ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದ ಆಸೆ ಬಿಡಿ; ಮಂಗ್ಳೂರನ್ನು ದುಬೈ ಮಾಡಿ: ರೋಹನ್ ಮೊಂತೆರೊ

ಬಾಲ್ಯದಲ್ಲಿ ಮಾಡಿದ ವೈವಿಧ್ಯಮಯ ಕೆಲಸಗಳಿಂದ ಶಕ್ತಿ, ಭರವಸೆ: ಸಂವಾದದಲ್ಲಿ ರೋಹನ್ ಮೊಂತೆರೊ
Published 23 ಮೇ 2024, 14:29 IST
Last Updated 23 ಮೇ 2024, 14:29 IST
ಅಕ್ಷರ ಗಾತ್ರ

ಮಂಗಳೂರು: 'ವಿದೇಶಕ್ಕೆ ಹೋಗುವ ಬಗ್ಗೆ ಆಸೆ ಮಾಡುವುದಕ್ಕಿಂತ ಹೊರಗಿನವರು ನಮ್ಮಲ್ಲಿಗೆ ಬರುವಂತೆ ಮಾಡಬೇಕು‘ ಎಂದು ಸಲಹೆ ನೀಡಿದ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ, ‘ಮಂಗಳೂರು ಸ್ವರ್ಗವಿದ್ದಂತೆ. ಹೊರಗೆ ಹೋಗದೆ ಇಲ್ಲೇ ಇದ್ದುಬಿಡಿ’ ಎಂದು ಕೋರಿದರು.

ಮಂಗಳೂರು ಪ್ರೆಸ್ ಕ್ಲಬ್ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಎಲ್ಲ ಸೌಲಭ್ಯಗಳು ಸಿಗುವ ಮಂಗಳೂರಿನಂಥ ನಗರ ಅಪರೂಪ. ಎಲ್ಲರೂ ಜೊತೆಗೂಡಿ ಇದನ್ನೇ ದುಬೈ ಮಾಡೋಣ’ ಎಂದರು.

‘ಬಾಲ್ಯದಲ್ಲಿ ಕಷ್ಟ ಅನುಭವಿಸಿದವನು ನಾನು. ಒಂಬತ್ತನೇ ತರಗತಿಗಿಂತ ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಕಲಿಕೆಯಲ್ಲಿ ಈಗಲೂ ಹೆಚ್ಚು ಆಸಕ್ತಿ ಇಲ್ಲ. ಕೋಣಗಳನ್ನು ಬಳಸಿಕೊಂಡು ಗದ್ದೆ ಉಳುತ್ತಿದ್ದ ನಾನು ನಂತರ ಗಾರೆ ಕೆಲಸ ಸೇರಿದಂತೆ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಆದರೆ ಎಲ್ಲೂ ಹೆಚ್ಚು ಕಾಲ ಇರಲು ಆಗಲಿಲ್ಲ. ಬೇಕರಿ ಉತ್ಪನ್ನಗಳನ್ನು ವಿತರಣೆ ಮಾಡುವ ಕೆಲಸದಲ್ಲಿ ಎಂಟು ವರ್ಷ ಇದ್ದೆ.  ನಂತರ ರಿಯಲ್ ಎಸ್ಟೇಟ್‌ ಉದ್ಯಮಕ್ಕೆ ಇಳಿದೆ’ ಎಂದು ಅವರು ಹೇಳಿದರು.

‘ಎಲ್ಲ ಕೆಲಸಗಳನ್ನು ಮಾಡಿದ್ದರಿಂದ ಈಗ ನನ್ನಲ್ಲಿ ದೊಡ್ಡ ಶಕ್ತಿ ಇದೆ. ಭರವಸೆಯೂ ಇದೆ. ದೇವರಲ್ಲಿ ಪ್ರಾರ್ಥಿಸಿ ಸುಮ್ಮನೇ ಇದ್ದರೆ ಸಾಲದು ನಮ್ಮ ಪ್ರಯತ್ನಗಳನ್ನು ಮಾಡಬೇಕು. ಆಗ ದೇವರು ದಾರಿ ತೋರುತ್ತಾನೆ. ಗ್ರಾಹಕರಿಗೆ ಬಾಡಿಗೆ ಮನೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾಗ ನಾನು ಮತ್ತು ಗೆಳೆಯ ರಾತ್ರಿ ಗಲ್ಲಿ ಗಲ್ಲಿಯಲ್ಲಿ ತಿರುಗುತ್ತಿದ್ದೆವು. ಯಾವ ಮನೆಯಲ್ಲಿ ಬೆಳಕು ಕಾಣಿಸುತ್ತಿಲ್ಲವೋ ಆ ಮನೆ ಖಾಲಿ ಇದೆ, ಬಾಡಿಗೆಗೆ ಕೊಡುತ್ತಾರೆ ಎಂದು ಅಂದಾಜಿಸಿ ಮುಂದೆ ಸಾಗುತ್ತಿದ್ದೆವು. ಜೀವನದಲ್ಲಿ ಮುಂದೆ ಸಾಗಲು ಇಂಥ ಕೆಲವು ಉಪಾಯಗಳು ಬೇಕಾಗುತ್ತವೆ’ ಎಂದು ಅವರು ಹೇಳಿದರು. 

‘ರಾಜಕೀಯಕ್ಕೆ ಬರುವಂತೆ ಅನೇಕರು ಕರೆದರು. ನಾನು ಹೋಗಲಿಲ್ಲ. ರಿಯಲ್‌ ಎಸ್ಟೇಟ್‌ನಲ್ಲೇ ಖುಷಿ ಇದೆ. ಈ ಮೂಲಕ ಸೇವೆಯನ್ನೂ ಮಾಡುತ್ತಿದ್ದೇನೆ. ಒಂದೊಂದು ಯೋಜನೆಯಲ್ಲಿ 72 ಏಜೆನ್ಸಿಗಳ ಪಾಲು ಇರುತ್ತದೆ. ನೂರಾರು ಮಂದಿಗೆ ಉದ್ಯೋಗ ಸಿಗುತ್ತದೆ. ಜೀವನದಲ್ಲಿ ವೈಫಲ್ಯ ಎಂಬುದು ಇಲ್ಲ. ಪ್ರತಿ ಬಾರಿ ಪೆಟ್ಟು ಬಿದ್ದಾಗಲೂ ಶಕ್ತಿಶಾಲಿಯಾಗಿ ಎದ್ದೇಳಲು ಆಗುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ನಷ್ಟ ಇರುವುದಿಲ್ಲ. ಎಲ್ಲರಿಗೂ ಮನೆ ಆಗಬೇಕೆಂಬುದು ನನ್ನ ಉದ್ದೇಶ. ನಾನು ಶಿಕ್ಷಣ ಪಡೆಯದೇ ಇದ್ದರೂ ಈಗ ಅನೇಕರಿಗೆ ಉದ್ಯೋಗ ಕೊಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಅಳಪೆ, ಪಡೀಲ್, ನೀರುಮಾರ್ಗ ಮುಂತಾದ ಕಡೆಗಳಲ್ಲಿ ₹ 8 ಸಾವಿರ ಕೋಟಿ ಮೊತ್ತದ ಮನೆಗಳ ನಿರ್ಮಾಣ ಮುಂದಿನ ಯೋಜನೆ ಎಂದು ಅವರು ತಿಳಿಸಿದರು.

ಪತ್ರಕರ್ತ ಜೈದೀಪ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT