ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿ: ಶಾಸಕ ಹರೀಶ್

ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ, ಕಲಾ ಉತ್ಸವ
Published 20 ಡಿಸೆಂಬರ್ 2023, 4:25 IST
Last Updated 20 ಡಿಸೆಂಬರ್ 2023, 4:25 IST
ಅಕ್ಷರ ಗಾತ್ರ

ದಾವಣಗೆರೆ: ‘ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ರಾಜ್ಯಮಟ್ಟದವರೆಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರತಿಭಾ ಕಾರಂಜಿ ಸಹಕಾರಿಯಾಗಲಿದೆ’ ಎಂದು ಹರಿಹರ ಶಾಸಕ ಬಿ.ಪಿ ಹರೀಶ್ ಅಭಿಪ್ರಾಯಪಟ್ಟರು.

ಇಲ್ಲಿನ ಶಾಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಕಸನದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

‘ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ನಮ್ಮ ರಾಜಕೀಯ ಒತ್ತಡದ ನಡುವೆ ಮನಸ್ಸಿಗೆ ಸಮಾಧಾನ, ಸಂತೋಷವನ್ನುಂಟು ಮಾಡುತ್ತವೆ. ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಇಂತಹ ವೇದಿಕೆಗಳಲ್ಲಿ ತೋರ್ಪಡಿಸಬೇಕು. ಈ ಕಲೋತ್ಸವದಲ್ಲಿ ಮಕ್ಕಳು ಅನೇಕ ವೇಷಭೂಷಣ ಧರಿಸಿರುವುದು ಆಕರ್ಷಣೀಯವಾಗಿದೆ’ ಎಂದರು.

‘ಮಕ್ಕಳು ಓದು ಬರಹಕ್ಕೆ ಸೀಮಿತಗೊಳ್ಳದೆ ಪ್ರತಿಭೆ, ಸೃಜನಶೀಲತೆಯನ್ನು ಹೊರತರುವಂತ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರತಿಭಾ ಕಾರಂಜಿಯು ಒಂದು ಉತ್ತಮ ವೇದಿಕೆಯಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಕೊಟ್ರೇಶ್ ಜಿ. ಅಭಿಪ್ರಾಯಪಟ್ಟರು.

‘ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿನ ಸಂಕುಚಿತ ಮನೋಭಾವವನ್ನು ದೂರ ಮಾಡುತ್ತಿದೆ. ನಾಟಕ, ನೃತ್ಯ, ಲಾವಣಿ, ಸಂಗೀತ, ಕವಾಲಿ, ವೀರಗಾಸೆಯಂತಹ ಕಲೆಗಳನ್ನು ಪ್ರದರ್ಶಿಸುವುದೇ ಈ ಪ್ರತಿಭಾ ಕಾರಂಜಿಯ ಮೂಲ ಉದ್ದೇಶವಾಗಿದೆ. ಇಲ್ಲಿ 48 ವಿವಿಧ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಾದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 1,202 ಸರ್ಕಾರಿ, 785 ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ, 35 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು ಹಾಗೂ 2 ಕೇಂದ್ರೀಯ ಶಾಲೆಗಳಿದ್ದು, ಒಟ್ಟು 2,68,000 ವಿದ್ಯಾರ್ಥಿಗಳು ಓದುತ್ತಿದ್ದು, 10,150 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದರು.

ಪಾಲಿಕೆ ಸದಸ್ಯರಾದ ಕಲ್ಲಳ್ಳಿ ನಾಗರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಗೀತಾ ಎಸ್., ಶಾಮನೂರು ಸರ್ಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಜಿ.ಆರ್.ಮುದೇಗೌಡಪ್ಪ, ಕೆ.ಎನ್.ನಾಗರಾಜ್, ವೆಂಕಟೇಶ್, ಹಾಲುವರ್ತಿ ಕಲ್ಲೇಶ್, ಓಂಕಾರಪ್ಪ, ಕಲ್ಪನಾ ಭಾಗವಹಿಸಿದ್ದರು.

ದಾವಣಗೆರೆಯ ಶಾಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಾ ಉತ್ಸವದಲ್ಲಿ ಎತ್ತಿನಬಂಡಿ ಮೆರವಣಿಗೆ ನಡೆಯಿತು
ದಾವಣಗೆರೆಯ ಶಾಮನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲಾ ಉತ್ಸವದಲ್ಲಿ ಎತ್ತಿನಬಂಡಿ ಮೆರವಣಿಗೆ ನಡೆಯಿತು

48 ವಿವಿಧ ಸ್ಪರ್ಧೆಗಳ ಆಯೋಜನೆ ಆಕರ್ಷಕ ವೇಷಭೂಷಣದಲ್ಲಿ ಮಿಂಚಿದ ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಸಂಕುಚಿತ ಮನೋಭಾವ ದೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT