ಶುಕ್ರವಾರ, ಫೆಬ್ರವರಿ 26, 2021
30 °C
ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಕಾರ್ಯಾಗಾರದಲ್ಲಿ ಡಿಡಿಪಿಐ ಪರಮೇಶ್ವರಪ್ಪ

ಶಿಕ್ಷಕಿಯರ ನೇತೃತ್ವದಲ್ಲಿ ಮೀನಾ ತಂಡ ರಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಿಕ್ಷಕರಲ್ಲಿ ವಿದ್ಯಾರ್ಥಿನಿಯರು ಎಲ್ಲ ವಿಷಯ ಹೇಳಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಶಿಕ್ಷಕಿಯರ ಹೆಸರಲ್ಲಿ ನೇತೃತ್ವದಲ್ಲಿ ಪ್ರತಿ ಶಾಲೆಯಲ್ಲಿ ಮೀನಾ ತಂಡ ರಚನೆ ಮಾಡಬೇಕು ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ‘ಬಾಲ್ಯ ವಿವಾಹ ಕಾಯ್ದೆ, ಪೋಕ್ಸೊ ಕಾಯ್ದೆ’ಗಳ ಬಗ್ಗೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು ಎಂಬ ಕಾರಣಕ್ಕಾಗಿ ಒಂದರಿಂದ ಒಂಬತ್ತನೇ ತರಗತಿವರೆಗೆ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮ ಮಾಡಲಾಗಿದೆ. ಆದರೂ, ಒಂದನೇ ತರಗತಿಗೆ 100 ಮಕ್ಕಳು ಸೇರಿದರೆ, 10 ತರಗತಿಗೆ ತಲುಪುವ ಹೊತ್ತಿಗೆ 75 ಮಂದಿ ಮಾತ್ರ ಇರುತ್ತಾರೆ. ಉಳಿದ 25 ಮಂದಿ ಅರ್ಧದಲ್ಲಿ ವಿದ್ಯಾಭ್ಯಾಸ ನಿಲ್ಲಿಸಿರುತ್ತಾರೆ. ಇದರ ಕಾರಣ ಪತ್ತೆ ಹಚ್ಚಿ ಅವರನ್ನು ಮತ್ತೆ ಶಾಲೆಗೆ ಬರುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಆದ ಕೂಡಲೇ ಮದುವೆ ಮಾಡಿ ಬಿಡುವ ಹೆತ್ತವರ ಸಂಖ್ಯೆ ಜಾಸ್ತಿ ಇದೆ. ಯಾವ ಪ್ರದೇಶ ಮತ್ತು ಯಾವ ಸಮುದಾಯದಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಶಿಕ್ಷಕರ ನೆರವು ಬೇಕು. ಅದಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗ್ರಾಮದಲ್ಲಿರುವ ಶಿಕ್ಷಕರು, ಪಿಡಿಒ, ಗ್ರಾಮ ಸಹಾಯಕ, ಪೊಲೀಸರು ಯಾರಿಗೆ ಗೊತ್ತಾದರೂ ಕೂಡಲೇ ಇಲಾಖೆಯ ಗಮನಕ್ಕೆ ತನ್ನಿ’ ಎಂದು ತಿಳಿಸಿದರು.

ಬಾಲ್ಯ ವಿವಾಹವಾದರೆ ಆ ಬಾಲಕಿ ಮತ್ತು ಹುಟ್ಟುವ ಮಗು ಅಪೌಷ್ಟಿಕತೆಯಿಂದ ಬಳಲು ಸಂದರ್ಭಗಳು ಹೆಚ್ಚಿರುತ್ತವೆ. ತಾಯಿ, ಮಗು ಮರಣ ಪ್ರಮಾಣ ಹೆಚ್ಚುತ್ತದೆ. ಹಿಂದೂ ಸಮಾಜದಲ್ಲಿ ಒಮ್ಮೆ ಗಂಡ ಸತ್ತರೆ ವಿಧವೆಯಾಗಿಯೇ ಇರಬೇಕಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ತಪ್ಪಿಸಲು ಬಾಲ್ಯವಿವಾಹ ಆಗದಂತೆ ನೋಡಿಕೊಳ್ಳಬೇಕು ಎಂದರು.

ಕಳೆದ ವರ್ಷ ಹದಡಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಇದ್ದಕ್ಕಿದ್ದಂತೆ ಶಾಲೆ ತೊರದಿದ್ದಳು. ಯಾಕೆ ಬಿಟ್ಟಳು ಎಂದು ವರದಿ ನೀಡುವಂತೆ ಆ ಶಾಲೆಯ ಮುಖ್ಯೋಪಾಧ್ಯಾಯರಿಗೆ ತಿಳಿಸಿದಾಗ, ಆಕೆ ಮದುವೆಗಾಗಿ ಶಾಲೆ ತೊರೆದಿದ್ದಾಳೆ ಎಂದು ವರದಿ ನೀಡಿದ್ದರು. ಈ ರೀತಿ ವರದಿ ನೀಡುವುದು ತಪ್ಪು. ಇದು ಸಾಬೀತಾದರೆ ಶಿಕ್ಷಕರೂ 7 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಅದರ ಬದಲು ಆಕೆ ಯಾಕೆ ಶಾಲೆ ಬಿಟ್ಟಳು ಎಂಬುದನ್ನು ಕೂಡಲೇ ಪತ್ತೆ ಹಚ್ಚಬೇಕು. ಮದುವೆಗಾಗಿ ಶಾಲೆ ಬಿಟ್ಟಿದ್ದರೆ ಆ ಮದುವೆನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಬಾಲ್ಯ ವಿವಾಹ ನಡೆದರೆ, ಆಕೆಯ ಹೆತ್ತವರು, ವರ ಮತ್ತು ವರನ ಹೆತ್ತವರು, ಪುರೋಹಿತ, ಹಾಲ್‌ ಮಾಲೀಕ, ಅಡುಗೆಯವರು, ಲಗ್ನಪತ್ರಿಕೆ ಮುದ್ರಿಸಿದವರು ಹೀಗೆ ಎಲ್ಲರ ಮೇಲೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ತಿಳಿಸಿದರು.

ರಾಜ್ಯ ಕಾನೂನು ಪ್ರಾಧಿಕಾರ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌, ‘ಹಳ್ಳಿಗಳ ಜತೆಗೆ ನಿಕಟ ಸಂಬಂಧ ಹೊಂದಿರುವವರು ಆ ಶಾಲೆಯ ಶಿಕ್ಷಕರು. ಹಾಗಾಗಿ ಹಳ್ಳಿಗಳಲ್ಲಿ ಏನೇ ಆದರೂ ಶಿಕ್ಷಕರ ಗಮನಕ್ಕೆ ಬರುತ್ತದೆ. ದೇವದಾಸಿ ಪದ್ಧತಿ ಇದ್ದರೆ, ಮಕ್ಕಳು ಶಾಲೆಯಿಂದ ಹೊರಗುಳಿದರೆ, ಬಾಲ್ಯವಿವಾಹಕ್ಕೆ ತಯಾರಿ ನಡೆದರೆ ನಿಮಗೆ ಮೊದಲು ಗೊತ್ತಾಗುತ್ತದೆ. ಅದನ್ನು ನಿಲ್ಲಿಸಲು ಏನು ಮಾಡಬೇಕು ಎಂಬುದನ್ನು ಈ ಕಾರ್ಯಾಗಾರದ ಮೂಲಕ ತಿಳಿಯಬಹುದು’ ಎಂದು ಹೇಳಿದರು.

ಗರ್ಭದಿಂದ ಗೋರಿವರೆಗೆ ಕಾನೂನು ವ್ಯಾಪ್ತಿಗೆ ಮನುಷ್ಯ ಬರುತ್ತಾನೆ. ಎಷ್ಟೇ ಕಾನೂನುಗಳಿದ್ದರೂ ಸಮಸ್ಯೆಗಳು ಹಾಗೇ ಉಳಿದಿವೆ. ಪುರುಷರ ಮತ್ತು ಸಮಾಜದ ದೃಷ್ಟಿಕೋನ ಬದಲಾಗದೆ ಇರುವುದೇ ಅದಕ್ಕೆ ಕಾರಣ. ಸತಿ ಸಹಗಮನ , ದೇವದಾಸಿ ಪದ್ಧತಿ, ಬಾಲ್ಯವಿವಾಹ ಇವೆಲ್ಲ ಈ ದೃಷ್ಟಿಕೋನದ ದೋಷದಿಂದ ಹುಟ್ಟಿಕೊಂಡ ಅನಿಷ್ಟ ಪದ್ಧತಿಗಳು. ಇದರಿಂದ ಮಕ್ಕಳು ಮತ್ತು ಮಹಿಳೆಯರು ಶೋಷಣೆಗೆ ಒಳಗಾಗುತ್ತಾರೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವೈ. ರಾಮನಾಯ್ಕ್, ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಜಲಗಾರ್‌ ಉಪಸ್ಥಿತರಿದ್ದರು. ಪ್ರತಿಭಾ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.