ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ ಸೋಮವಾರದ ಸಂತೆಗಾಗಿ ಶೆಲ್ಟರ್ ನಿರ್ಮಾಣ

Published 28 ಮೇ 2024, 6:15 IST
Last Updated 28 ಮೇ 2024, 6:15 IST
ಅಕ್ಷರ ಗಾತ್ರ

ಬಸವಾಪಟ್ಟಣ: ನೂರು ವರ್ಷಗಳ ಇತಿಹಾಸವಿರುವ ಇಲ್ಲಿನ ಸೋಮವಾರದ ಸಂತೆಯಲ್ಲಿ ಮಳೆ–ಗಾಳಿ–ಬಿಸಿಲಿನಿಂದ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ರಕ್ಷಣೆ ಒದಗಿಸಲು ₹18 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಶೆಲ್ಟರ್‌ ನಿರ್ಮಾಣ ಮಾಡಲಾಗುತ್ತಿದೆ.

ಸುತ್ತಲಿನ ಗ್ರಾಮಗಳ ಜನರ ಬೇಡಿಕೆಯಂತೆ ನರೇಗಾ ಯೋಜನೆಯಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಡಿ.ಆರ್‌.ಹಾಲೇಶ್‌ ಮಾಹಿತಿ ನೀಡಿದರು. ‘ಈಗಾಗಲೇ ಅಡಿಪಾಯದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಎರಡು ವಾರಗಳಲ್ಲಿ ಕಬ್ಬಿಣದ ಪಿಲ್ಲರ್‌ ಅಳವಡಿಸಿ, ಅದರ ಮೇಲೆ ಕಬ್ಬಿಣದ ತಗಡು ಅಳವಡಿಸಿ ಸಂತೆ ವ್ಯಾಪಾರಕ್ಕೆ ಸಿದ್ಧಗೊಳಿಸಲಾಗುವುದು‘ ಎಂದರು.

‘6 ವರ್ಷಗಳ ಹಿಂದೆ ನಮ್ಮ ಸಂತೆ ಮೈದಾನದಲ್ಲಿ ಎಪಿಎಂಸಿ ವತಿಯಿಂದ ನಿರ್ಮಿಸಲಾಗಿದ್ದ ವಿಶಾಲವಾದ ಶೆಲ್ಟರ್‌ ಅನ್ನೂ ಸೇರಿಕೊಂಡಂತೆ, ಈಗ ಹೊಸದಾಗಿ 200 ಅಡಿ ಉದ್ದ 150 ಅಡಿ ಅಗಲದ ನಿವೇಶನದಲ್ಲಿ ಶೆಲ್ಟರ್‌ ನಿರ್ಮಿಸಲಾಗುವುದು. ಇದರಲ್ಲಿ ಹೂವು, ಹಣ್ಣು ತರಕಾರಿ, ದಿನಸಿ, ತಿಂಡಿ, ಬಟ್ಟೆ, ಚಪ್ಪಲಿ ಮತ್ತು ಇತರ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಇಲ್ಲಿನ ಸೋಮವಾರದ ಸಂತೆಗೆ 22 ಗ್ರಾಮಗಳ ಜನ ಖರೀದಿಗೆ ಬರುತ್ತಾರೆ. ಜನರಿಗೆ ಅನುಕೂಲವಾಗಲು ಗ್ರಾಮ ಪಂಚಾಯಿತಿ ಈ ಕಾಮಗಾರಿಯನ್ನು ಕೈಗೊಂಡಿದೆ’ ಎಂದು ಗ್ರಾಮ ಪಂಚಾಯಿತಿ ಪಿಡಿಒ ಅನಿಲ್‌ ಕುಮಾರ್‌ ತಿಳಿಸಿದರು.

ಇಲ್ಲಿನ ಸಂತೆ ಮೈದಾನದಲ್ಲಿ ನಿರ್ಮಿಸಲಾಗಿರುವ ಶೆಲ್ಟರ್‌ ಬಳಕೆಯಾಗದಿರುವ ಬಗ್ಗೆ ಕಳೆದ ವಾರ ‘ಪ್ರಜಾವಾಣಿ’ ವರದಿ ಮಾಡಿತ್ತು. ಹಳೆಯ ಶೆಲ್ಟರ್‌ ಒಳಗೊಂಡಂತೆ ಹೊಸ ಶೆಲ್ಟರ್‌ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿತ್ತಿದ್ದು, ಎಲ್ಲ ವ್ಯಾಪಾರಿಗಳಿಗೂ ಒಂದೇ ಸೂರಿನಡಿ ಅವಕಾಶ ಕಲ್ಪಿಸಲು ಗ್ರಾಮ ಪಂಚಾಯಿತಿ ಮುಂದಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT