ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡಲ್ಕೊರೆತ– ಸ್ಥಳಾಂತರ ಬಯಸುವವರಿಗೆ ಸಕಲ ನೆರವು: ಖಾದರ್‌

Published 9 ಜೂನ್ 2024, 6:28 IST
Last Updated 9 ಜೂನ್ 2024, 6:28 IST
ಅಕ್ಷರ ಗಾತ್ರ

ಮಂಗಳೂರು: ‘ಉಳ್ಳಾಲ ಕಡಲ್ಕೊರೆತದ ಹಾವಳಿಗೆ ಒಳಗಾಗಿರುವ ಕುಟುಂಬಗಳು ಬೇರೆ ಕಡೆ ಸ್ಥಳಾಂತರಗೊಳ್ಳಲು  ಮನವಿ ಸಲ್ಲಿಸಿದರೆ, ಅವರಿಗೆ ಬೇರೆ ಕಡೆ ಜಾಗ ಕೊಡಲು ವ್ಯವಸ್ಥೆ ಮಾಡುತ್ತೇವೆ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿಸಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು,‘ಉಳ್ಳಾಲ ನಗರದಲ್ಲೇ ಪರ್ಯಾಯ ನಿವೇಶನ ನೀಡಲು ಸಾಧ್ಯವಿಲ್ಲ. ಅಲ್ಲಿ ಒಂದಿಂಚೂ ಸರ್ಕಾರಿ ಜಾಗ ಲಭ್ಯ ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಾಗ ಲಭ್ಯ ಇದ್ದು, ಅಲ್ಲಿಗೆ ಹೋಗಲು ಸಂತ್ರಸ್ತರು ಸಿದ್ಧರಿರಬೇಕು. ಅವರಿಗೆ ಹಕ್ಕುಪತ್ರ ನೀಡುತ್ತೇವೆ.  ಆ ಜಾಗದಕ್ಕೆ ಸರ್ಕಾರದಿಂದ ಮೂಲಸೌಕರ್ಯ ಕಲ್ಪಿಸುತ್ತೇವೆ. ನಾನು ‌ವೈಯಕ್ತಿಕವಾಗಿಯೂ ನೆರವಾಗುತ್ತೇನೆ’ ಎಂದರು.

’ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ಬೇರೆ ಕಡೆ ಪರ್ಯಾಯ ಜಾಗ ನೀಡುತ್ತೇವೆ ಎಂದರೂ ಕೆಲವು ಕಡಲ್ಕೊರೆತ ಸಂತ್ರಸ್ತರು ಅಲ್ಲಿಗೆ ಹೋಗಲು ಸಿದ್ಧವಿರಲಿಲ್ಲ. ಆ ಜಾಗಗಳು ಈಗ ಬೆಳವಣಿಗೆ ಹೊಂದಿವೆ’ ಎಂದರು.

ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತದಿಂದ ಮನೆ ಕಳೆದುಕೊಂಡ ರಾಜೀವಿ ಅವರು ಬಾಡಿಗೆಮನೆಯಲ್ಲಿ ವಾಸಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಖಾದರ್‌, ‘ಹಿರಿಯರಾದ ಅವರ ಪರಿಚಯ ಇದೆ. ಅವರ ಸಮಸ್ಯೆಯ ಅರಿವಿದೆ. ಅವರೂ ಬೇರೆ ಕಡೆ ಸ್ಥಳಾಂತರವಾಗುವುದಾದರೆ ನೆರವಾಗಲು ಸಿದ್ಧ’ ಎಂದರು. 

ಕಡಲ್ಕೊರೆತ ತಡೆಯಲು ಎನ್‌ಐಟಿಕೆ ತಜ್ಞರ ನೆರವಿನಲ್ಲಿ ತಡೆಗೋಡೆ ಹಾಗೂ ಸಣ್ಣ ಸಣ್ಣ ಬ್ರೇಕ್‌ ವಾಟರ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಖಾದರ್ ನೇತೃತ್ವದಲ್ಲಿ ಸಭೆ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಬಗ್ಗೆ ಯು.ಟಿ.ಖಾದರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶುಕ್ರವಾರ ಉನ್ನತಾಧಿಕಾರಿಗಳ ಸಭೆ ನಡೆದಿತ್ತು. ನೇತ್ರಾವತಿ ಹಾಗೂ ಫಲ್ಗುಣಿ ನದಿಗಳಲ್ಲಿ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಮರಳು ದಿಬ್ಬಗಳ ತೆರವು, ಕಾವೇರಿ ತಂತ್ರಾಂಶದಲ್ಲಿ ಎದುರಾಗಿರುವ ಸಮಸ್ಯೆ ನಿವಾರಣೆ ಮೊದಲಾದ ವಿಚಾರಗಳ ಬಗ್ಗೆ ಚರ್ಚೆ ನಡೆದಿತ್ತು. ಸಚಿವರಾದ ದಿನೇಶ್‌ ಗುಂಡೂರಾವ್, ಮಾಂಕಾಳ ವೈದ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT