ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಹಿತ್ಲು ಬೀಚ್‌ನಲ್ಲಿ ಸ್ಟ್ಯಾಂಡ್‌ ಅಪ್‌ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌

Published 22 ಫೆಬ್ರುವರಿ 2024, 4:31 IST
Last Updated 22 ಫೆಬ್ರುವರಿ 2024, 4:31 IST
ಅಕ್ಷರ ಗಾತ್ರ

ಮಂಗಳೂರು: ಅಸೋಸಿಯೇಷನ್‌ ಆಫ್‌ ಪ್ಯಾಡ್ಲ್‌ಸರ್ಫ್‌ ಫ್ರೊಫೆಷನಲ್ಸ್‌ ವರ್ಲ್ಡ್‌ ಟೂರ್‌ (ಎಪಿಪಿ) ದೇಶದ ಮೊದಲ ಅಂತರರಾಷ್ಟ್ರೀಯ ಸ್ಟ್ಯಾಂಡ್‌ ಅಪ್‌ ಪ್ಯಾಡ್ಲಿಂಗ್‌ ಚಾಂಪಿಯನ್‌ಷಿಪ್‌ ಅನ್ನು ಇಲ್ಲಿಗೆ ಸಮೀಪದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಮಾರ್ಚ್‌ 8ರಿಂದ 10ರವರೆಗೆ ಹಮ್ಮಿಕೊಂಡಿದೆ.

ಭಾರತದ ಚೊಚ್ಚಲ ಸ್ಟ್ಯಾಂಡ್‌ಅಪ್‌ ಪ್ಯಾಡ್ಲ್‌ ಬೋರ್ಡಿಂಗ್‌ (ಎಸ್‌ಯುಪಿ) ಸರ್ಫಿಂಗ್‌ ಕೂಟವನ್ನು 2024ರ ಎಪಿಪಿ ಜಾಗತಿಕ ಪ್ರವಾಸಕ್ಕೆ ಚಾಲನೆ ದೊರೆಯುವುದಕ್ಕೆ ಮುನ್ನವೇ ಆಯೋಜಿಸಲಾಗುತ್ತಿದೆ.

ಮುಂಬರುವ ವರ್ಷಗಳಲ್ಲಿ ಈ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘಟನೆಯು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಸರ್ಫಿಂಗ್‌ ಸ್ವಾಮಿ ಫೌಂಡೇಷನ್‌ ಸಹಭಾಗಿತ್ವದಲ್ಲಿ ನಡೆಯುವ ಈ ಕೂಟಕ್ಕೆ ಎಎಪಿ ವರ್ಲ್ಡ್‌ ಟೂರ್‌ನ ಆಯ್ದ ಉತ್ಕೃಷ್ಟ ಸರ್ಫಿಂಗ್‌ ಪಟುಗಳನ್ನು ಆಹ್ವಾನಿಸಲಾಗುತ್ತಿದೆ. ಜೊತೆಗೆ ಈ ಪ್ರದೇಶದ ಆಸಕ್ತ ವೃತ್ತಿಪರ ಸರ್ಫಿಂಗ್‌ ಪಟುಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ. 

ಈ ಕೂಟದ ಬಗ್ಗೆ ಮಾಹಿತಿ ನೀಡಿರುವ ಎಪಿಪಿ ವರ್ಲ್ಡ್‌ ಟೂರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟ್ರೈಸ್ಟನ್‌ ಬಾಕ್ಸ್‌ಫರ್ಡ್‌, ‘ಭಾರತದಲ್ಲಿ ಈ ಕೂಟವನ್ನು ಆಯೋಜಿಸಲು ಖುಷಿಯಾಗುತ್ತಿದೆ. ಈ ಕೂಟದಿಂದ ಈ ಕ್ರೀಡೆಗೆ ಈ ಪ್ರದೇಶದಲ್ಲಿ ಮತ್ತಷ್ಟು ಉತ್ತೇಜನ ಸಿಗಲಿದೆ. ಅಂತರರಾಷ್ಟ್ರೀಯ ದರ್ಜೆಯ ಸ್ಪರ್ಧಾಕೂಟದ ಅನುಭವ ಪಡೆಯುವ ಅವಕಾಶವನ್ನು ಈ ಕೂಟವು ಒದಗಿಸಲಿದೆ’ ಎಂದರು.

ಸರ್ಫಿಂಗ್‌ ಸ್ವಾಮಿ ಪೌಂಡೇಷನ್‌ನ ನಿರ್ದೇಶಕ ಧನಂಜಯ ಶೆಟ್ಟಿ, ‘ದೇಶದ ಸರ್ಫಿಂಗ್‌ ಮತ್ತು ಎಸ್‌ಯುಪಿ ಸಮುದಾಯದ ಮಟ್ಟಿಗೆ ಇದೊಂದು ದೊಡ್ಡ ಹೆಜ್ಜೆ. ನಮ್ಮ ಪ್ಯಾಡ್ಲರ್‌ಗಳು ಎಎಪಿ ವರ್ಲ್ಡ್‌ ಟೂರ್‌ನ ಅನುಭವಿಗಳಿಂದ ಉತ್ತಮ ಅನುಭವ ಗಳಿಸಲು ಇದು ನೆರವಾಗಲಿದೆ. ಈ ಪ್ರದೇಶದಲ್ಲಿ ಈ ಕ್ರೀಡೆಯನ್ನು ಹಾಗೂ ತನ್ಮೂಲಕ ಪ್ರವಾಸೋದ್ಯಮವನ್ನು ಬೆಳೆಸುವ ನಮ್ಮ ಪ್ರಯತ್ನಕ್ಕೂ ಈ ಕೂಟದಿಂದ ಉತ್ತೇಜನ ಸಿಗಲಿದೆ’ ಎಂದರು. 

ಭಾರತದ 1ನೇ ಶ್ರೇಯಾಂಕಿತ ಶೇಖರ್‌ ಪಚ್ಚೈ, ‘ಅಂತರರಾಷ್ಟ್ರೀಯ ಮಟ್ಟದ ಕೂಟವು ನಮ್ಮ ದೇಶದಲ್ಲಿ ಆಯೋಜನೆಗೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೆವು. ನನ್ನಂತಹ ಸ್ಟ್ಯಾಂಡ್‌ ಅಪ್ ಪ್ಯಾಡ್ಲರ್‌ಗಳಿಗೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಂದ ಕಲಿಯುವುದಕ್ಕೆ ಇದೊಂದು ಉತ್ತಮ ಅವಕಾಶ. ದೇಸಿ ಪ್ಯಾಡ್ಲರ್‌ಗಳು ಅಂತರರಾಷ್ಟ್ರೀಯ ಪಟುಗಳಿಗೆ ತೀವ್ರ ಪೈಪೋಟಿ ನೀಡಲಿ ಎಂಬುದು ನನ್ನ ಆಶಯ. ಕಠಿಣ ಅಭ್ಯಾಸ ನಡೆಸುವ ಮೂಲಕ ಈ ಕೂಟಕ್ಕೆ ಸಜ್ಜಾಗುವುದು ನಿಜಕ್ಕೂ ಚೇತೋಹಾರಿ’ ಎಂದರು.

ತನ್ನ 16ನೇ ವರ್ಷದಲ್ಲೇ 4xಎಸ್‌ಯುಪಿ ವಿಭಾಗದಲ್ಲಿ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಅತ್ಯಂತ ಕಿರಿಯ ವಯಸ್ಸಿನ ಶೂರಿ ಅರಾಕಿ ಅವರೂ ಈ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT