ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಹಿಳಾ ಆಯೋಗದಿಂದ ಶೀಘ್ರವೇ ಕಾಲ್‌ ಸೆಂಟರ್‌’: ಚೌಧರಿ

Published 6 ಮಾರ್ಚ್ 2024, 7:56 IST
Last Updated 6 ಮಾರ್ಚ್ 2024, 7:56 IST
ಅಕ್ಷರ ಗಾತ್ರ

ಮಂಗಳೂರು: ‘ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮಾನಸಿಕವಾಗಿಯೂ ತೊಂದರೆ ಅನುಭವಿಸುತ್ತಾರೆ. ಅಂತಹವರ ಅಹವಾಲು ಆಲಿಸಿ ಪರಿಹಾರ ಒದಗಿಸಲು ರಾಜ್ಯ ಮಹಿಳಾ ಆಯೋಗವು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಶೀಘ್ರವೇ `ಕಾಲ್ ಸೆಂಟರ್' ಆರಂಭಿಸಲಿದೆ. ದಿನದ 24 ಗಂಟೆಯೂ ಅದು ಕಾರ್ಯನಿರ್ವಹಿಸಲಿದೆ’ ಎಂದು ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ಇಲ್ಲಿನ ಲೇಡಿಗೋಶನ್ ಆಸ್ಪತ್ರೆ ಆವರಣದಲ್ಲಿರುವ ‘ಸಖಿ ಒನ್‌ಸ್ಟಾಪ್ ಸೆಂಟರ್‌’ಗೆ ಮಂಗಳವಾರ ಭೇಟಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸುವುದರ ಜೊತೆಗೆ, ದೌರ್ಜನ್ಯ ಸಂತ್ರಸ್ತರಿಗೆ ಸಾಂತ್ವನ ನೀಡಬೇಕಿದೆ. ಅಂತಹವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲು ಎಲ್ಲಾ ಜಿಲ್ಲೆಗಳಲ್ಲೂ ಸಹಾಯವಾಣಿ ಆರಂಭಿಸಲು ಕ್ರಮ ವಹಿಸಲಿದ್ದೇವೆ. ಮಹಿಳೆಯ ಹಕ್ಕುಗಳ ಹಾಗೂ ಸೌಲಭ್ಯಗಳ ಬಗ್ಗೆ ಬಹುತೇಕ ಮಹಿಳೆಯರಿಗೆ ತಿಳಿದಿಲ್ಲ. ಈ ಕುರಿತು ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲಿದ್ದೇನೆ’ ಎಂದರು.  

‘ಇಲ್ಲಿನ ಸಖಿ ಕೇಂದ್ರದಲ್ಲಿ ಫೆಬ್ರುವರಿ ತಿಂಗಳೊಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ. ಸಾಂತ್ವನ, ನೆರವಿನ ಜತೆಗೆ ಅವರಿಗೆ ಉತ್ತಮ ಜೀವನವನ್ನು ಒದಗಿಸುವುದು ಈ ಕೇಂದ್ರದ ಉದ್ದೇಶ. ಈ ಸಖಿ ಕೇಂದ್ರವು ಸುಸಜ್ಜಿತ ಸೌಲಭ್ಯಗಳೊಂದಿಗೆ ಮಾದರಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಡಿಗೋಶನ್ ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್, ಸಖಿ ಒನ್‌ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ಭಾಗವಹಿಸಿದ್ದರು.

ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅಪಹರಣ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಜಿಲ್ಲಾಡಳಿತ ವಹಿಸಿರುವ ಕ್ರಮಗಳನ್ನು ಪರಿಶೀಲಿಸಲು ಅವರು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. 

ಸಾಂತ್ವನ ಕೇಂದ್ರದ ಸಿಬ್ಬಂದಿ ವೇತನ ಹಚ್ಚಿಸುವಂತೆ ಒತ್ತಾಯಿಸಿ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT