ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಡಸಘಟ್ಟ | ಕಲುಷಿತ ನೀರು ಪೂರೈಕೆ: ಗ್ರಾಮಸ್ಥರ ಆರೋಪ

ಪರಿಶಿಷ್ಟ ಕೇರಿಗಳಿಗೆ ಶುದ್ಧ ನೀರು ಪೂರೈಸಲು ನಿವಾಸಿಗಳ ಆಗ್ರಹ
Published 17 ಡಿಸೆಂಬರ್ 2023, 14:36 IST
Last Updated 17 ಡಿಸೆಂಬರ್ 2023, 14:36 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಸಮೀಪದ ಹಿಂಡಸಘಟ್ಟ ಗ್ರಾಮವು ವಾಸನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಗ್ರಾಮ ಪಂಚಾಯಿತಿಯಿಂದ ಸರಬರಾಜಾಗುವ ಕುಡಿಯುವ ನೀರು ಕಲುಷಿತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮದ ಪರಿಶಿಷ್ಟ ಕಾಲೊನಿಗೆ ಸರಬರಾಜಾಗುವ ನೀರಿನಲ್ಲಿ ಹುಳ ಪತ್ತೆಯಾಗಿದ್ದು, ಕೆಟ್ಟ ವಾಸನೆ ಬರುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ. ‘ಶುದ್ಧ ನೀರು ಸರಬರಾಜು ಮಾಡಿ ಎಂದು ಸಂಬಂಧಪಟ್ಟ ಎಲ್ಲರನ್ನೂ ಕೇಳಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದ್ದಾರೆ.

‘ಜಲಜೀವನ್ ಮಿಷನ್ ಯೋಜನೆಯಡಿ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಹಳೆಯ ಪದ್ಧತಿಯಂತೆ ಮಿನಿ ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಮದ ಪಿಕಪ್ ಹತ್ತಿರದ ಬೋರ್‌ವೆಲ್ ಮುಖಾಂತರ ಮಿನಿ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿದೆ. ಆದರೆ, ಆ ನೀರು ಶುದ್ಧವಾಗಿಲ್ಲ’ ಎಂದು ನಿವಾಸಿಗಳು ತಿಳಿಸುತ್ತಾರೆ.

‘ಕೇರಿಯಲ್ಲಿ ಚರಂಡಿ ಇದೆ, ಚರಂಡಿಗೆ ಅಂಟಿಕೊಂಡಂತೆ ಪೈಪ್ ಲೈನ್ ಇದೆ. ಬೋರ್‌ವೆಲ್ ನೀರು ಹರಿಜನ ಬಳಸುವ ಮಿನಿ ವಾಟರ್ ಟ್ಯಾಂಕ್‌ಗೆ ಸರಬರಾಜು ಆಗುತ್ತದೆ. ಅಲ್ಲಲ್ಲಿ ಪೈಪುಗಳು ಒಡೆದಿವೆ. ನೀರು ನಿಂತ ಸಮಯದಲ್ಲಿ ಚರಂಡಿಯಲ್ಲಿನ ನೀರು ಪೈಪಗಳಲ್ಲಿ ಸೇರಿಕೊಳ್ಳುತ್ತದೆ. ನೀರು ಸರಬರಾಜು ಆಗುವ ಸಂದರ್ಭಲ್ಲಿ ಬೋರ್‌ವೆಲ್ ನೀರಿನ ಜೊತೆಗೆ ಚರಂಡಿ ನೀರು ಮಿನಿ ವಾಟರ್ ಟ್ಯಾಂಕ್‌ಗೆ ಸೇರುತ್ತದೆ’ ಎಂದು ನಿವಾಸಿಗಳು ವಿವರಿಸಿದರು.

‘ಶುದ್ಧ ನೀರು ಕೊಡಿ ನಮ್ಮ ಕೇರಿಗಳ ಚರಂಡಿ ನೀರು ಹೊರಗೆ ಹೋಗುವಂತೆ ಮಾಡಿ, ಇಲ್ಲವಾದಲ್ಲಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಲಾಗುವುದು’ ಎಂದು ನಿವಾಸಿಗಳಾದ ಎ.ಕೆ.ಪ್ರಕಾಶ್, ಚಂದ್ರಪ್ಪ, ಸಂಜೀವಪ್ಪ, ಪುನೀತ್, ಹನುಮಂತಪ್ಪ ಪಚ್ಚಿ, ಸಿದ್ದೇಶ್, ಮೌನೇಶ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಪಿ.ಡಿ.ಒ., ತಾಲ್ಲೂಕು ಪಂಚಾಯಿತಿ ಇ.ಒ., ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕರಿಬಸಪ್ಪ, ಸದಸ್ಯ ಜಗದೀಶಪ್ಪ, ಮುಖಂಡರಾದ ಅಂಜಿನಪ್ಪ, ವಿಜಯ್ ಕುಮಾರ್, ಎಂ.ಎಚ್.ರಾಮನಗೌಡ ತಿಳಿಸಿದ್ದಾರೆ.

ಕಡರನಾಯ್ಕನಹಳ್ಳಿ ಸಮೀಪದ ಹಿಂಡಸಘಟ್ಟ ಗ್ರಾಮದ ಜೆಜೆಎಂ ಯೋಜನೆಯ ಮೀಟರ್ ಬಾಕ್ಸ್‌ನಲ್ಲಿ ನೀರು ನಿಂತಿರುವುದು
ಕಡರನಾಯ್ಕನಹಳ್ಳಿ ಸಮೀಪದ ಹಿಂಡಸಘಟ್ಟ ಗ್ರಾಮದ ಜೆಜೆಎಂ ಯೋಜನೆಯ ಮೀಟರ್ ಬಾಕ್ಸ್‌ನಲ್ಲಿ ನೀರು ನಿಂತಿರುವುದು

ನಳಗಳಿಗೆ ಮೀಟರ್ ಬಾಕ್ಸ್‌ ಅಳವಡಿಸಲಾಗಿದೆ. ಬಾಕ್ಸ್‌ನಲ್ಲಿ ನೀರು ಸಂಗ್ರಹವಾಗುತ್ತಿದ್ದು, ಆ ನೀರು ಕೊಳೆತು ಅಲ್ಲಿ ರೋಗಕಾರಕ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಅವು ಕಚ್ಚಿದಾಗ ಕಾಯಿಲೆ ಹರಡುತ್ತವೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ನಿರೀಕ್ಷಣಾದಿಕಾರಿ ಎಂ.ಕೆ.ಚಂದ್ರಶೇಖರಯ್ಯ ತಿಳಿಸಿದರು.

ಈ ಬಗ್ಗೆ ಹಲವು ಬಾರಿ ಕ್ರಮ ಕೈಗೊಂಡಿದ್ದೇವೆ. ಈ ತಕ್ಷಣ ಪರಿಶೀಲಿಸಿ ಶುದ್ಧ ನೀರು ಪೂರೈಕೆ ಹಾಗೂ ಚರಂಡಿ ಸ್ವಚ್ಛತೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ
-ಈರಪ್ಪ, ಪಿಡಿಒ ವಾಸನ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT