ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು | ಮಧ್ಯವರ್ತಿಗಳ ಬಂಧನಕ್ಕೆ ರೈತರ ಆಗ್ರಹ

Published 4 ಫೆಬ್ರುವರಿ 2024, 14:18 IST
Last Updated 4 ಫೆಬ್ರುವರಿ 2024, 14:18 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಚೌಳಹಿರಿಯೂರು ಕಂದಾಯ ವೃತ್ತದ ವ್ಯಾಪ್ತಿಯಲ್ಲಿ ಅತಿವೃಷ್ಟಿ ಪರಿಹಾರದ ಹಣದಲ್ಲಿ ಅವ್ಯವಹಾರ ಮಾಡಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿಯ ಮುಂದೆ ಕಲ್ಕೆರೆ ರೈತರು ಆರಂಭಿಸಿರುವ ಪ್ರತಿಭಟನೆಯು ಭಾನುವಾರವೂ ಮುಂದುವರಿಯಿತು.

ಅತಿವೃಷ್ಟಿ ಹಣವನ್ನು ಅನರ್ಹರಿಗೆ ನೀಡಿದ ಆರೋಪದ ಮೇಲೆ ಆಗ ಅಂತರಘಟ್ಟೆ ಮತ್ತು ಕಲ್ಕೆರೆ ಗ್ರಾಮಲೆಕ್ಕಿಗನಾಗಿದ್ದ, ಪ್ರಸ್ತುತ ಕಡೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮಲೆಕ್ಕಿಗ ಫಾಲಾಕ್ಷಮೂರ್ತಿ ಅವರನ್ನು ಅಂತರಘಟ್ಟೆ ಪೊಲೀಸರು ವಶಕ್ಕೆ ಪಡೆದು ಶನಿವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಕುರಿತು ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜು ದೂರು ಸಲ್ಲಿಸಿದ್ದರು.

ಪ್ರತಿಭಟನಕಾರರು ತಾಲ್ಲೂಕು ಕಚೇರಿ ಆವರಣದಲ್ಲೇ ಅಡುಗೆ ಮಾಡಿ ಅಲ್ಲೇ ಮಲಗುವ ವ್ಯವಸ್ಥೆ ಮಾಡಿಕೊಂಡಿದ್ದರು. ತಹಶೀಲ್ದಾರ್ ಎಂ‌.ಪಿ.ಕವಿರಾಜ್ ಭಾನುವಾರ ಪ್ರತಿಭಟನಾ ಸ್ಥಳಕ್ಕೆ ತೆರಳಿ, ‘ಆರೋಪಿತ ವ್ಯಕ್ತಿಯನ್ನು ಅಮಾನತು ಮಾಡಲಾಗಿದೆ. ಅವರ ಬಂಧನವೂ ಆಗಿದೆ. ಪ್ರತಿಭಟನೆ ನಿಲ್ಲಿಸಿ’ ಎಂದು ಮನವಿ ಮಾಡಿದರು. ಆದರೆ, ಇದಕ್ಕೊಪ್ಪದ ಪ್ರತಿಭಟನಕಾರರು, ‘ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಹೇಳಿಕೆ ನೀಡಬೇಕು. ಕೇವಲ ಫಾಲಾಕ್ಷ ಮೂರ್ತಿ ಬಂಧನದಿಂದ ಸಮಸ್ಯೆ ಬಗೆಹರಿದಿಲ್ಲ. ಅವರ ಜತೆ ಸಹಕರಿಸಿರುವ ನಾಲ್ವರು ಮಧ್ಯವರ್ತಿಗಳನ್ನು ಬಂಧಿಸಬೇಕು. ಅರ್ಹ ರೈತರಿಗೆ ಪರಿಹಾರ ಹಣ ನೀಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಪಟ್ಟುಹಿಡಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ಮಾತನಾಡಿ, ನಮ್ಮ ಹೋರಾಟ ಕೇವಲ ಕಲ್ಕೆರೆ ಭಾಗದ ರೈತರ ಪರವಾಗಿ ಮಾತ್ರವಲ್ಲ; ತಾಲ್ಲೂಕಿನಲ್ಲಿ ಎಲ್ಲಿಯೇ ಈ ರೀತಿ ಅಕ್ರಮ ನಡೆದಿದ್ದರೂ ಹೋರಾಟ ಮಾಡುತ್ತೇವೆ. ಸೋಮವಾರ ನಮ್ಮ ಮನೆಯ ಜಾನುವಾರುಗಳನ್ನೂ ಇಲ್ಲಿಯೇ ಕಟ್ಟಿಕೊಂಡು ಧರಣಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್.ರವಿ, ಉಪಾಧ್ಯಕ್ಷ ನಾಗರಾಜ್, ನವೀನ್, ಕೆವೈಎಸ್‌ಎಫ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಅಜಯ್ ಉಪ್ಪಾರ್, ಕಲ್ಕೆರೆ ಹೊನ್ನೇಶ್ ಭಾಗವಹಿಸಿದ್ದರು.

ರೈತರು ಧರಣಿ ನಡೆಸಲು ಆರಂಭಿಸಿ ಮೂರು ದಿನವಾದರೂ ತಾಲ್ಲೂಕು ಆಡಳಿತದಿಂದ ಕುಡಿಯುವ ನೀರನ್ನೂ ವ್ಯವಸ್ಥೆ ಮಾಡಿಲ್ಲ. ನಾವೇ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ ಇಲ್ಲಿ ಸ್ವಚ್ಛಗೊಳಿಸಲು ಪುರಸಭೆಯವರೂ ಯಾರೂ ಬರಲಿಲ್ಲ. ರೈತರ ಮೇಲಿನ ಗೌರವದಿಂದ ಕೆಲವರು ಆಹಾರ ಧಾನ್ಯ, ಸೊಳ್ಳೆಬತ್ತಿ, ಹಾಸಿಗೆ ವ್ಯವಸ್ಥೆ ಮಾಡಿದ್ದಾರೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕನಿಷ್ಠ ಗೌರವವೂ ಇಲ್ಲ ಎಂದು ರೈತರು ದೂರಿದರು.

ಫಾಲಾಕ್ಷಪ್ಪ
ಫಾಲಾಕ್ಷಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT