ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನವನ್ನು ಸಂಭ್ರಮಿಸುವಂತೆ ಮಾಡಿದ್ದು ಚಂದ್ರಯಾನ: ವಿಜ್ಞಾನಿ ದಾರುಕೇಶ್

Published 23 ಸೆಪ್ಟೆಂಬರ್ 2023, 16:46 IST
Last Updated 23 ಸೆಪ್ಟೆಂಬರ್ 2023, 16:46 IST
ಅಕ್ಷರ ಗಾತ್ರ

ದಾವಣಗೆರೆ: ಚಂದ್ರಯಾನ–3ರ ಯಶಸ್ಸು ವಿಜ್ಞಾನವನ್ನು ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿತ್ತು. ಇದು ಚಂದ್ರಯಾನದ ಫಲಶ್ರುತಿ ಎಂದು ಇಸ್ರೊ ವಿಜ್ಞಾನಿ ಬಿ.ಎಚ್.ಎಂ. ದಾರುಕೇಶ್ ಅಭಿಪ್ರಾಯಪಟ್ಟರು.

ಈಶ್ವರಮ್ಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಡನೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ ಚಂದ್ರನಲ್ಲಿ ವಿಕ್ರಮ್ ಲ್ಯಾಂಡರ್‌ ಅನ್ನು ಸುರಕ್ಷಿತವಾಗಿ ಇಳಿಸುವುದು, ರೋವರ್‌ ಅನ್ನು ಓಡಿಸಿ, ವೈಜ್ಞಾನಿಕವಾಗಿ ಪ್ರಯೋಗ ಮಾಡುವ ಉದ್ದೇಶದಿಂದ ಚಂದ್ರಯಾನ–3 ಶುರುವಾಯಿತು’ ಎಂದು ಅನುಭವ ಹಂಚಿಕೊಂಡರು.

‘ಈ ಮೊದಲು ಮಕ್ಕಳು ಅಮೆರಿಕಾ, ರಷ್ಯಾದವರು ಚಂದ್ರನಲ್ಲಿಗೆ ಹೋಗಿದ್ದಾರೆ ನಾವು ಹೋಗಬಹುದಾ ಎಂದು ಪ್ರಶ್ನೆ ಕೇಳುತ್ತಿದ್ದರು. ಈಗ ಇಸ್ರೊ ವಿಜ್ಞಾನಿಗಳು ಮಂಗಳ ಗ್ರಹಕ್ಕೆ ಹೋಗಬಹುದಾ ಎಂದು ಕೇಳುತ್ತಿದ್ದಾರೆ. ಇಸ್ರೊ ಯಶಸ್ಸಿನಿಂದ ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರಗಳ ಸಾಧನೆ ಮಾಡಿದ್ದೇವೆ. ಈ ಬದಲಾವಣೆ ಹೀಗೆಯೇ ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಹೇಳಿದರು. 

‘ಅಮೆರಿಕದ ನಾಸಾದಲ್ಲಿ ಭಾರತದ ಹಲವು ವಿಜ್ಞಾನಿಗಳು ಕೆಲಸ ಮಾಡುತ್ತಿದಾರೆ. ಆದರೆ ಭಾರತದ ಇಸ್ರೊ ಸಂಸ್ಥೆಯಲ್ಲಿ ಒಬ್ಬ ವಿದೇಶಿ ವಿಜ್ಞಾನಿಯೂ ಇಲ್ಲ. ಭಾರತೀಯ ವಿಜ್ಞಾನಿಗಳು ಬೇರೆ ದೇಶದಲ್ಲಿ ಹೋದರೆ ಸಾಧನೆ ಮಾಡುತ್ತಾರೆ ಎಂಬ ಭ್ರಮೆಯನ್ನು ಬಿಟ್ಟು ಭಾರತದಲ್ಲೇ ಪ್ರಯತ್ನ ನಿರಂತರವಾಗಿ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿಜ್ಞಾನಿಗಳಾಗಲು ಸಾಧ್ಯವಿಲ್ಲ ಎಂದುಕೊಳ್ಳುವುದು ಬೇಡ, ಖಂಡಿತ ಸಾಧ್ಯವಿದೆ. ಮೊದಲು ಅವಕಾಶ ಸಿಕ್ಕ ಕಡೆ ಅರ್ಜಿ ಸಲ್ಲಿಸಿ, ಆನಂತರ ನಿಮ್ಮಿಷ್ಟದಂತೆ ಸಾಧನೆ ಮಾಡಿ’ ಎಂದು ಹೇಳಿದರು. 

‘ವಿಜ್ಞಾನಿಗಳಾಗಲೀ ಅಥವಾ ಎಂಜಿನಿಯರ್‌ಗಳಾಗಲೀ ಅವರವರಿಗೆ ವ್ಯಕ್ತಿಗತವಾದ ಕೆಲವು ನಂಬಿಕೆಗಳಿರುತ್ತವೆ. ಅಂತಹ ನಂಬಿಕೆಗಳನ್ನು ಗೌರವಿಸಬೇಕು. ದೇವಸ್ಥಾನಕ್ಕೆ ಹೋಗಿದ್ದಕ್ಕೆ ಕೆಲವು ಟೀಕೆಗಳು ಬಂದವು. ಪರೀಕ್ಷೆಗೂ ಮೊದಲು ನಾವು ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡುವ ಸಂಸ್ಕೃತಿಯಲ್ಲಿ ಬೆಳೆದು ಬಂದವರು. ಅನಿಷ್ಠ ತೊಲಗಿಸಲು, ಏಕಾಗ್ರತೆ ಹಾಗೂ ದೃಢ ನಿರ್ಣಯ ತೆಗೆದುಕೊಳ್ಳಬಹುದೆಂಬ ನಿಲುವಿನಿಂದ ದೇವಸ್ಥಾನಕ್ಕೆ ಹೋಗಬೇಕಾಯಿತು’ ಎಂದು ಹೇಳಿದರು.

ಈಶ್ವರಮ್ಮ ಶಾಲೆಯ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಎ.ಆರ್. ಉಷಾ ರಂಗನಾಥ್, ಅಧ್ಯಕ್ಷರಾದ ಕೆ.ಆರ್.ಸುಜಾತ ಕೃಷ್ಣ, ಪ್ರಾಂಶುಪಾಲ ಕೆ.ಎಸ್. ಪ್ರಭುಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT