ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ನಟನೆ ಸುಧಾರಿಸಿತು’

Last Updated 27 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸುಕೇಶ್‌ ನಾಯಕ್‌ ನಿರ್ದೇಶನದ ‘ಕೃಷ್ಣ ತುಳಸಿ’ ಸಿನಿಮಾ ಸಾಕಷ್ಟು ಕಾರಣಗಳಿಂದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಮಲೆನಾಡಿನ ಮುದ್ದು ಬೆಡಗಿ ಮೇಘಶ್ರೀ ಚಿತ್ರದ ನಾಯಕಿ. ಈ ಸಿನಿಮಾದಲ್ಲಿ ನಾಲ್ಕು ಗೀತೆಗಳಿದ್ದು ಅವು ಈಗಾಗಲೇ ಸಿನಿಪ್ರಿಯರ ಮನಗೆದ್ದಿವೆ.

ಕನ್ನಡದ ಜತೆಗೆ ಪರಭಾಷಾ ಚಿತ್ರಗಳಿಗೂ ಬಣ್ಣ ಹಚ್ಚಿರುವ ನಟಿ ಮೇಘಶ್ರೀ ಅವರು ‘ಕೃಷ್ಣ ತುಳಸಿ’ ಸಿನಿಮಾದಲ್ಲಿ ಡಬ್ಬಿಂಗ್‌ ಆರ್ಟಿಸ್ಟ್‌ ಪಾತ್ರ ನಿರ್ವಹಿಸಿದ್ದಾರೆ. ಬೇರೆ ಯಾವ ಭಾಷೆಯ ಚಿತ್ರಗಳಲ್ಲಿ ನಟಿಸಿದರೂ ಕನ್ನಡ ಸಿನಿಮಾಗಳಿಗೆ ನನ್ನ ಮೊದಲ ಆದ್ಯತೆ ಎನ್ನುವ ಮೇಘಶ್ರೀ, ಈ ಸಿನಿಮಾ ಅವರ ಬಣ್ಣದ ಬದುಕಿಗೆ ಒಂದು ಒಳ್ಳೆ ಬ್ರೇಕ್‌ ನೀಡಲಿದೆ ಎಂಬ ನಂಬಿಕೆಯಲ್ಲಿದ್ದಾರೆ. 

‘ಇದು ಮುದ್ದಾದ ಪ್ರೇಮಕತೆಯನ್ನು ಒಳಗೊಂಡಿರುವ ಸಿನಿಮಾ. ಈ ಚಿತ್ರದಲ್ಲಿ ನಾನು ಕಂಠದಾನ ಕಲಾವಿದೆಯ ಪಾತ್ರ ಮಾಡಿದ್ದೇನೆ. ನಾನು ಸಿನಿಮಾ ನಟಿಯರಿಗಷ್ಟೇ ಡಬ್ಬಿಂಗ್‌ ಮಾಡುವುದಿಲ್ಲ. ಬಸ್‌ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪ್ರಕಟಣೆ ನೀಡುವ ಪಾತ್ರಕ್ಕೂ ಧ್ವನಿ ನೀಡುತ್ತಿರುತ್ತೇನೆ. ಈ ಸಿನಿಮಾ ಒಪ್ಪಿಕೊಳ್ಳುವಾಗ ತುಂಬ ಭಯ ಮೂಡಿತ್ತು. ಕಾರಣ ಇಷ್ಟೇ, ಈ ಸಿನಿಮಾದ ನಾಯಕನಟ ವಿಜಯ್‌ ಅವರು ರಾಷ್ಟ್ರ ಪ್ರಶಸ್ತಿ ಪಡೆದ ಕಲಾವಿದರು. ಅವರೊಂದಿಗೆ ನನ್ನ ನಟನೆಯನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ ಎಂದು ಹೆದರಿಕೊಂಡಿದ್ದೆ. ಆದರೆ, ಚಿತ್ರದ ಚಿತ್ರೀಕರಣ ಶುರುವಾದ ನಂತರ ವಿಜಯ್‌ ಅವರು ಕೂಡ ನನ್ನ ನಟನಾ ಸಾಮರ್ಥ್ಯ ಸುಧಾರಿಸಿಕೊಳ್ಳಲು ಟಿಪ್ಸ್‌ ಕೊಟ್ಟರು. ಅವರೊಂದಿಗೆ ನಟಿಸಿದ ಅನುಭವ ಅದ್ಭುತವಾಗಿತ್ತು’ ಎನ್ನುತ್ತಾರೆ ನಟಿ ಮೇಘಶ್ರೀ.

‘ಕೃಷ್ಣ ತುಳಸಿ’ ಚಿತ್ರದ ಹೆಚ್ಚಿನ ಭಾಗ ಒಂದು ಬಸ್‌ನಲ್ಲಿಯೇ ಚಿತ್ರೀಕರಣಗೊಂಡಿದೆ. ಈ ಸಿನಿಮಾದಲ್ಲಿ ವಿಜಯ್‌ ಅವರು ಟೂರಿಸ್ಟ್‌ ಗೈಡ್‌ ಪಾತ್ರ ನಿರ್ವಹಿಸಿದ್ದಾರೆ. ಅಂಧರಿಗೆ ವಿಶಿಷ್ಟ ಶಕ್ತಿ ಇರುತ್ತದೆ. ಅವರದ್ದೇ ಒಂದು ಪ್ರಪಂಚ ಇರುತ್ತದೆ. ಪ್ರೇಕ್ಷಕರು ಅದನ್ನು ಈ ಚಿತ್ರದಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಚಿತ್ರದಲ್ಲಿ ಸಾಕಷ್ಟು ಅಂಧ ಕಲಾವಿದರೂ ನಟಿಸಿದ್ದಾರೆ.

‘ಚಿತ್ರದ ಮತ್ತೊಂದು ಶಕ್ತಿ ಸಂಗೀತ ಹಾಗೂ ಚಿತ್ರಗೀತೆಗಳು. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಈಗಾಗಲೇ ಸಿನಿಪ್ರಿಯರ ಮನಗೆದ್ದಿವೆ. ಅಂಧರಿಗೆ ಸಂಬಂಧಿಸಿದ ಒಂದು ಹಾಡಿನಲ್ಲಿ ನೂರಾರು ಅಂಧರು ನಟಿಸಿದ್ದಾರೆ. ಯೋಗರಾಜ್‌ಭಟ್ ಸಾಹಿತ್ಯದ ಮಳೆಹಾಡು ಸಹ ಚಿತ್ರದಲ್ಲಿದೆ.

‘ಇದು ಸದಭಿರುಚಿಯ ಚಿತ್ರ. ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದು ನನ್ನ ನಂಬಿಕೆ. ನನ್ನ ವೃತ್ತಿ ಜೀವನದಲ್ಲೂ ಇದು ಮಹತ್ತರ ಸಿನಿಮಾ’ ಎನ್ನುವುದು ಅವರ ನಂಬಿಕೆ. ಮುದ್ದು ನಗು, ನಟನಾ ಸಾಮರ್ಥ್ಯದಿಂದಲೇ ಚಂದನವನದಲ್ಲಿ ಛಾಪು ಮೂಡಿಸುತ್ತಿರುವ ಮೇಘಶ್ರೀ ಈಗ ರವಿಚಂದ್ರನ್‌ ಮುಖ್ಯ ಭೂಮಿಕೆಯಲ್ಲಿರುವ ‘ದಶರಥ’, ವಿಜಯ್‌ ಸೂರ್ಯ ನಾಯಕನಟರಾಗಿರುವ ‘ಕದ್ದು ಮುಚ್ಚಿ’ ಮತ್ತು ಚಿರಂಜೀವಿ ಸರ್ಜಾ ಅಭಿನಯದ ‘ರಾಜಾ ಮಾರ್ತಾಂಡ’ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT