ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

38 ವರ್ಷಗಳ ಭೂಸ್ವಾಧೀನ ಪ್ರಕರಣ ಇತ್ಯರ್ಥ

ರಾಷ್ಟ್ರೀಯ ಲೋಕ ಅದಾಲತ್‌: 4233 ಪ್ರಕರಣಗಳಿಗೆ ಪರಿಹಾರ
Published 10 ಡಿಸೆಂಬರ್ 2023, 5:02 IST
Last Updated 10 ಡಿಸೆಂಬರ್ 2023, 5:02 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಎಸ್.ಎಸ್. ಬಡಾವಣೆ ನಿರ್ಮಾಣ ಸಂದರ್ಭ ಜಾಗಕ್ಕೆ ಪರಿಹಾರ ನೀಡುವ ಸಂಬಂಧ 38 ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿತು.

‘ಎಸ್‌.ಎಸ್. ಬಡಾವಣೆ ನಿರ್ಮಾಣಕ್ಕೆ 1985ರಲ್ಲಿ ಸಿಐಟಿಬಿ ರೈತರಿಂದ 10 ಎಕರೆ ಭೂಸ್ವಾಧೀನ ಮಾಡಿಕೊಂಡಿತ್ತು. ಪರಿಹಾರ ಸಮಂಜಸವಾಗಿಲ್ಲ ಎಂದು ರೈತರು ಕೋರ್ಟ್‌ ಮೊರೆ ಹೋಗಿದ್ದರು. ಪ್ರಕರಣ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. ಕಡೆಗೆ ಜಿಲ್ಲಾ ನ್ಯಾಯಾಲಯದಲ್ಲಿ ರಾಜೀ ಮೂಲಕ ಇತ್ಯರ್ಥಪಡಿಸಿಕೊಂಡರು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ.ಕರೆಣ್ಣವರ ತಿಳಿಸಿದರು.

‘10 ಎಕರೆಯಷ್ಟು ಪ್ರಕರಣ ಇತ್ಯರ್ಥಗೊಂಡಿದ್ದು, ಕೆಲವು ಪ್ರಕರಣಗಳಲ್ಲಿ ವಾರಸುದಾರರ ಹೆಸರು ನಮೂದಿಸದೇ ಇರುವುದರಿಂದ 5 ಪ್ರಕರಣಗಳು ಬಾಕಿ ಇವೆ’ ಎಂದು ಹೇಳಿದರು.

4233 ಪ್ರಕರಣ ಇತ್ಯರ್ಥ:

ಜಿಲ್ಲೆಯ 25 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 4,233 ಪ್ರಕರಣಗಳು ಇತ್ಯರ್ಥಗೊಂಡು ವಾರಸುದಾರರಿಗೆ ₹11.55 ಕೋಟಿ ಪರಿಹಾರ ಕೊಡಿಸಲಾಗಿದೆ. 1,41,826 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿ ₹55.69 ಕೋಟಿ ಪರಿಹಾರವಾಗಿ ರಾಜೀ ಮೂಲಕ ಮುಕ್ತಾಯಗೊಂಡಿವೆ.

ವಿದ್ಯುತ್‌ಲೈನ್‌ಗಳನ್ನು ಅಳವಡಿಸಲು ಜಮೀನಿನಲ್ಲಿ ಬೆಳೆ ಹಾಗೂ ಜಮೀನನ್ನು ನಾಶಪಡಿಸಿದ್ದರಿಂದ ರೈತರು ಪರಿಹಾರಕ್ಕಾಗಿ ದಾಖಲಿಸಿದ್ದ 52 ಪ್ರಕರಣಗಳಲ್ಲಿ ಅಧಿಕಾರಿಗಳು ಹಾಗೂ ರೈತರು ರಾಜೀ ಮಾಡಿಕೊಂಡು ₹16 ಲಕ್ಷ ಪರಿಹಾರ ಕೊಡಿಸಲಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿತು.

ಜಿಲ್ಲೆಯಾದ್ಯಂತ 700ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜೀ ಮಾಡಿಕೊಂಡಿದ್ದು, ವಿದ್ಯಾರ್ಥಿವೇತನ ಹಾಗೂ ಇತರೆ ಅನುಕೂಲ ಮಾಡಿಕೊಟ್ಟಿತು.

2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ₹4.50 ಮತ್ತು ಬಡ್ಡಿ ಪಾವತಿಸಬೇಕು ಎಂದು ದಾಖಲಿಸಿದ್ದ ಜಾರಿ ಅರ್ಜಿಯಲ್ಲಿ ನ್ಯಾಯಾಧೀಶರ ಮತ್ತು ಸಂಧಾನಕಾರರ ಸೂಕ್ತ ಸಲಹೆಯ ಮೇರೆಗೆ ದೈಹಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಯನ್ನು ಗಮನಿಸಿ ಈ ಪ್ರಕರಣವನ್ನು ಕೇವಲ ₹1000ಕ್ಕೆ ರಾಜೀ ಮಾಡಿಸಿದ್ದು ವಿರಳ ಪ್ರಕರಣಗಳಲ್ಲಿ ಒಂದಾಗಿದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜೆ.ವಿ.ವಿಜಯಾನಂದ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರವೀಣ್‌ಕುಮಾರ್ ಆರ್.ಎನ್., ಜಿಲ್ಲಾ ಮತ್ತು ಸೆಷನ್ಸ್ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ಶ್ರೀಪಾದ್ ಇತರರು ಇದ್ದರು.

ವೈಮನಸ್ಸು ಮರೆತು ಒಂದಾದ 8 ಜೋಡಿ

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 8 ಜೋಡಿಗಳು ವೈಮನಸ್ಸು ಮರೆತು ಇಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಒಂದಾದರು. ತಂದೆ-ತಾಯಂದಿರ ಕಡೆ ಹೆಚ್ಚು ಒಲವು ತೋರುತ್ತಿದ್ದು ಪತ್ನಿ ಮಕ್ಕಳ ಕಡೆ ಗಮನ ಕೊಡುತ್ತಿಲ್ಲ ಎಂಬುದು ಪತ್ನಿಯ ವಾದವಾದರೆ ಎರಡು ಪ್ರಕರಣಗಳಲ್ಲಿ ‘ನನ್ನ ಕೆಲಸಕ್ಕೆ ಹೆಚ್ಚು ಗೌರವ ಕೊಡುತ್ತಿಲ್ಲ ನಾನು ಅಂದುಕೊಂಡಂತೆ ನಡೆದುಕೊಳ್ಳುತ್ತಿಲ್ಲ’ ಎಂಬ ಹಠದಿಂದ ಎರಡು ಪ್ರಕರಣಳಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ನಿರ್ವಹಣೆ ವೆಚ್ಚ ಕೊಡುತ್ತಿಲ್ಲ ಎಂಬುದು ಮತ್ತೊಂದು ದೂರು. ‘ಶಾಂತಿ ಸೌಹಾರ್ದದ ಮೂಲಕ ಈ ಜೋಡಿಗಳನ್ನು ರಾಜಿ ಮಾಡಿದ್ದು ಪಕ್ಷಗಾರರು ಸಹಬಾಳ್ವೆ ತಿಳಿಸಿದ್ದಾರೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ ಕುಮಾರ್ ತಿಳಿಸಿದರು. ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ದಶರಥ್ ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್ ಸಂಧಾನಕಾರರಾದ ಭಾಗ್ಯಲಕ್ಷ್ಮಿ ವಾಣಿ ವಕೀಲರಾದ ಮಂಜಪ್ಪ ಹಲಗೇರಿ ಮಹೇಶ್‌ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT