ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮಾ ಗ್ರಾಮಗಳಲ್ಲಿ ನೀರು, ದಾರಿದೀಪ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಭಾರತೀಯ ಜೀವ ವಿಮಾ ನಿಗಮದ ಕಾರ್ಯ
Published 6 ಏಪ್ರಿಲ್ 2024, 5:45 IST
Last Updated 6 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

ಮಂಗಳೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ), ಮೈಕ್ರೊಬಚತ್ ಪಾಲಿಸಿಯಡಿ ರಾಜ್ಯದ 333 ವಿಮಾ ಗ್ರಾಮಗಳಲ್ಲಿ ₹ 1.22 ಕೋಟಿ ವೆಚ್ಚದ ಸೌಲಭ್ಯಗಳನ್ನು ಒದಗಿಸಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಲ್.ಎಚ್. ಮಂಜುನಾಥ್‍ ತಿಳಿಸಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಅವರ ಕುಟುಂಬದವರಿಗೆ ಎರಡು ದಶಕಗಳಿಂದ ವಿಮೆ ಭದ್ರತೆ ಒದಗಿಸುತ್ತಿದೆ. ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ, ಪ್ರಗತಿ ರಕ್ಷಾ ಕವಚ, ಎನ್‌ಪಿಎಸ್, ಪ್ರಧಾನಮಂತ್ರಿ ಸುರಕ್ಷಾ ಬಿಮಾ, ಪ್ರಧಾನಮಂತ್ರಿ ಜೀವನಜ್ಯೋತಿ ಬಿಮಾ, ಅಟಲ್ ಪಿಂಚಣಿ, ಭಾರತೀಯ ಜೀವವಿಮಾ ನಿಗಮದೊಂದಿಗೆ ಜೀವನಮಧುರ, ಭಾಗ್ಯಲಕ್ಷ್ಮಿ, ಮೈಕ್ರೊಬಚತ್ ಮತ್ತು ಬಿಮಾಜ್ಯೋತಿ ಸೌಲಭ್ಯಗಳು 23,27,650 ಮಂದಿಗೆ ತಲುಪಿವೆ ಎಂದು ಅವರು ತಿಳಿಸಿದ್ದಾರೆ.

2007ರಿಂದ ಭಾರತೀಯ ಜೀವವಿಮಾ ನಿಗಮದೊಂದಿಗೆ ಒಪ್ಪಂದ ಮಾಡಿಕೊಂಡು ಕಡಿಮೆ ಪ್ರೀಮಿಯಂನ ವಿಶೇಷ ಪಾಲಿಸಿಗಳನ್ನು ಪರಿಚಯಿಸಲಾಗುತ್ತಿದೆ. ಮೈಕ್ರೊಬಚತ್ ಪಾಲಿಸಿಯಡಿ ವಿಮಾಗ್ರಾಮಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ 13,71,000 ಮಂದಿ ಈ ಪಾಲಿಸಿ ಮಾಡಿಸಿಕೊಂಡಿದ್ದಾರೆ.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು 2000 ಮಂದಿ ಇರುವ ಗ್ರಾಮವಾಗಿದ್ದರೆ ಕನಿಷ್ಠ 75 ಮಂದಿ, 5000 ಮಂದಿ ಇದ್ದರೆ ಕನಿಷ್ಠ 100 ಮಂದಿ, 5001ರಿಂದ 10 ಸಾವಿರ ಮಂದಿ ಇದ್ದರೆ ಕನಿಷ್ಠ 150 ಮಂದಿ ವಿಮೆ ಮಾಡಿಸಿಕೊಂಡಿರಬೇಕು. ಆಯ್ಕೆಯಾದ ಗ್ರಾಮಗಳ ಒಂದು ಘಟಕಕ್ಕೆ ₹ 35 ಸಾವಿರದಿಂದ ₹ 1 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನು ಶಾಲೆ, ಗ್ರಾಮ ಪಂಚಾಯಿತಿ ಅಥವಾ ದೇವಸ್ಥಾನಗಳಿಗೆ ಬಳಸಿಕೊಳ್ಳಬಹುದು. ಸೋಲಾರ್ ದಾರಿದೀಪ, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮತ್ತು ಶಾಲೆಗೆ ಶೌಚಾಲಯ ಒದಗಿಸಲಾಗುತ್ತದೆ ಎಂದು ಮಂಜುನಾಥ್ ವಿವರಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕು ಕೈದಾಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕುಗ್ರಾಮ ನಾಗವಳ್ಳಿ ಕೊಂಗನಾಡು ಮಾರಮ್ಮ ದೇವಸ್ಥಾನಕ್ಕೆ ಸೋಲಾರ್ ಬೀದಿದೀಪ ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT