ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮಾಲೀಕನ ಮೇಲೆ ಕಳ್ಳರಿಂದ ಮಾರಣಾಂತಿಕ ಹಲ್ಲೆ

Published 8 ಜೂನ್ 2024, 7:22 IST
Last Updated 8 ಜೂನ್ 2024, 7:22 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಇಲ್ಲಿನ ದುರ್ಗಾಂಬಿಕ ಬಡವಾಣೆ ಮನೆಯೊಂದರಲ್ಲಿ ಗುರುವಾರ ರಾತ್ರಿ ಕಳ್ಳರು ಬೀಗ ಮುರಿದು ಒಳ ಪ್ರವೇಶಿಸಿರುವ ಸುದ್ದಿ ತಿಳಿದು ಮನೆಯತ್ತ ಧಾವಿಸಿದ ಮಾಲೀಕನ ಮೇಲೆ ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಭದ್ರಾವತಿಯ ತೌಸೀಫ್ ಹಾಗೂ ರಫೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯ ಮಾಲೀಕ ಕೆ.ನಟರಾಜ್ ಈಚೆಗೆ ಹೊಸ ಮನೆ ಗೃಹ ಪ್ರವೇಶ ನಡೆಸಿ ದುರ್ಗಾಂಬಿಕ ಬಡಾವಣೆಯಲ್ಲಿ ಈ ಹಿಂದೆ ವಾಸವಿದ್ದ ಮನೆಗೆ ಬೀಗ ಹಾಕಿದ್ದರು. ಗುರುವಾರ ರಾತ್ರಿ 11.30ರ ಸಮಯದಲ್ಲಿ ಇಬ್ಬರು ಕಳ್ಳರು ಸ್ಕೃ ಡ್ರೈವರ್‌ನಿಂದ ಇಂಟರ್ ಲಾಕ್ ತೆಗೆದು ಒಳ ಪ್ರವೇಶಿದ್ದಾರೆ.

ಆಗ ಪಕ್ಕದ ಮನೆಯವರಿಗೆ ಮನೆಯೊಳಗೆ ಯಾರೋ ಓಡಾಡುವ ಸದ್ದು ಕೇಳಿಸಿದೆ. ತಕ್ಷಣ ಕೆ.ನಟರಾಜ್ ಅವರಿಗೆ ಕರೆ ಮಾಡಿದ್ದಾರೆ. ಪತ್ನಿಯೊಂದಿಗೆ ಧಾವಿಸಿದ ನಟರಾಜ್ ಸ್ನೇಹಿತ ಅರುಣ್ ಕುಮಾರ್‌ನೊಂದಿಗೆ ಮನೆ ಒಳ ಹೋಗಿದ್ದಾರೆ. ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮೊಬೈಲ್ ಟಾರ್ಚ್ ಬಳಸಿ ಮೇಲ್ಮಹಡಿ ಹತ್ತಿದ್ದಾರೆ. ಇಬ್ಬರು ಕಳ್ಳರು ಬೀರುವಿನ ಮರೆಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಹಿಡಿಯಲು ಮುಂದಾದ ನಟರಾಜ್‌ಗೆ ಒಬ್ಬ ಕಳ್ಳ ಕಬ್ಬಿಣದ ಸರಳಿನಿಂದ ಬಿರುಸಿನಿಂದ ಹೊಡೆದಿದ್ದಾನೆ. ಹಣೆ ಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರಿದೆ. ತಕ್ಷಣ ಯುವಕ ಅರುಣ್ ಕಳ್ಳನನ್ನು ಸರಳಿನ ಸಮೇತ ಬಿಗಿ ಹಿಡಿದಿದ್ದಾನೆ. ಎಚ್ಚೆತ್ತ ನೆರೆಹೊರೆಯವರು ಕಳ್ಳರನ್ನು ಹಿಡಿದು ಠಾಣೆಗೆ ಕರೆದೊಯ್ದರು.

ನಟರಾಜ್‌ ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. 

ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಗೋಪಾಲ ನಾಯ್ಕ, ಎಸ್ಐಗಳಾದ ದೀಪು, ಚನ್ನವೀರಪ್ಪ ಇದ್ದರು.

ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT