ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಯಡಿಯೂರಪ್ಪ ನೇತೃತ್ವದಲ್ಲಿ ಸಭೆ: ಶಮನವಾದ ಬಿಜೆಪಿ ಬಂಡಾಯ

Published 26 ಮಾರ್ಚ್ 2024, 16:19 IST
Last Updated 26 ಮಾರ್ಚ್ 2024, 16:19 IST
ಅಕ್ಷರ ಗಾತ್ರ

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಲೋಕಸಭೆ ಚುನಾವಣೆ ಟಿಕೆಟ್ ನೀಡಿರುವುದನ್ನು ‌‌ವಿರೋಧಿಸಿ ಬಂಡಾಯ ಎದ್ದಿದ್ದ ಪಕ್ಷದ ಮುಖಂಡರ ಮನವೊಲಿಸುವ ಮೂಲಕ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಬಂಡಾಯವನ್ನು ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹೊರವಲಯದಲ್ಲಿ ಮಂಗಳವಾರ ಸಂಜೆ ಮೂರು ಗಂಟೆ ಸುಧೀರ್ಘ ಸಭೆ ನಡೆಸಿದ ಯಡಿಯೂರಪ್ಪ ಮುಖಂಡರ ಮನವೊಲಿಸಿದರು. ಬಂಡೆದ್ದವರಲ್ಲಿ ಪ್ರಮುಖರಾದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ಚುನಾವಣೆಯ ನೇತೃತ್ವ ವಹಿಸಲಾಗಿದೆ.

ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್‌ವಾಲ್‌, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವರಾದ ಬೈರತಿ ಬಸವರಾಜ, ಶಂಕರ ಪಾಟೀಲ್ ಮುನೇನಕೊಪ್ಪ, ವಿಧಾನಪರಿಷತ್ ಸದಸ್ಯರಾದ ಎನ್‌. ರವಿಕುಮಾರ್, ಕೆ.ಎಸ್. ನವೀನ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಬಂಡಾಯವೆದ್ದಿರುವ ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಗುರುಸಿದ್ದನಗೌಡ, ಎ.ಎಚ್. ಶಿವಯೋಗಿ ಸ್ವಾಮಿ. ಪ್ರಮುಖರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯ್ ಕುಮಾರ್, ಡಾ.ಟಿ.ಜಿ. ರವಿಕುಮಾರ್ ಮತ್ತಿತರರ ಜೊತೆ ಯಡಿಯೂರಪ್ಪ  ಚರ್ಚಿಸಿದರು.

ನಂತರ ಸಂಸದ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ.ಎಂ.ಲಿಂಗಣ್ಣ ಅವರನ್ನು ಸಭೆಗೆ ಕರೆಸಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು. ಸುದೀರ್ಘ ಚರ್ಚೆಯ ಬಳಿಕ ಮಾತನಾಡಿದ ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌, ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಘೋಷಿಸಿದರು.

‘ಗಾಯತ್ರಿ ಸಿದ್ದೇಶ್ವರ ಅವರ ಗೆಲುವಿಗಾಗಿ ಒಂದಾಗಿ ಕೆಲಸ ಮಾಡಬೇಕು. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ದೊಡ್ಡ ಅಂತರದಲ್ಲಿ ಗೆಲ್ಲುವ ಬಗ್ಗೆ  ಸಂಶಯ ಬೇಡ. ಬಂಡಾಯ ಎದ್ದವರು ಯಾವುದೇ ಷರತ್ತು ವಿಧಿಸಿಲ್ಲ’ ಎಂದು ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

‘ಈಗ ಎಲ್ಲವೂ ಸರಿಯಾಗಿದೆ. ಒಂದಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುತ್ತೇವೆ’ ಎಂದು ಎಸ್.ಎ. ರವೀಂದ್ರನಾಥ್ ಹೇಳಿದರು.

ಬೂದಿ ಮುಚ್ಚಿದ ಕೆಂಡ?

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆದು  ಸಂಧಾನದ ಮೂಲಕ ಬಂಡಾಯ ಶಮನವಾಗಿದ್ದರೂ ಕೆಲವರಲ್ಲಿ ಇನ್ನೂ ಅಸಮಾಧಾನವಿದೆ. ಪರಿಸ್ಥಿತಿ  ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಮೂಲಗಳು ತಿಳಿಸಿವೆ. ‘ಗಾಯತ್ರಿ ಸಿದ್ದೇಶ್ವರ ಅವರಿಗೆ ನಿಮ್ಮ ಬೆಂಬಲವಿದೆಯಾ’ ಎಂದು ಸಭೆಯ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ‘ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ’ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT