ಸೋಮವಾರ, ಮಾರ್ಚ್ 27, 2023
23 °C
‘ಟೈಗರ್‌’ ಕಾರ್ಯಾಚರಣೆ ಪುನರಾರಂಭಿಸಿ– ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಸಲಹೆ

ಬೀದಿಬದಿ ವ್ಯಾಪಾರ: ಪಕ್ಷಭೇದ ಮರೆತು ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಕಾನೂನುಬಾಹಿರವಾಗಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕು’ ಎಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಂಗಳವಾರ ಪಕ್ಷಭೇದ ಮರೆತು ಒತ್ತಾಯಿಸಿದರು.

‘ಹಂಪನಕಟ್ಟೆ ಪ್ರದೇಶದಲ್ಲಿ ಪಾದಚಾರಿ ಮಾರ್ಗವನ್ನು ಆಕ್ರಮಿಸಿ ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳ ಪರಿಕರಗಳನ್ನು ಇತ್ತೀಚೆಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಬೀದಿಬದಿ ವ್ಯಾಪಾರಿಗಳು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪಾಲಿಕೆ ವಶಪಡಿಸಿಕೊಂಡ ಸೊತ್ತುಗಳನ್ನು ಬಲವಂತದಿಂದ ಒಯ್ದಿದ್ದಾರೆ. ಪಾಲಿಕೆ ನಿಜಕ್ಕೂ ಅಸ್ತಿತ್ವದಲ್ಲಿ ಇದೆಯೇ’ ಎಂದು ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ ಪ್ರಶ್ನಿಸಿದರು.

‘ಪ್ರತಿಭಟನೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದ್ದೇವೆ’ ಎಂದು ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಮಾಹಿತಿ ನೀಡಿದರು.

‘ನಗರದ ಕಾವೂರು, ಮಣ್ಣಗುಡ್ಡೆ, ಹಂಪನಕಟ್ಟೆ ಹಾಗೂ ಸರ್ವಿಸ್ ಬಸ್‌ ನಿಲ್ದಾಣಗಳ ಬಳಿ ಬೀದಿಬದಿ ವ್ಯಾಪಾರ ನಡೆಸಲು ಜಾಗ ಗುರುತಿಸಿ ನೀಡಲಾಗಿದೆ. ಈ ಜಾಗಗಳ ಹೊರತಾಗಿ ಬೇರೆ ಕಡೆ ಬಿದಿ ಬದಿ ವ್ಯಾಪಾರ ನಡೆಸಲು ಅವಕಾಶ ಇಲ್ಲ. ಅಕ್ರಮವಾಗಿ ವ್ಯಾಪಾರ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಏಕೆ’ ಎಂದು ಎ.ಸಿ.ವಿನಯರಾಜ್‌ ಪ್ರಶ್ನಿಸಿದರು. 

‘ಬೀದಿಬದಿ ವ್ಯಾಪಾರಿಗಳು ನಗರದ ಸ್ವಚ್ಛತೆಯನ್ನೂ ಹಾಳುಮಾಡುತ್ತಿದ್ದಾರೆ. ಅಡುಗೆ ಅನಿಲದ ಸಿಲಿಂಡರ್‌ ಇಟ್ಟುಕೊಂಡು ಆಹಾರ ಬೇಯಿಸುತ್ತಾರೆ. ಅವರಿಗೆ ಇದಕ್ಕೆಲ್ಲ ಅನುಮತಿ ನೀಡಿದ್ದು ಯಾರು’ ಎಂದು ಅನಿಲ್ ಕುಮಾರ್‌ ಕೇಳಿದರು.

‘ನಗರದಲ್ಲಿ ಈ ಹಿಂದೆ 557 ಮಂದಿ ಬೀದಿ ವ್ಯಾಪಾರಿಗಳಿಗೆ ಪಾಲಿಕೆ ವತಿಯಿಂದ ಗುರುತಿನ ಚೀಟಿ ವಿತರಿಸಲಾಗಿತ್ತು. ಅದರ ಅವಧಿ ಮುಗಿದಿದೆ. ಈಗ 667 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಷರತ್ತು ಉಲ್ಲಂಘಿಸಿ ಬೀದಿ ವ್ಯಾಪಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಹಿಂದೆ ಬೀದಿ ಬದಿ ವ್ಯಾಪಾರಿಗಳ ಸರಕುಗಳನ್ನು ತೆರವುಗೊಳಿಸಲು ಟೈಗರ್‌ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುತ್ತಿತ್ತು. ಅದನ್ನು ಮತ್ತೆ ಆರಂಭಿಸಬೇಕು. ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರವನ್ನು  ನಿರ್ಬಂಧಿಸಬೇಕು‘ ಎಂದು ಸುಧೀರ್‌ ಶೆಟ್ಟಿ ಕಣ್ಣೂರು ಒತ್ತಾಯಿಸಿದರು.

‘ಬೀದಿಬದಿ ವ್ಯಾಪಾರದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ಪಾಲಿಕೆ ಜೊತೆ ಪೊಲೀಸ್‌ ಇಲಾಖೆ, ಆಹಾರ ಸುರಕ್ಷತಾ
ಇಲಾಖೆಗಳ ಸಹಕಾರವೂ ಅಗತ್ಯ. ಈ ಇಲಾಖೆಗಳ ಸಹಕಾರ ಪಡೆದು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್‌ ಜಯಾನಂದ ಅಂಚನ್‌ ಅವರು ಆಯುಕ್ತ ಚನ್ನಬಸಪ್ಪ ಕೆ. ಅವರಿಗೆ ಸೂಚಿಸಿದರು.  

-0-

‘ರಾಜಕಾಲುವೆ ದುರಸ್ತಿ ವಿಳಂಬ’

‘ಕೊಟ್ಟಾರಚೌಕಿ ಬಳಿ ರಾಜಕಾಲುವೆ ದುರಸ್ತಿ ಕಾರ್ಯ ವಿಳಂಬ ಆಗುತ್ತಿದೆ. ಇಲ್ಲಿ ಕಾಲುವೆ ನಿರ್ಮಿಸಲು ಶಿಕ್ಷಣ ಸಂಸ್ಥೆಯೊಂದು ಅಡ್ಡಿಪಡಿಸುತ್ತಿದೆ. ಮಳೆಗಾಲಕ್ಕೆ ಮುನ್ನವೇ ರಾಜಕಾಲುವೆ ದುರಸ್ತಿ ಆಗದಿದ್ದರೆ ಪ್ರವಾಹ ಉಂಟಾಗುವ ಅಪಾಯ ಇದೆ‘ ಎಂದು ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ದೂರಿದರು.

ಕಾಮಗಾರಿ ನಡೆಸಲು ವಿದ್ಯುತ್‌ ಕಂಬ ಸ್ಥಳಾಂತರಕ್ಕೂ ಮೆಸ್ಕಾಂ ಮೀನಮೇಷ ಎಣಿಸುತ್ತಿದೆ ಎಂದು ಪಾಲಿಕೆ ಸದಸ್ಯೆಯೊಬ್ಬರು ದೂರಿದರು.

–0–

‘ಕೇಬಲ್‌ ಹಾವಳಿ ನಿವಾರಿಸಿ’

‘ನಗರದಲ್ಲಿ ಬೀದಿದೀಪದ ಕಂಬಗಳ ಮೇಲೆ ಬೇಕಾಬಿಟ್ಟಿ ಕೇಬಲ್‌ ಅಳವಡಿಸುತ್ತಿದ್ದಾರೆ. ಕೇಬಲ್‌ ಅಳವಡಿಕೆಗೆ ರಸ್ತೆ ಅಗೆಯುವುದರಿಂದ ಸ್ಥಳೀಯರಿಗೆ ಸಮಸ್ಯೆ ಆಗುತ್ತಿದೆ ಎಂದು ಸದಸ್ಯರು ಆರೋಪ ಮಾಡಿದರು. ನೆಲದಡಿ ಕೇಬಲ್‌ ಅಳವಡಿಸುವುದಕ್ಕೆ ಸ್ಪಷ್ಟ ನೀತಿ ರೂಪಿಸುವಂತೆ ಲೋಕೇಶ್‌ ಬಿ. ಕಿರಣ್‌ಕುಮಾರ್‌, ಸಂಗೀತಾ ಆರ್‌. ನಾಯಕ್‌ ಒತ್ತಾಯಿಸಿದರು.

 –0–

‘ಕೊಟ್ಟಾರಚೌಕಿ– ರಾಜಕಾಲುವೆ  ದುರಸ್ತಿ ವಿಳಂಬ’

‘ಕೊಟ್ಟಾರಚೌಕಿ ಬಳಿ ರಾಜಕಾಲುವೆ ದುರಸ್ತಿ ಕಾರ್ಯ ವಿಳಂಬ ಆಗುತ್ತಿದೆ. ಇಲ್ಲಿ ಕಾಲುವೆ ನಿರ್ಮಿಸಲು ಶಿಕ್ಷಣ ಸಂಸ್ಥೆಯೊಂದು ಅಡ್ಡಿಪಡಿಸುತ್ತಿದೆ. ಮಳೆಗಾಲಕ್ಕೆ ಮುನ್ನವೇ ರಾಜಕಾಲುವೆ ದುರಸ್ತಿ ಆಗದಿದ್ದರೆ ಪ್ರವಾಹ ಉಂಟಾಗುವ ಅಪಾಯ ಇದೆ‘ ಎಂದು ಪಾಲಿಕೆ ಸದಸ್ಯ ಕಿರಣ್‌ ಕುಮಾರ್‌ ದೂರಿದರು.

ಕಾಮಗಾರಿ ನಡೆಸಲು ವಿದ್ಯುತ್‌ ಕಂಬ ಸ್ಥಳಾಂತರಕ್ಕೂ ಮೆಸ್ಕಾಂ ಮೀನಮೇಷ ಎಣಿಸುತ್ತಿದೆ ಎಂದು ಪಾಲಿಕೆ ಸದಸ್ಯೆಯೊಬ್ಬರು ದೂರಿದರು.

ಮುಖ್ಯಾಂಶಗಳು

ಕಸ ನಿರ್ವಹಣೆ– ಸೂಪರ್‌ವೈಸರ್‌ಗಳ ಕಾಯಂಗೊಳಿಸುವಂತೆ ಒತ್ತಾಯ

ಪೌರಕಾರ್ಮಿಕರ ಕಾಯಂ ಪ್ರಕ್ರಿಯೆ–ಪಾರದರ್ಶಕತೆ ಕೊರತೆ: ಕಾಂಗ್ರೆಸ್‌ ಆರೋಪ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು