ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಒಆರ್‌ ಕಡ್ಡಾಯ ಭಯ ಬೇಡ : ಐವನ್‌ ಡಿಸೋಜ ಭರವಸೆ

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ
Last Updated 18 ಮೇ 2019, 16:12 IST
ಅಕ್ಷರ ಗಾತ್ರ

ಮಂಗಳೂರು: ನಗರದ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗಳ ನೋಂದಣಿಗೆ ನಗರ ಆಸ್ತಿ ಹಕ್ಕುಗಳ ದಾಖಲೆ (ಯುಪಿಒಆರ್‌) ಕಡ್ಡಾಯಗೊಳಿಸುವ ಅವಧಿಯನ್ನು ಇನ್ನೂ ಎರಡು ತಿಂಗಳು ವಿಸ್ತರಿಸಲಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ 17ರಿಂದ ಸ್ಥಿರಾಸ್ತಿಗಳ ನೋಂದಣಿಗೆ ಯುಪಿಒಆರ್‌ ಕಡ್ಡಾಯಗೊಳಿಸಲು ಈ ಹಿಂದೆ ಆದೇಶ ಹೊರಡಿಸಲಾಗಿತ್ತು. ಆದರೆ, ಯುಪಿಒಆರ್‌ ನೋಂದಣಿ ಶೇಕಡ 30ರಷ್ಟು ಮಾತ್ರ ಆಗಿದೆ. ಈ ಕಾರಣದಿಂದ ಇನ್ನೂ ಎರಡು ತಿಂಗಳು ಕಾಲಾವಕಾಶ ನೀಡುವಂತೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರಿಗೆ ಪತ್ರ ಬರೆಯಲಾಗಿದೆ. ಅವರು ತಾತ್ವಿಕವಾಗಿ ಒಪ್ಪಿದ್ದು, ಶೀಘ್ರದಲ್ಲಿ ಆದೇಶ ಹೊರಬೀಳಲಿದೆ’ ಎಂದರು.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವ ಕಾರಣದಿಂದ ಆದೇಶ ಹೊರಡಿಸಲು ಸಾಧ್ಯವಾಗಿಲ್ಲ. ಆದರೆ, ಕಂದಾಯ ಸಚಿವರು ಜಿಲ್ಲಾಧಿಕಾರಿಯವರಿಗೆ ಮೌಖಿಕ ನಿರ್ದೇಶನ ನೀಡಿದ್ದರು. ಈ ಸಂಬಂಧ ಜಿಲ್ಲಾಧಿಕಾರಿಯವರು ಉಪ ನೋಂದಣಿ ಅಧಿಕಾರಿಗಳಿಗೆ ಸೂಚನೆಯನ್ನೂ ಕೊಟ್ಟಿದ್ದಾರೆ. ಆದರೆ, ಕೆಲವು ಉಪ ನೋಂದಣಿ ಅಧಿಕಾರಿಗಳು ಸರ್ಕಾರದ ಆದೇಶವನ್ನೇ ಬಯಸುತ್ತಿದ್ದಾರೆ. ಒಂದು ವಾರದೊಳಗೆ ಈ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಯುಪಿಒಆರ್‌ ಜಾರಿಗೊಳಿಸುವ ನಿರ್ಧಾರವನ್ನು ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡಿತ್ತು. ಆಗ ಕಂದಾಯ ಸಚಿವರಾಗಿದ್ದ ಕೆ.ಎಸ್‌.ಈಶ್ವರಪ್ಪ ತೀರ್ಮಾನ ಕೈಗೊಂಡಿದ್ದರು. ನಂತರ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೆ ಚಾಲನೆ ನೀಡಿತು. ಜಮೀನುಗಳ ಭೂಮಾಪನಕ್ಕೆ ಸಿಬ್ಬಂದಿಯ ಕೊರತೆ ಹಾಗೂ ತಾಂತ್ರಿಕ ಕಾರಣಗಳಿಂದ ಯೋಜನೆಯ ಅನುಷ್ಠಾನ ವಿಳಂಬವಾಗಿದೆ ಎಂದರು.

ಒಂದು ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಒಂದೇ ಕಡೆ ಸಿಗುವುದರಿಂದ ನೋಂದಣಿ, ಮಾರಾಟ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಸರಳಗೊಳಿಸಬಹುದು. ಇದು ಒಂದು ಉತ್ತಮವಾದ ಯೋಜನೆ. ಅನುಷ್ಠಾನದಲ್ಲಿನ ತೊಡಕುಗಳು ಶೀಘ್ರದಲ್ಲಿ ನಿವಾರಣೆ ಆಗಲಿವೆ ಎಂದು ಹೇಳಿದರು.

ಅರ್ಜಿ ಬಾಕಿ ಇಲ್ಲ: ಸದ್ಯ ಮಂಗಳೂರಿನಲ್ಲಿ ಯುಪಿಒಆರ್‌ ಕೋರಿ ಸಲ್ಲಿಸಿರುವ ಎಲ್ಲ ಅರ್ಜಿಗಳನ್ನೂ ವಿಲೇವಾರಿ ಮಾಡಲಾಗಿದೆ. ಯಾವುದೇ ಹೊಸ ಅರ್ಜಿ ಬಂದರೂ ತಕ್ಷಣದಲ್ಲೇ ವಿಲೇವಾರಿ ಮಾಡಲು ಯುಪಿಒಆರ್‌ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

‘ಯುಪಿಒಆರ್‌ ಅನ್ನು ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡ್ಡಾಯಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಕೆಲವು ಗ್ರಾಮಗಳು ಮೂಲ್ಕಿ ಉಪ ನೋಂದಣಿ ಕಚೇರಿ ವ್ಯಾಪ್ತಿಗೆ ಸೇರುತ್ತವೆ. ಅಲ್ಲಿಗೆ ಸೀಮಿತವಾಗಿ ಯುಪಿಒಆರ್‌ ಕಡ್ಡಾಯ ಮಾಡಲಾಗುತ್ತದೆ. ಈ ವಿಚಾರವನ್ನು ತಪ್ಪಾಗಿ ಗ್ರಹಿಸಿ ಶಾಸಕ ಉಮಾನಾಥ ಕೋಟ್ಯಾನ್‌ ಪ್ರತಿಭಟನೆಯ ಮಾತನಾಡಿದ್ದಾರೆ. ಅವರು ಪ್ರತಿಭಟಿಸುವುದು ಬೇಡ. ಒಳ್ಳೆಯ ಯೋಜನೆ ಜಾರಿಗೆ ಸಹಕಾರ ನೀಡಲಿ’ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ್‌, ಭಾಸ್ಕರ ರಾವ್‌, ಬಿ.ಎ.ಮುಹಮ್ಮದ್ ಹನೀಫ್‌, ಮನೋರಾಜ್‌ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT