ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂದ ಮತಗಳು ಬರುತ್ತವೆ ಭ್ರಮೆ ಬೇಡ: ಎಚ್.ಬಿ. ಮಂಜಪ್ಪ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿಕೆ
Published 18 ಏಪ್ರಿಲ್ 2024, 6:29 IST
Last Updated 18 ಏಪ್ರಿಲ್ 2024, 6:29 IST
ಅಕ್ಷರ ಗಾತ್ರ

ದಾವಣಗೆರೆ: ‘ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಅವರು ಅಹಿಂದ ಮತಗಳನ್ನು ಪಡೆಯುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಅಹಿಂದ ಮತದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಇದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.

ಅಹಿಂದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವ ಮೂಲಕ ಸಿದ್ದರಾಮಯ್ಯ ಅವರ ಕೈಬಲಪಡಿಸಲಿದ್ದಾರೆ. ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿ ಮುಂದುವರೆಯಬೇಕು ಎಂಬ ನಿಟ್ಟಿನಲ್ಲಿ ಅಹಿಂದ ಸಮುದಾಯವು ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಗಿನೆಲೆ ಗುರುಪೀಠದ ನಿರಂಜನಾನನಂದ ಪುರಿ ಸ್ವಾಮೀಜಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣದಿಂದ ಹಿಂದೆ ಸರಿಯುವಂತೆ ಹೇಳಿದರೂ ವಿನಯ್‌ಕುಮಾರ್ ಒಪ್ಪಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇನ್ನೂ ವಯಸ್ಸು ಇದ್ದು, ಮುಂದಿನ ದಿನಗಳಲ್ಲಿ ಅವಕಾಶಗಳು ಸಿಗುತ್ತವೆ. ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅನ್ನು ಬೆಂಬಲಿಸಬೇಕು’ ಎಂದು ವಿನಯ್‌ ಕುಮಾರ್ ಅವರಿಗೆ ಸಲಹೆ ನೀಡಿದರು.

ಮುಖಂಡರಾದ ದಿನೇಶ್‌ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ್, ಎ.ನಾಗರಾಜ್, ಎಸ್.ಮಲ್ಲಿಕಾರ್ಜುನ್, ಸುರೇಶ್ ಉತ್ತಂಗಿ, ಸೋಮಶೇಖರ್ ಇದ್ದರು.

ಇಂದು ಬೃಹತ್ ರೋಡ್ ಶೋ

ಏ.18ರಂದು ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್ ರೋಡ್ ಆಯೋಜಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಎಚ್.ಬಿ. ಮಂಜಪ್ಪ ತಿಳಿಸಿದರು. ‘ಅಂದು ಬೆಳಿಗ್ಗೆ 10ಕ್ಕೆ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಭಾಗಗಳಿಂದ ರೋಡ್ ಶೋ ಆರಂಭವಾಗಲಿದ್ದು ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾಗುವ ರೋಡ್ ಶೋಗೆ ಶಾಸಕ ಶಾಮನೂರು ಶಿವಶಂಕರಪ್ಪ ಚಾಲನೆ ನೀಡಲಿದ್ದಾರೆ. ಹಗೆದಿಬ್ಬ ವೃತ್ತ ಕಾಳಿಕಾದೇವಿ ರಸ್ತೆ ಚೌಕಿಪೇಟೆ ರಸ್ತೆ ಬಕ್ಕೇಶ್ವರ ದೇವಸ್ಥಾನ ಹಾಸಭಾವಿ ವೃತ್ತ ಮಾರ್ಕೇಟ್ ರಸ್ತೆ ಮಂಡಿಪೇಟೆ ಲಕ್ಷ್ಮಿ ಸರ್ಕಲ್ ಮೂಲಕ ಪಿ.ಬಿ.ರಸ್ತೆಗೆ ಆಗಮಿಸಲಿದೆ’ ಎಂದರು. ‘ನಿಟುವ‌ಳ್ಳಿ ದುರ್ಗಾಂಬಿಕಾ ದೇವಸ್ಥಾನದ ಮೂಲಕ ಆರಂಭವಾಗುವ ಮತ್ತೊಂದು ರೋಡ್ ಶೋಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದು ಎಚ್.ಕೆ.ಆರ್. ಸರ್ಕಲ್ ಡಾಂಗೇಪಾರ್ಕ್ ಶಿವಪ್ಪಯ್ಯ ಸರ್ಕಲ್ ತ್ರಿಶೂಲ್ ಟಾಕೀಸ್ ಮೂಲಕ ಪಿ.ಬಿ.ರಸ್ತೆಗೆ ಆಗಮಿಸಲಿದ್ದು ಈ ಎರಡು ರೋಡ್ ಶೋಗಳು ಮಹಾನಗರಪಾಲಿಕೆಯ ಬಳಿ ಸಮಾವೇಶಗೊಳ್ಳಲಿವೆ. ಅಲ್ಲಿಂದ ಪಿ.ಬಿ.ರಸ್ತೆಯ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ರೋಡ್ ಶೋ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT