ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರಿಗೆ ಭೂಮಿ ಹಕ್ಕುಕೊಟ್ಟಿದ್ದು ಕಾಂಗ್ರೆಸ್: ಮಾಜಿ ಸಚಿವ ಎಚ್.ಆಂಜನೇಯ

Published 28 ಏಪ್ರಿಲ್ 2024, 6:05 IST
Last Updated 28 ಏಪ್ರಿಲ್ 2024, 6:05 IST
ಅಕ್ಷರ ಗಾತ್ರ

ಜಗಳೂರು: ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭೂಸುಧಾರಣೆ ಕಾಯ್ದೆ ಜಾರಿಗೊಳಿಸಿ ದಲಿತರಿಗೆ ಭೂಮಿ ಹಕ್ಕು ನೀಡಿದ್ದರಿಂದ ಸಮುದಾಯದವರು ಆರ್ಥಿಕ, ಸಾಮಾಜಿಕ ಏಳಿಗೆ ಕಾಣುವಂತಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಕಿವಿಮಾತು ಹೇಳಿದರು.

ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಮಾದಿಗ ಸಮಾಜದ ಮುಖಂಡರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಿ.ಆರ್‌.ಅಂಬೇಡ್ಕರ್, ಡಾ.ಬಾಬು ಜಗಜೀವನ್ ರಾಂ ಅವರನ್ನೊಳಗೊಂಡಂತೆ ದಲಿತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ ಕಾಂಗ್ರೆಸ್ ಪಕ್ಷವನ್ನು ಸಮುದಾಯದವರು ಕೈಬಿಡಬಾರದು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಎಲ್ಲಾ ವರ್ಗದವರಿಗೂ ತಲುಪುವ ಮೂಲಕ ರಾಜ್ಯದಲ್ಲಿ ಬಡವರಿಗೆ ಬದುಕು ಕಟ್ಟಿಕೊಟ್ಟಿದೆ. ಶೋಷಿತರಿಗೆ ನೀರಾವರಿ ಭಾಗ್ಯ ಸಿಗಬಾರದು ಎಂಬ ಹುನ್ನಾರದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಕೆಂದ್ರ ಸರ್ಕಾರ ನಯಾಪೈಸೆಯನ್ನೂ ಬಿಡುಗಡೆ ಮಾಡದೆ ಅಭಿವೃದ್ದಿಗೆ ವಿರುದ್ದವಾಗಿದೆ. ಬಿಜೆಪಿ ಕೇವಲ ಧರ್ಮ, ದೇವರ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

‘ನಾನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದ ವೇಳೆ ಜಾರಿಗೊಳಿಸಿದ ಎಸ್‌ಸಿಪಿ, ಟಿಎಸ್‌ಪಿ ಕ್ರಾಂತಿಕಾರಕ ಕಾಯ್ದೆ ದೇಶಕ್ಕೇ ಮಾದರಿಯಾಗಿದೆ.


ಚುನಾವಣೆಗೂ ಮುನ್ನವೇ ಟ್ರಸ್ಟ್ ಮೂಲಕ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಾದಿಗ ಸಮುದಾಯದ ಕಾರ್ಯಕರ್ತರು ಬೂತ್‌ನಲ್ಲಿ ಲೀಡ್ ಕೊಡಬೇಕು’ ಎಂದರು.

ಶಾಸಕ ಬಿ.ದೇವೇಂದ್ರಪ್ಪ, ‘ನನ್ನ ಆಡಳಿತಾವಧಿಯಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿರುವೆ’ಎಂದು ಭರವಸೆ ನೀಡಿದರು.

ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್, ಮಾದಿಗ ಸಮುದಾಯದ ಮುಖಂಡ ಜಿ.ಶಂಭುಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಬಿ.ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ, ಸುಧೀರ್ ರೆಡ್ಡಿ, ಹನುಮಂತಾಪುರ ಶಿವಕುಮಾರ್, ಅಸಾದುಲ್ಲಾ, ಚೌಡಪ್ಪ, ಪುರುಷೋತ್ತಮ ನಾಯ್ಕ, ಗೋಪಲಾಪುರ ಮಹೇಶ್, ಮಂಜುನಾಥ್, ಗುತ್ತಿದುರ್ಗ ರುದ್ರೇಶ್ ಮಾರುತಿ, ಪುಣಭಗಟ್ಟ ಹನುಮಂತಪ್ಪ, ವಿಜಯ್ ಕೆಂಚೋಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT