ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಗುರುಕುಲ ಶಿಕ್ಷಣ ಮರು ಸ್ಥಾಪಿಸುವ ಯತ್ನ

ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ‍್ಪ
Published 10 ಜನವರಿ 2024, 6:35 IST
Last Updated 10 ಜನವರಿ 2024, 6:35 IST
ಅಕ್ಷರ ಗಾತ್ರ

ದಾವಣಗೆರೆ: ‘ಗುರುಕುಲ ಶಿಕ್ಷಣವನ್ನು ಮರುಸ್ಥಾಪಿಸಲು ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ಜಾರಿಗೊಳಿಸಲಾಗುತ್ತಿದೆ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ‍್ಪ ಆರೋಪಿಸಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಹಿಳಾ ಕೋಶ, ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅಕ್ಷರದವ್ವ ಸಾವಿತ್ರಿ ಬಾಫುಲೆ ಹಾಗೂ ಫಾತಿಮಾ ಶೇಖ್ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡರೆ ಬಹುಪಾಲು ಜನರು ಶಿಕ್ಷಣದಿಂದ ವಂಚಿತರಾಗುತ್ತಾರೆ. ಕಳೆದ ಸರ್ಕಾರದ ಅವಧಿಯಲ್ಲಿ 65 ಸರ್ಕಾರಿ ಶಾಲೆಗಳನ್ನು ಮುಚ್ಚಲು ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಯಿತು. ಎನ್‌ಇಪಿಯಡಿ ಜ್ಞಾನ ಕೇಂದ್ರ ಆರಂಭಿಸಿ ಅಲ್ಲಿ 4,000–5,000 ವಿದ್ಯಾರ್ಥಿಗಳನ್ನು ಒಂದೇ ಕಡೆ ಇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸನಾತನ ವ್ಯವಸ್ಥೆಯನ್ನು ಮರುಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಶಾಲೆಯಲ್ಲಿ ಬಿಸಿಯೂಟ ಆರಂಭಿಸಿದಾಗ ಕೆಲವರು ವಿರೋಧಿಸಿದರು. ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹೆಸರಿನಲ್ಲಿ ಮಂತ್ರಾಕ್ಷತೆ ವಿತರಿಸಲಾಗುತ್ತಿದೆ. ನಮಗೆ ಮಂತ್ರಾಕ್ಷತೆ ಬೇಡ. ಹಸಿದವರಿಗೆ ಅನ್ನಭಾಗ್ಯ ಬೇಕು’ ಎಂದರು.

‘ಅಕ್ಷರ ಕಲಿಕೆ ಕೆಲವರ ಸ್ವತ್ತಾಗಿದ್ದ ಕಾಲದಲ್ಲಿ ಶಾಲೆಗಳನ್ನು ತೆರೆದು ದಲಿತರು ಶೋಷಿತ ಮಹಿಳೆಯರಿಗೆ ಅಕ್ಷರ ಕಲಿಸಿದ ಕೀರ್ತಿ ಸಾವಿತ್ರಿ ಬಾಫುಲೆ ಹಾಗೂ ಫಾತಿಮಾ ಶೇಖ್ ಅವರಿಗೆ ಸಲ್ಲುತ್ತದೆ. ಮೈಸೂರು ಮಹಾರಾಜರ ಪತ್ನಿ ಆಭರಣ ಮಾರಿ ಕೆ.ಆರ್.ಎಸ್ ಅಣೆಕಟ್ಟು ನಿರ್ಮಾಣಕ್ಕೆ ಹಣ ಕೊಟ್ಟಿದ್ದರು. ಆದರೆ ಜಲಾಶಯ ನಿರ್ಮಾಣದ ಹೊಣೆ ಹೊತ್ತಿರುವ ಎಂಜಿನಿಯರ್ ಹೆಸರು ಮುಂಚೂಣಿಗೆ ಬಂತು. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನವನ್ನು ಆಚರಿಸುತ್ತಿದ್ದು, ಶಿಕ್ಷಕರ ದಿನಾಚರಣೆ ಸಾವಿತ್ರಿ ಬಾಯಿಫುಲೆ ಹೆಸರಿನಲ್ಲಿ ಆಗಬೇಕು. ನಿಜ ಚರಿತ್ರೆ ಕಾಣೆಯಾಗಿ ಕಲ್ಪಿತ ಚರಿತ್ರೆಯನ್ನು ಇಂದು ಹೆಚ್ಚಾಗಿ ಬಿಂಬಿಸಲಾಗುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ದಾದಾಪೀರ್ ಬಿ.ಸಿ. ಮಾತನಾಡಿ, ‘ಭಾರತದಲ್ಲಷ್ಟೇ ಅಲ್ಲ. ಜಾಗತಿಕ ಚರಿತ್ರೆಯಲ್ಲೂ ಹೆಣ್ಣಿನ ವಿಷಯದಲ್ಲಿ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ. ಹೆಣ್ಣು ಪತಿವ್ರತೆಯಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಪುರುಷರಿಗೆ ಇದು ಅನ್ವಯಿಸುವುದಿಲ್ಲವೇ? ಪುರುಷರೂ ಪತ್ನಿವ್ರತ ಬೇಡವೇ? ಹೆಣ್ಣಿನ ಶೋಷಣೆಗೆ ಎಲ್ಲಾ ಧರ್ಮಗಳೂ ಪೈಪೋಟಿ ನಡೆಸಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಚರಿತ್ರೆ ಬದುಕನ್ನು ಶಾಂತಿ, ಸಮೃದ್ಧಗೊಳಿಸಬೇಕು ಆಗ ಮಾತ್ರ ಚರಿತ್ರೆಗೆ ಅರ್ಥ ಬರುತ್ತದೆ. ವರ್ತಮಾನ ಕ್ರೂರ ಮಾಡುವ ಚರಿತ್ರೆ ನಮಗೆ ಬೇಕಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಕೊಟ್ರಪ್ಪ ಸಿ.ಕೆ., ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಶಿವಕುಮಾರ್ ಮಾಡಾಳ್ ಮಾತನಾಡಿದರು. ಮಹಿಳಾ ಕೋಶದ ಸಂಚಾಲಕಿ ಪ್ರೊ.ಲೋಲಾಕ್ಷಿ ಕೆ.ವಿ., ಪ್ರೊ,ನಟರಾಜ್ ಜಿ.ಆರ್.,ಪತ್ರಾಂಕಿತ ವ್ಯವಸ್ಥಾಪಕಿ ಗೀತಾದೇವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT