಕಾಮಗಾರಿ ನಡೆಯುತ್ತಿದೆ ಎಂಬ ಕುರಿತು ಸ್ಥಳದಲ್ಲಿ ಯಾವುದೇ ಮಾಹಿತಿ ಫಲಕವಿಲ್ಲ. ಸುಮಾರು ಒಂದೂವರೆ ತಿಂಗಳುಗಳಿಂದ ಇಲ್ಲಿ ಮಣ್ಣು ಕಲ್ಲು ತಂದು ಸುರಿಯುತ್ತಿದ್ದಾರೆ. ಇಲ್ಲಿ ಯಾವ ಕೆಲಸ ನಡೆಯುತ್ತಿದೆ ಎಂದೇ ನಮಗೆ ತಿಳಿದಿಲ್ಲ’ ಎನ್ನುತ್ತಾರೆ ದಂಬೆಲ್‌ ನಿವಾಸಿ ರವಿ.

ಕಾಮಗಾರಿ ನಡೆಯುತ್ತಿರುವ ದಂಬೆಲ್‌ ಪ್ರದೇಶವು ಬಂಗ್ರಕುಳೂರು ವಾರ್ಡ್‌ಗೆ ಸೇರಿದ್ದಾಗಿದೆ. ಇಲ್ಲಿನ ಪಾಲಿಕೆ ಸದಸ್ಯ ಕಿರಣ್‌ ಕೋಡಿಕಲ್‌ ಪ್ರಕಾರ, ಇಲ್ಲಿ ಖಾರ್‌ಲ್ಯಾಂಡ್‌ ಯೋಜನೆಯಡಿ ಸಮುದ್ರದ ಕಡೆಯಿಂದ ನದಿಗೆ ಹರಿದುಬರುವ ಉಪ್ಪು ನೀರಿನ ಹರಿವನ್ನು ತಡೆಯಲು ಬದುವನ್ನು ನಿರ್ಮಿಸಲಾಗುತ್ತಿದೆ.

‘ಖಾರ್‌ಲ್ಯಾಂಡ್‌ ಯೋಜನೆಯಡಿ ₹8 ಕೋಟಿ ವೆಚ್ಚದಲ್ಲಿ ಬದು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಾಗಿ ನದಿಯನ್ನು ಒತ್ತುವರಿ ಮಾಡುತ್ತಿಲ್ಲ. ಅದರ ಬದಲು, ಶಿಲೆಕಲ್ಲುಗಳನ್ನು ಜೋಡಿಸಿ ದಂಡೆಯನ್ನು ಮತ್ತಷ್ಟು ಸದೃಢಗೊಳಿಸಲಾಗುತ್ತದೆ. ನದಿ ಒತ್ತುವರಿಯಾಗುವುದನ್ನು ಇದು ತಡೆಯಲಿದೆ’ ಎಂದು ಕಿರಣ್ ತಿಳಿಸಿದರು.

ಕಾಂಡ್ಲ ಕಾಡುಗಳ ಪುನರುಜ್ಜೀವನಕ್ಕಾಗಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ'ಕಡಲ ತೀರದ ಆವಾಸಸ್ಥಾನಗಳಲ್ಲಿ ಕಾಂಡ್ಲ ಬೆಳೆಸುವ, ಅವುಗಳ ಉಪಯುಕ್ತತೆಯ ಅರಿವು ಮೂಡಿಸುವ ಮತ್ತು ಮಹತ್ವ ಸಾರುವ ಕಾರ್ಯಕ್ರಮವನ್ನು (ಮಿಸ್ಟಿ) ಅನುಷ್ಠಾನಗೊಳಿಸುತ್ತಿದೆ. ಇನ್ನೊಂದೆಡೆ ಸರ್ಕಾರಿ ಕಾಮಗಾರಿಗಾಗಿಯೇ ಕಾಂಡ್ಲ ಸಸಿಗಳನ್ನು ನಾಶಪಡಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಪರಿಸರ ಕಾರ್ಯಕರ್ತರು.

‘ನದಿಯ ಆರೋಗ್ಯವನ್ನು ಕಾಪಾಡಬೇಕಾದುದು ಎಲ್ಲರ ಕರ್ತವ್ಯ. ನದಿಗೆ ಮಣ್ಣು, ಕಸ ಸುರಿಯುವುದನ್ನು ಕಂಡು ಬೇಸರವಾಗುತ್ತದೆ. ನದಿ ಹಾಗೂ ತೊರೆಗೆ ಮಣ್ಣು ಹಾಕಿ ಒತ್ತುವರಿ ಮಾಡಿ ಕಾಮಗಾರಿ ನಡೆಸಲು ನಿಯಮಗಳಲ್ಲಿ ಅವಕಾಶ ಇಲ್ಲ. ನದಿಯ ಅಗಲ ಕಡಿಮೆಯಾಗುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಪರಿಸರ ಕಾರ್ಯಕರ್ತ ಲಾಯ್ಡ್‌ ಆರ್‌.ಡಿಸೋಜ ಒತ್ತಾಯಿಸಿದರು. 

ಬಂಗ್ರಕೂಳೂರಿನ ಪಡ್ಪು ಹೌಸ್‌ ಬಳಿ ಫಲ್ಗುಣಿ ನದಿಯನ್ನು ಸೇರುವ ತೊರೆಗೆ ಖಾಸಗಿ ಜಮೀನಿನ ಮಾಲೀಕರೊಬ್ಬರು ಮಣ್ಣು ಸುರಿದು ಒತ್ತುವರಿ ಮಾಡಿರುವುದು– ಪ್ರಜಾವಾಣಿ ಚಿತ್ರ
ಬಂಗ್ರಕೂಳೂರಿನ ಪಡ್ಪು ಹೌಸ್‌ ಬಳಿ ಫಲ್ಗುಣಿ ನದಿಯನ್ನು ಸೇರುವ ತೊರೆಗೆ ಖಾಸಗಿ ಜಮೀನಿನ ಮಾಲೀಕರೊಬ್ಬರು ಮಣ್ಣು ಸುರಿದು ಒತ್ತುವರಿ ಮಾಡಿರುವುದು– ಪ್ರಜಾವಾಣಿ ಚಿತ್ರ
ದಂಬೆಲ್‌ನಲ್ಲಿ ನಡೆಯುತ್ತಿರುವ ಖಾರ್‌ಲ್ಯಾಂಡ್‌ ಕಾಮಗಾರಿಯಿಂದ ಜನರಿಗೆ ಅನುಕೂಲವೇ ಆಗಲಿದೆ. ಈ ಕಾಮಗಾರಿಗಾಗಿ ಯಾವುದೇ ನದಿ ಅಥವಾ ತೊರೆಯನ್ನು ಒತ್ತುವರಿ ಮಾಡಿಲ್ಲ
ಕಿರಣ್ ಕೋಡಿಕಲ್‌, ಪಾಲಿಕೆ ಸದಸ್ಯ
ಕಾಮಗಾರಿಗಾಗಿ ಫಲ್ಗುಣಿ ನದಿ ಹಾಗೂ ಅದರ ತೊರೆಗೆ ಮಣ್ಣು ಸುರಿದು ಒತ್ತುವರಿ ಮಾಡಲಾಗಿದೆ. ದಂಬೆಲ್‌ ಹಾಗೂ ಬಂಗ್ರಕೂಳೂರು ಪ್ರದೇಶದಲ್ಲಿ ತೊರೆಯ ಒತ್ತುವರಿ ವ್ಯಾಪಕವಾಗಿ ನಡೆಯುತ್ತಿದೆ
- ಲಾಯ್ಡ್‌ ಆರ್‌.ಡಿಸೋಜ, ಪರಿಸರ ಕಾರ್ಯಕರ್ತ

‘ಸಿಆರ್‌ಜೆಡ್‌ ಅನುಮತಿ ನೀಡಿಲ್ಲ’

ಫಲ್ಗುಣಿ ನದಿ ಹಾಗೂ ಅದನ್ನು ಸೇರುವ ತೊರೆಗಳು ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ಬರುತ್ತವೆ. ‘ದಂಬೇಲ್‌ನಲ್ಲಿ ಯಾವುದೇ ಕಾಮಗಾರಿ ನಡೆಸಲು ಅನುಮತಿ ನೀಡಿಲ್ಲ. ಅಲ್ಲಿ ಸರ್ಕಾರದ ಕಾಮಗಾರಿ ನಡೆಯುತ್ತಿರುವುದೂ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಆರ್‌ಜೆಡ್‌ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರೂ ಆಗಿರುವ ಉಪಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್‌.ಮರಿಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಖಾರ್‌ಲ್ಯಾಂಡ್‌ ಯೋಜನೆಯ ಕಾಮಗಾರಿಯ ಅನುಷ್ಠಾನದ ಹೊಣೆ ಹೊತ್ತಿರುವುದು ಸಣ್ಣ ನೀರಾವರಿ ಇಲಾಖೆ. ಆದರೆ ಈ ಇಲಾಖೆಯ ಅಧಿಕಾರಿಗಳಿಗೇ ದಂಬೆಲ್‌ನ ಕಾಮಗಾರಿಗೆ ಸಿಆರ್‌ಜೆಡ್‌ ಅನುಮತಿ ಪಡೆಯಲಾಗಿದೆಯೇ ಇಲ್ಲವೇ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ‘ಜಿಲ್ಲೆಯಲ್ಲಿ ಅನೇಕ ಕಡೆ ನದಿ ದಂಡೆಗಳನ್ನು ಬಲಪಡಿಸುವ ಕಾಮಗಾರಿ ನಡೆಯುತ್ತಿದೆ. ದಂಬೆಲ್‌ನ ಕಾಮಗಾರಿ ಈ ಬಗ್ಗೆ ಪರಿಶೀಲಿಸಿ ಪ್ರತಿಕ್ರಿಯಿಸುತ್ತೇನೆ’ ಎಂದು ಸಣ್ಣ ನೀರಾವರಿ ಇಲಾಖೆಯ ಮಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕೆ.ಸಯ್ಯದ್‌ ಅತೀಕುರ್‌ ರೆಹಮಾನ್‌ ಇದ್ರೂಸ್‌ ತಿಳಿಸಿದರು.

ಬಂಗ್ರಕೂಳೂರು: ಖಾಸಗಿಯವರಿಂದ ತೊರೆ ಒತ್ತುವರಿ ಬಂಗ್ರಕೂಳೂರು ವಾರ್ಡ್‌ನ ಪಡ್ಪು ಹೌಸ್‌ ಪ್ರದೇಶದಲ್ಲಿ ಫಲ್ಗುಣಿ ನದಿಯನ್ನು ಸೇರುವ ತೊರೆಗೆ ಲೋಡ್‌ಗಟ್ಟಲೆ ಮಣ್ಣು ಸುರಿಯಲಾಗಿದೆ. ಈ ಹಿಂದೆ ನೀರು ನಿಲ್ಲುತ್ತಿದ್ದ ಜವುಗು ಪ್ರದೇಶಕ್ಕೂ ಮಣ್ಣು ಸುರಿದು ಆ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಇಲ್ಲಿ ತೊರೆಯು ಸುಮಾರು 10 ಮೀಟರ್‌ಗೆ ಹೆಚ್ಚು ಒತ್ತುವರಿಯಾಗಿದೆ.

‘ರಾತ್ರೋರಾತ್ರಿ ಲೋಡ್‌ಗಟ್ಟಲೆ ಮಣ್ಣು ತಂದು ಸುರಿದು ಒತ್ತುವರಿ ಮಾಡಲಾಗುತ್ತಿದೆ. ಈ ಅಕ್ರಮ ನಡೆಸುವವರನ್ನು ಹೇಳುವವರು ಕೇಳುವವರು ಯಾರೂ ಇಲ್ಲ’ ಎಂದು ದೂರುತ್ತಾರೆ ಲಾಯ್ಡ್‌ ಆರ್‌.ಡಿಸೋಜ ‘ಫಲ್ಗುಣಿ ನದಿಯನ್ನು ಸೇರುವ ತೊರೆಯು ಅಲ್ಲಲ್ಲಿ ಒತ್ತುವರಿಯಾಗಿದೆ. ಈ ಬಗ್ಗೆ ಕಂದಾಯ ಇಲಾಖೆಯ ಗಮನಕ್ಕೆ ತಂದರೂ ಕ್ರಮವಾಗಿಲ್ಲ. ಈ ಹಿಂದೆ ರಾಜೇಂದ್ರ ಕೆ.ವಿ. ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ಫಲ್ಗುಣಿ ನದಿಯ ಉದ್ದಕ್ಕೂ ಸರ್ಕಾರಿ ಜಾಗಕ್ಕೆ ಬೇಲಿ ಹಾಕಲು ಕ್ರಮವಹಿಸಿದ್ದರು. ಅವರ ವರ್ಗವಾದ ಬಳಿಕ ಮತ್ತೆ ಒತ್ತುವರಿ ವ್ಯಾಪಕವಾಗಿದೆ’ ಎಂದು ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ಬೇಸರ ವ್ಯಕ್ತಪಡಿಸಿದರು.

‘ಬಂಗ್ರಕೂಳೂರಿನಲ್ಲಿ ತೊರೆ ಒತ್ತುವರಿ ಮಾಡಿದವರಿಗೆ ನೋಟಿಸ್‌ ನೀಡಿದ್ದೇವೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದೇವೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀಧರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT