ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

'ದಾಖಲಾತಿ ಪ್ರಕಾರ ಬೀರೂರು– ಸಮ್ಮಸಗಿ ಹೆದ್ದಾರಿ ನಿರ್ಮಿಸಲಿ'

ಬಿಜೆಪಿ, ಹಿಂದೂ ಜಾಗರಣ ವೇದಿಕೆ ಮುಖಂಡರ ಆಗ್ರಹ
Published 7 ಡಿಸೆಂಬರ್ 2023, 14:21 IST
Last Updated 7 ಡಿಸೆಂಬರ್ 2023, 14:21 IST
ಅಕ್ಷರ ಗಾತ್ರ

ಹರಿಹರ: ನಗರದ ಪಿಡಬ್ಲ್ಯುಡಿ ಕಚೇರಿಯಿಂದ ಹೊಸ ಸೇತುವೆವರೆಗಿನ ಬೀರೂರು– ಸಮ್ಮಸಗಿ ಹೆದ್ದಾರಿ ಕಾಮಗಾರಿಯನ್ನು ದಾಖಲಾತಿಯಲ್ಲಿರುವ ಅಳತೆಯಂತೆ ನಡೆಸಬೇಕು ಎಂದು ಹಿಂದೂ ಜಾಗರಣ ವೇದಿಕೆ ತಾಲ್ಲೂಕು ಸಂಚಾಲಕ ದಿನೇಶ್ ಆಗ್ರಹಿಸಿದರು.

‘ನಾವು ಯಾವುದೇ ಧಾರ್ಮಿಕ ಸಂಸ್ಥೆ, ಕಟ್ಟಡವನ್ನು ಗುರಿಯಾಗಿಸಿಕೊಂಡಿಲ್ಲ. ಹೆದ್ದಾರಿ ಕಾಮಗಾರಿಯನ್ನು ಸರ್ವೆ ಅಳತೆ ಪ್ರಕಾರ ಮಾಡಬೇಕೆಂಬುದಷ್ಟೇ ನಮ್ಮ ಆಗ್ರಹ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ದಾಖಲಾತಿ ಪ್ರಕಾರ ಆ ಭಾಗದಲ್ಲಿ 120 ಅಡಿ ಹೆದ್ದಾರಿ ನಿರ್ಮಿಸಬೇಕಿದೆ. ಸರ್ವೆ ಅಳತೆ ಬಿಟ್ಟು ಯಾರನ್ನೋ ಓಲೈಸಲು ಅಧಿಕಾರಿಗಳು ಹೆದ್ದಾರಿ ಕಾಮಗಾರಿ ಮಾಡಬಾರದು. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದ ಹೇಳಿದರು.

‘ಈ ಕಾಮಗಾರಿಗೆ ಸಂಬಂಧಿಸಿದ ಐದಾರು ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಂಟಿಯಾಗಿ ಆ ಭಾಗದ ಹೆದ್ದಾರಿಯನ್ನು ಅಳತೆ ಮಾಡಿ, ಗಡಿ ನಿಗದಿ ಮಾಡಿ ಕಾಮಗಾರಿ ಆರಂಭಿಸಬೇಕು’ ಎಂದು ನಗರಸಭೆ ಸದಸ್ಯ ಎ.ಬಿ.ವಿಜಯಕುಮಾರ್ ಒತ್ತಾಯಿಸಿದರು.

‘ಈ ಹಿಂದೆ ನಿಮ್ಮದೆ ಪಕ್ಷ ಆಡಳಿತದಲ್ಲಿದ್ದಾಗ ಸಮಸ್ಯೆ ಬಗೆಹರಿಸಲಾಗಿಲ್ಲ. ಈಗ ಹೇಗೆ ಬಗೆಹರಿಸುತ್ತೀರಿ’ ಎಂಬ ಪ್ರಶ್ನೆಗೆ, ‘ಶಾಸಕ ಬಿ.ಪಿ.ಹರೀಶ್ ಅವರು ಈಗ ಅಧಿವೇಶನದಲ್ಲಿದ್ದಾರೆ. ಶನಿವಾರ ಅವರು ಹರಿಹರಕ್ಕೆ ಬರಲಿದ್ದು, ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು’ ಎಂದು ಉತ್ತರಿಸಿದರು.

‘ಚುನಾವಣಾ ಲಾಭಕ್ಕಾಗಿ ಕೆಲವರು ಹೆದ್ದಾರಿ ಅಳತೆಯನ್ನು ಕಿರಿದಾಗಿಸಲು ಹೊರಟಿದ್ದಾರೆ. ನೀರಿನ ಟ್ಯಾಂಕ್ ಪಕ್ಕದ ಗ್ರಾವೆಲನ್ನು ರಾತ್ರೋ ರಾತ್ರಿ ಅಗೆದು ಸಾಗಿಸಿದವರ ಮೇಲೆ ಈವರೆಗೆ ಏಕೆ ಕಾನೂನು ಕ್ರಮ ಕೈಗೊಂಡಿಲ್ಲ. ಮಣ್ಣು ಅಗೆದಿರುವುದರಿಂದ ಅಲ್ಲಿರುವ ನೀರಿನ ಟ್ಯಾಂಕ್ ಭದ್ರತೆಗೆ ಧಕ್ಕೆ ಉಂಟಾಗಿದೆ’ ಎಂದು ಬಿಜೆಪಿ ಮುಖಂಡ ವಾಸು ಚಂದಾಪುರ ದೂರಿದರು.

ನಗರಸಭಾ ಸದಸ್ಯೆ ಅಶ್ವಿನಿ ಕೃಷ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ತುಳಜಪ್ಪ ಭೂತೆ, ಚಂದ್ರಕಾಂತ್ ಗೌಡ, ಹಿಂದೂ ಜಾಗರಣ ವೇದಿಕೆ ನಗರ ಘಟಕದ ಅಧ್ಯಕ್ಷ ಮಂಜು ರಟ್ಟಿಹಳ್ಳಿ, ಪದಾಧಿಕಾರಿಗಳಾದ ರಾಜು ಐರಣಿ, ರವಿ ತಾವರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT