ಸಾಲಮನ್ನಾ ಅಸ್ಪಷ್ಟ: 17ರಂದು ಪ್ರತಿಭಟನೆ

7
ಸ್ಪಷ್ಟತೆ ಇಲ್ಲದ ತಾರತಮ್ಯ ನೀತಿಗೆ ವಿರೋಧ

ಸಾಲಮನ್ನಾ ಅಸ್ಪಷ್ಟ: 17ರಂದು ಪ್ರತಿಭಟನೆ

Published:
Updated:
Deccan Herald

ಪುತ್ತೂರು: ‘ರಾಜ್ಯ ಸರ್ಕಾರ ಹೊರಡಿಸಿರುವ ರೈತರ ಸಾಲಮನ್ನಾ ಆದೇಶದಲ್ಲಿ ಇರುವ ತಾರತಮ್ಯ ನೀತಿಯನ್ನು ವಿರೋಧಿಸಿ ಹಾಗೂ ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸರ್ಕಾರವನ್ನು ಆಗ್ರಹಿಸಿ ಸಹಕಾರ ಭಾರತಿ ನೇತೃತ್ವದಲ್ಲಿ ಇದೇ 17ರಂದು ಪುತ್ತೂರು ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು  ತಾಲ್ಲೂಕು ಅಧ್ಯಕ್ಷ ಕೃಷ್ಣ ಕುಮಾರ್ ರೈ ಅವರು ತಿಳಿಸಿದರು.

 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಹಾಮಳೆಯ ಕಾರಣ ಜಿಲ್ಲೆಯ ರೈತರು ಬೆಳೆದ ಅಡಿಕೆ ಕೊಳೆರೋಗದಿಂದಾಗಿ ಸಂಪೂರ್ಣ ನಾಶವಾಗಿದೆ. ಕಾಳುಮೆಣಸು, ಕೊಕ್ಕೊ, ಭತ್ತ,ರಬ್ಬರ್ ಬೆಳೆಗಳು ಸಂಪೂರ್ಣ ನಾಶವಾಗಿದೆ. ಅಡಿಕೆ ಮರಗಳು ಕೂಡಾ ಸತ್ತು ಹೋಗಿವೆ. ಸರ್ಕಾರ ತಕ್ಷಣ ಸ್ಪಂದಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ರೈತರ ಸಾಲಮನ್ನಾ ಯೋಜನೆ ಘೋಷಣೆಯಾಗಿದ್ದರೂ ಅದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಠೇವಣಿ ಇಟ್ಟ ರೈತರು ಹಾಗೂ ಆದಾಯ ತೆರಿಗೆ ಪಾವತಿಸುತ್ತಿರುವ ರೈತರಿಗೆ ಈ ಸಾಲಮನ್ನಾದ ಸೌಲಭ್ಯ ದೊರಕುವುದಿಲ್ಲ ಎಂಬ ಮಾಹಿತಿಗಳು ಮಾಧ್ಯಮದ ಮೂಲಕ ಕೇಳಿ ಬರುತ್ತಿದೆ. ಆದರೆ ಯಾವುದೇ ಆದೇಶಗಳು ಸಹಕಾರಿ ಬ್ಯಾಂಕ್‌ಳಿಗೆ ಇದುವರೆಗೆ ಬಂದಿಲ್ಲ. ಹಾಗಾಗಿ ಗೊಂದಲ ನಿರ್ಮಾಣವಾಗಿದ್ದು, ಸಾಲಗಾರ ರೈತ ವರ್ಗದ ಜನತೆಗೆ ಸಹಕಾರಿ ಬ್ಯಾಂಕ್‌ಗಳು ಯಾವುದೇ ಮಾಹಿತಿಗಳನ್ನು ನೀಡಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ ಎಂದ ಅವರು ಸರ್ಕಾರ ಈ ಬಗ್ಗೆ ಸ್ಪಷ್ಟವಾದ ಅಧಿಕೃತ ಆದೇಶ ನೀಡಬೇಕು. ಸಾಲ ಮನ್ನಾಕ್ಕೆ ಸಂಬಂಧಿಸಿ ತಾರತಮ್ಯ ನೀತಿಯನ್ನು ಕೈ ಬಿಡಬೇಕು’ ಎಂದು ಒತ್ತಾಯಿಸಿದರು.

‘ಬೆಳೆ ವಿಮೆ ಕಡ್ಡಾಯದ ಬದಲು ಐಚ್ಛಿಕಗೊಳಿಸಬೇಕು. ರೂಪೇ ಕ್ರೆಡಿಟ್ ಕಾರ್ಡ್‌ ಮುಖಾಂತರ ಸಾಲ ನೀಡಬೇಕು ಎಂಬ ನೀತಿಯನ್ನು ಕೈಬಿಡಬೇಕು. ಸಾಲವನ್ನು ಷರತ್ತು ರಹಿತವಾಗಿ ಮನ್ನಾ ಮಾಡಬೇಕು.  ಕೃಷಿಕರಿಗೆ ಹೊಸ ಅಡಿಕೆ ತೋಟ ನಿರ್ಮಾಣಕ್ಕೆ ಸಹಾಯಧನ ಹಾಗೂ ಹೊಸ ಕೃಷಿ ಸಾಲ ತಕ್ಷಣ ನೀಡಬೇಕು’ ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುವುದು ಎಂದರು.

ಒಂದು ವೇಳೆ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರಿಗೆ ಸಾಲಮನ್ನಾದ ಸೌಲಭ್ಯ ಇಲ್ಲವೆಂದಾದರೆ ಇನ್ನು ಮುಂದೆ ಯಾವುದೇ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಮುಂದೆ ಬರುವುದಿಲ್ಲ. ಇದರಿಂದಾಗಿ ಸಹಕಾರಿ ಬ್ಯಾಂಕ್ ವ್ಯವಸ್ಥೆಯೇ ಸಂಪೂರ್ಣ ಹಾಳಾಗಬಹುದು’ಎಂದವರು ಹೇಳಿದರು.

ಸಹಕಾರಿ ಭಾರತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ತಾಳ್ತಜೆ ಮತ್ತು ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !