ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರು– ಬೈಕ್ ಭೀಕರ ಅಪಘಾತ | ಇಬ್ಬರ ಸಾವು: ಗ್ರಾಮಸ್ಥರ ಪ್ರತಿಭಟನೆ

Published 9 ಮಾರ್ಚ್ 2024, 14:21 IST
Last Updated 9 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸಮೀಪದ ಕಾಕನೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮುಂಜಾನೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ.

ದಾವಣಗೆರೆ ತಾಲ್ಲೂಕಿನ ದ್ಯಾಮೇನಹಳ್ಳಿ ಸಂತೋಷ (26) ಹಾಗೂ ಹರಿಹರ ತಾಲ್ಲೂಕಿನ ಗುಲಿಗೇನಹಳ್ಳಿ ಮಹೇಂದ್ರ (23) ಮೃತರು. ಯುವಕರು ಚನ್ನಗಿರಿ ಕಡೆಗೆ ಹೋಗುತ್ತಿದ್ದರು. ಚಿಕ್ಕಮಗಳೂರಿನಿಂದ ದಾವಣಗೆರೆ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನ ನಡುವೆ ಬೆಳಿಗ್ಗೆ 7.30ರ ವೇಳೆಗೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರು ಹಾರಿ ರಸ್ತೆ ಬದಿ ಗುಂಡಿಗೆ ಬಿದ್ದಿದ್ದಾರೆ. ಕಾರು– ಬೈಕ್ ಸುಮಾರು 100 ಮೀ. ದೂರ ಎಳೆದುಕೊಂಡು ಹೋಗಿವೆ. ಕಾರಿನಲ್ಲಿದ್ದ ಮಹಿಳೆಯರನ್ನು ಸ್ಥಳದಲ್ಲಿದ್ದ ಗ್ರಾಮಸ್ಥರು ತಕ್ಷಣ ಕಾರಿನಿಂದ ಹೊರ ತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗ್ರಾಮಸ್ಥರ ದಿಢೀರ್ ಪ್ರತಿಭಟನೆ:ರಾಜ್ಯ ಹೆದ್ದಾರಿಯಲ್ಲಿ ಹಂಪ್ಸ್‌ ಹಾಕದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

‘ಗ್ರಾಮದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಪ್ರತಿ 15 ದಿನಗಳಿಗೊಮ್ಮೆ ಅಪಘಾತಗಳು ನಡೆಯುತ್ತಿವೆ. ರಸ್ತೆ ಹಂಪ್ಸ್‌ಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಲೋಕೋಪಯೋಗಿ ಇಲಾಖೆ, ಕೆಆರ್‌ಡಿಸಿಎಲ್ ಇಲಾಖೆ ಕಚೇರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಹಂಪ್ಸ್ ನಿರ್ಮಾಣ ಮಾಡಲು ಮುಂದಾಗಿಲ್ಲ. ಕಳೆದ ತಿಂಗಳು ಹಂಪ್ಸ್ ನಿರ್ಮಿಸಲು ಮುಷ್ಕರ ಹೂಡಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಹಂಪ್ಸ್‌ ಹಾಕುವ ಭರವಸೆ ನೀಡಿದ್ದರು’ ಎಂದು ಗ್ರಾಮಸ್ಥರು ರಸ್ತೆಗೆ ಬ್ಯಾರಿಕೇಡ್ ಇರಿಸಿ ಘೋಷಣೆ ಕೂಗಿದರು.

‘ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ, ಅನುದಾನಿತ ಶಾಲೆಗಳಿವೆ. ಮುಂಜಾನೆ, ಸಂಜೆ ವಾಹನಗಳ ದಟ್ಟಣೆ ಹೆಚ್ಚುತ್ತದೆ. ವಿಶಾಲ ರಸ್ತೆ ಪರಿಣಾಮ ವೇಗದ ಮಿತಿ ಇಲ್ಲದೇ ಸಂಚರಿಸುವ ವಾಹನಗಳಿಂದ ಗ್ರಾಮಸ್ಥರು ಭಯಗೊಂಡಿದ್ದಾರೆ. ಹಂಪ್ಸ್ ನಿರ್ಮಿಸಲು ಕಾನೂನಿನ ಚೌಕಟ್ಟನ್ನು ವಿವರಿಸುತ್ತಾರೆ. ದಾವಣಗೆರೆ ವಿ.ವಿ. ಬಳಿ, ದೇವರಹಳ್ಳಿ ಗ್ರಾಮ ಹಾಗೂ ಟೋಲ್‌ಗಳ ಬಳಿ ಹಂಪ್ಸ್ ಹೇಗೆ ನಿರ್ಮಿಸಿಸಲಾಗಿದೆ. ಅದೇ ರೀತಿ ಹಂಪ್ಸ್ ನಿರ್ಮಿಸಿ. ಪುನಃ ಅಪಘಾತ ಸಂಭವಿಸಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಧು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಕುಮಾರ್ ಸಂತೋಷ್, ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ಸಿಪಿಐ ಗೋಪಾಲ್ ನಾಯ್ಕ, ಎಸ್ಐ ದೀಪು ಎಂ.ಟಿ, ಚನ್ನವೀರಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಮೃತ ಯುವಕರು ಚಲಿಸುತ್ತಿದ್ದ ಬೈಕ್
ಮೃತ ಯುವಕರು ಚಲಿಸುತ್ತಿದ್ದ ಬೈಕ್
ರಾಜ್ಯ ಹೆದ್ದಾರಿಗೆ ಹಂಪ್ಸ್ ನಿರ್ಮಿಸಲು ಕಾಕನೂರು ಗ್ರಾಮಸ್ಥರು ರಸ್ತೆ ತಡೆ ನಡೆಸಿ ದಿಢೀರ್ ಪ್ರತಿಭಟನೆ ಮಾಡಿದರು
ರಾಜ್ಯ ಹೆದ್ದಾರಿಗೆ ಹಂಪ್ಸ್ ನಿರ್ಮಿಸಲು ಕಾಕನೂರು ಗ್ರಾಮಸ್ಥರು ರಸ್ತೆ ತಡೆ ನಡೆಸಿ ದಿಢೀರ್ ಪ್ರತಿಭಟನೆ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT