ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುವರ್ಣ ಕರ್ನಾಟಕ ಆರೋಗ್ಯ ಕವಚ ಸಿಬ್ಬಂದಿ ವೇತನ ಬಿಡುಗಡೆಗೆ 10 ದಿನ ಗಡುವು

Published 23 ಮಾರ್ಚ್ 2024, 5:31 IST
Last Updated 23 ಮಾರ್ಚ್ 2024, 5:31 IST
ಅಕ್ಷರ ಗಾತ್ರ

ಮಂಗಳೂರು: ಕಳೆದ ವರ್ಷ ಡಿಸೆಂಬರ್‌ನಿಂದ ಈ ವರ್ಷದ ಫೆಬ್ರುವರಿ ವರೆಗಿನ ವೇತನ ಬಿಡುಗಡೆ ಆಗಲಿಲ್ಲ ಎಂದು ಆರೋಪಿಸಿರುವ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ಸಿಬ್ಬಂದಿ ಇನ್ನು 10 ದಿನಗಳ ಒಳಗೆ ವೇತನ ಕೈಸೇರದೇ ಇದ್ದರೆ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷ ನರಸಿಂಹ ನಾಯಕ್, ಚಾಲಕರು ಸೇರಿದಂತೆ ಆರೋಗ್ಯ ಕವಚ ಯೋಜನೆಯಲ್ಲಿ ರಾಜ್ಯದಲ್ಲಿ ಸುಮಾರು 4 ಸಾವಿರ ಸಿಬ್ಬಂದಿ ಇದ್ದು ಮೂರು ತಿಂಗಳಿಂದ ವೇತನ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಬಹುತೇಕರು ಬೇರೆ ಊರುಗಳಿಂದ ಬಂದವರು. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗಲಿಲ್ಲ. ಮಕ್ಕಳ ಶಾಲಾ ಶುಲ್ಕ ಭರಿಸುವುದು ಕೂಡ ಕಷ್ಟಕರವಾಗಿದೆ ಎಂದರು.   

ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿ ಮತ್ತು ಆರೊಗ್ಯಾಧಿಕಾರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಬೆಂಗಳೂರಿನಲ್ಲಿ ಉನ್ನತ ಅಧಿಕಾರಿಗಳನ್ನು ಬೇಟಿಯಾಗಿದ್ದೇವೆ. ಆದರೂ ಪ್ರಯೋಜನವಾಗಲಿಲ್ಲ ಎಂದು ಅವರು ದೂರಿದರು.

‘ರಾಜ್ಯದಲ್ಲಿ ಜಿವಿಕೆ–ಇಎಂಆರ್‌ಐ ಕಂಪನಿ 108 ಆಂಬುಲೆನ್ಸ್‌ಗಳ ನಿರ್ವಹಣೆ ಮಾಡುತ್ತಿದೆ. ಸರ್ಕಾರದ ಜೊತೆ ಅವರು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಕಳೆದ ವರ್ಷ ಶೇಕಡ 15ರಷ್ಟು ವೇತನ ಹೆಚ್ಚಳ ಮಾಡಬೇಕಾಗಿತ್ತು. ಅದು ಜಾರಿಗೆ ಬರಲಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕನಿಷ್ಠ ವೇತನ ನಿಗದಿ ಮಾಡಿದ ನಂತರ ತಿಂಗಳಿಗೆ ₹ 36 ಸಾವಿರ ಬರುತ್ತಿತ್ತು. ಆರು ತಿಂಗಳು ಈ ಮೊತ್ತ ನೀಡಿದರು. ನಂತರ ಪ್ರತಿ ತಿಂಗಳು ₹ 6 ಸಾವಿರ ಹಿಡಿದುಕೊಳ್ಳಲು ಶುರು ಮಾಡಿದರು’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT