ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ದಾಖಲೆ ಕೊಠಡಿಯಲ್ಲಿ ಮಧ್ಯವರ್ತಿಗಳ ಹಾವಳಿ ಆರೋಪ; ಸರ್ಕಾರಕ್ಕೆ ಪತ್ರ

Published 1 ಜನವರಿ 2024, 14:47 IST
Last Updated 1 ಜನವರಿ 2024, 14:47 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನ ಸಾವಿರಾರು ರೈತರಿಗೆ ಸಂಬಂಧಿಸಿದ ಭೂ ದಾಖಲೆಗಳ ಸಂಗ್ರಹವಿರುವ ಇಲ್ಲಿನ ತಹಶೀಲ್ದಾರ್ ಕಚೇರಿಯ ಭೂ ದಾಖಲೆ ಕೊಠಡಿಯಲ್ಲಿ ಹಣ ಪಡೆದು ದಾಖಲೆಗಳನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಗಂಭೀರ ಆರೋಪ ಎದುರಿಸುತ್ತಿರುವ ಸಿಬ್ಬಂದಿಯನ್ನು ಮತ್ತೆ ನೇಮಕ ಮಾಡಿರುವ ತಹಶೀಲ್ದಾರ್ ಅವರ ಕ್ರಮ ಸಂಶಯಾಸ್ಪದವಾಗಿದೆ ಎಂದು ಆರೋಪಿಸಿ ಆರ್.ಟಿ.ಐ ಕಾರ್ಯಕರ್ತ ಮನುಮಾರ್ಕ್ ಇಮಾಂ ಅವರು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದಾರೆ.

ದಾಖಲೆ ಕೊಠಡಿ ಉಸ್ತುವಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಡಿ.ಎ ಕಾಂತರಾಜ್ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಈ ಹಿಂದೆ ದಾಖಲೆ ಕೊಠಡಿಯಿಂದ ತೆರವುಗೊಳಿಸಿ ಹೊನ್ನಾಳಿ ತಾಲ್ಲೂಕಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಮತ್ತೆ ಜಗಳೂರಿನ ತಹಶೀಲ್ದಾರ್ ಕಚೇರಿಗೆ ವರ್ಗಾವಣೆಯಾಗಿ ಬಂದಿದ್ದಾರೆ.

ಕಾಂತರಾಜ್, ದಾಖಲೆ ಕೊಠಡಿಯಲ್ಲಿರುವ ಹಳೇ ದಾಖಲೆಗಳ ಪ್ರತಿಗಳನ್ನು ವಿತರಿಸಲು ರೈತರಿಂದ ನೇರವಾಗಿ ಹಣ ಪಡೆದು ಚಲನ್ ಮೂಲಕ ಸರ್ಕಾರಕ್ಕೆ ಪಾವತಿಸದೆ ಅವ್ಯವಹಾರ ಎಸಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಹೀಗಿದ್ದರೂ ತಹಶೀಲ್ದಾರ್ ಕಲೀಂ ಉಲ್ಲಾ ಅವರು ಕಾಂತರಾಜ್ ಅವರನ್ನು ಭೂ ದಾಖಲೆ ಕೊಠಡಿಗೆ ಉಸ್ತುವಾರಿಯಾಗಿ ನೇಮಿಸಿದ್ದಾರೆ ಎಂದು ಮನುಮಾರ್ಕ್ ಇಮಾಂ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಇ–ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ತಾಲ್ಲೂಕಿನ ಬಹುರಾಷ್ಟ್ರೀಯ ವಿಂಡ್ ಮಿಲ್ ಮತ್ತು ಸೋಲಾರ್ ಕಂಪನಿಗಳು ತಮ್ಮ ಘಟಕಗಳನ್ನು ಸ್ಥಾಪಿಸಿದ್ದು, ಪ್ರತಿನಿತ್ಯ ಕಂಪನಿಯ ಮಧ್ಯವರ್ತಿಗಳು ದಾಖಲೆ ಕೊಠಡಿಗೆ ಮುಗಿ ಬೀಳುತ್ತಿದ್ದಾರೆ. ರೈತರು ಮತ್ತು ಬಡವರಿಗೆ ಅಗತ್ಯ ದಾಖಲೆ ನೀಡಲು ಸತಾಯಿಸುತ್ತಾ, ಕಂಪನಿಯ ಬಲಾಢ್ಯ ದಲ್ಲಾಳಿಗಳಿಂದ ಹಣ ಪಡೆದು ಮೂಲ ದಾಖಲೆಗಳನ್ನು ಹಸ್ತಾಂತರಿಸುತ್ತಿರುವ ಬಗ್ಗೆ ಗಂಭೀರ ದೂರುಗಳಿವೆ. ಬಡ ರೈತರಿಂದಲೂ ದಾಖಲೆ ನೀಡಲು ನೂರಾರು ರೂಪಾಯಿ ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿದ್ದು, ತಹಶೀಲ್ದಾರ್ ಕಚೇರಿ ವಸೂಲಾತಿ ಕೇಂದ್ರವಾಗಿ ಪರಿಣಮಿಸಿದೆ ಎಂದು ದೂರಿದ್ದಾರೆ.

ದಾಖಲೆ ಕೊಠಡಿಯಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಬೇಕು. ಯಾವುದೇ ದಾಖಲೆ ಕಳುವಾದಲ್ಲಿ ತಹಶೀಲ್ದಾರ್ ಅವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕು. ತಾಲ್ಲೂಕು ಕಚೇರಿಯಲ್ಲಿ ಕಾಂತರಾಜ್ ಸೇರಿ ಬಹುತೇಕ ಸಿಬ್ಬಂದಿ ಹತ್ತಾರು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಅವರನ್ನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ಮುಕ್ತ ವಾತಾವರಣ ನಿರ್ಮಿಸಬೇಕು. ಸಾರ್ವಜನಿಕ ದಾಖಲೆ ಕಾಯ್ದೆ-2010ರ ನಿಯಮದಂತೆ ಗ್ರೇಡ್ -1 ತಹಶೀಲ್ದಾರ್ ದರ್ಜೆ ಅಧಿಕಾರಿಯನ್ನು ದಾಖಲೆ ಕೊಠಡಿ ನಿರ್ವಹಣೆಗೆ ನೇಮಕ ಮಾಡಬೇಕು. ಇಲ್ಲವಾದಲ್ಲಿ ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಅವರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಮನುಮಾರ್ಕ್ ಇಮಾಂ ಅವರು ಎಚ್ಚರಿಕೆ ನೀಡಿದ್ದಾರೆ.

ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಕಾಂತರಾಜ್ ಅವರನ್ನು ಅನಿವಾರ್ಯವಾಗಿ ದಾಖಲೆ ಕೊಠಡಿಗೆ ಮತ್ತೆ ನೇಮಿಸಲಾಗಿದೆ. ಯಾವುದೇ ಲೋಪವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಕಲೀಂ ಉಲ್ಲಾ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT