ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮಧ್ಯರಾತ್ರಿ ಸಂಚಾರ; ಜೀವಕ್ಕೆ ಸಂಚಕಾರ

ರಾತ್ರಿ ವೇಳೆ ಕರ್ಕಶ ಶಬ್ದ l ವೇಗವಾಗಿ ಬೈಕ್ ಚಾಲನೆ
Published 30 ಜನವರಿ 2024, 7:02 IST
Last Updated 30 ಜನವರಿ 2024, 7:02 IST
ಅಕ್ಷರ ಗಾತ್ರ

ದಾವಣಗೆರೆ: ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ತೆರಳುತ್ತಿದ್ದ ಪತ್ರಕರ್ತ ಪಿ. ಬಸವರಾಜ್ ಅವರ ಬೈಕ್‌ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಣಾಂತಿಕ ಈಚೆಗೆ ಹಲ್ಲೆ ನಡೆಸಿ ಮೊಬೈಲ್ ಮತ್ತು ಹಣ ಕಸಿದುಕೊಂಡು ಪರಾರಿಯಾಗಿರುವ ಘಟನೆ ನಗರದ ದೊಡ್ಡಬಾತಿ ಕೆರೆ ಬಳಿ ಈಚೆಗೆ ಸಂಭವಿಸಿದೆ.

2023ರ ಜುಲೈ ತಿಂಗಳಲ್ಲಿ ಹಳೇ ಬಾತಿಯ ಸಮೀಪ ಹೆದ್ದಾರಿಯಲ್ಲಿ ಲಾರಿ ಚಾಲಕನಿಗೆ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಘಟನೆಯ ನಂತರ ಅದೇ ಮಾದರಿಯ ಘಟನೆ ಮರುಕಳಿಸಿದೆ. ಕಳೆದ ವರ್ಷ ಆನಗೋಡು ಸಮೀಪ ಲಾರಿ ಚಾಲಕನನ್ನು ಸುಲಿಗೆ ಮಾಡಲು ಹೋದಾಗ ಚಾಲಕ ಇಬ್ಬರು ಯುವಕರ ಮೇಲೆ ಲಾರಿಯನ್ನೇ ಹತ್ತಿಸಿದ ಘಟನೆಯೂ ನಡೆದಿತ್ತು.

ನಗರ ನಿವಾಸಿಗಳ ಸುರಕ್ಷತೆ ಅಪಾಯದಲ್ಲಿದೆ ಎಂಬುದಕ್ಕೆ ಇವು ಉದಾಹರಣೆಗಳಷ್ಟೇ.‌

ಜಿಲ್ಲೆಯಲ್ಲಿ ಇಂತಹ ಅನೇಕ ಪ್ರಕರಣಗಳು ಘಟಿಸುತ್ತಲೇ ಇವೆ. ದಾವಣಗೆರೆ ನಗರದಲ್ಲಿ ವಿವಿಧೆಡೆ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ತಡರಾತ್ರಿ ತಮ್ಮ ಗ್ರಾಮ, ಮನೆಗಳಿಗೆ ತೆರಳುವುದಕ್ಕೆ ಈಗೀಗ ಭಯಪಡುವಂತಾಗಿದೆ. ಹೆದ್ದಾರಿ, ಇಲ್ಲವೇ ಸರ್ವೀಸ್ ರಸ್ತೆಗಳಲ್ಲಿ, ವಿದ್ಯುತ್ ದೀಪಗಳು ಇಲ್ಲದೇ ಇರುವ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಬರುವವರನ್ನು ಗುರಿಯಾಗಿಸಿ ಹೆದರಿಸಿ, ಹೊಡೆದು, ಬಡಿದು  ಮೊಬೈಲ್, ನಗದು, ಪರ್ಸ್ ಕಿತ್ತುಕೊಳ್ಳುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇವೆ.

ಗಾರ್ಮೆಂಟ್ಸ್‌ಗಳಲ್ಲಿ ದುಡಿಯುವ ಮಹಿಳೆಯರು ಮನೆ ತಲುಪಲು ರಾತ್ರಿ 8ಗಂಟೆಯಾಗುತ್ತದೆ. ಪತ್ರಿಕಾಲಯಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮನೆ ತಲುಪು
ವುದು ರಾತ್ರಿ 12ರಿಂದ 1 ಗಂಟೆಯಾಗುತ್ತದೆ. ಪತ್ರಿಕೆಗಳ ಮುದ್ರಣಾಲಯಗಳಲ್ಲಿ ಕೆಲಸ ಮಾಡುವವರು ಮನೆಗೆ ತೆರಳುವುದು ಬೆಳಗಿನ ಜಾವ. ಅವರೆಲ್ಲರೂ ಜೀವ ಕೈಯಲ್ಲಿ ಹಿಡುದುಕೊಂಡೇ ಸಾಗಬೇಕಿದೆ.

ರಾತ್ರಿ ವೇಳೆ ಕುಡುಕರ ಹಾವಳಿ: ‘ಮಧ್ಯ ರಾತ್ರಿ ಕುಡುಕರ ಹಾವಳಿ ಹೆಚ್ಚಾಗಿ ಕರ್ಕಶ ಶಬ್ದ ಮಾಡಿಕೊಂಡು ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬರುವಾಗ ಭಯ ಶುರುವಾಗುತ್ತದೆ. ಬೇಕಂತಲೇ ಹಾರ್ನ್ ಮಾಡುತ್ತಾರೆ. ಇದರಿಂದ ಭಯವಾಗುತ್ತಿದೆ’ ಎಂದು ನಗರದಲ್ಲಿನ ವೃದ್ಧ ಮಹಿಳೆಯೊಬ್ಬರು ಆತಂಕ ವ್ಯಕ್ತಪಡಿಸಿದರು.

‘ಡಿಸಿಎಂ ಬ್ರಿಡ್ಜ್ ಬಳಿ ಮುಂಜಾನೆ ವಾಯುವಿಹಾರಕ್ಕೆ ತೆರಳುವಾಗ ಕೊರಳಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಹೋಗಿದ್ದರು. ಯುವತಿಯೊಬ್ಬರು ಮೊಬೈಲ್ ಅಂಗಡಿಯ ಬಳಿ ನಿಂತಿದ್ದಾಗ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ. ಇಂತಹ ಅನೇಕ ಪ್ರಕರಣಗಳು ಪ್ರಕರಣಗಳು ನಡೆಯುತ್ತಿದ್ದು, ಯುವಕರು ಮೋಜಿಗಾಗಿ ಈ ದುಷ್ಕೃತ್ಯ ನಡೆಸುತ್ತಿ
ದ್ದಾರೆ. ಅಂಥವರ ಹೆಡೆಮುರಿ ಕಟ್ಟ
ಬೇಕಿದೆ’ ಎಂದು ಕಾರ್ಮಿಕ ಮುಖಂಡ ಆವರಗೆರೆ ವಾಸು ಕೋರಿದರು.

‘ಕೊರೊನಾ ಬಳಿಕ ಹಲವರು ಉದ್ಯೋಗ ಕಳೆದುಕೊಂಡಿದ್ದು, ಸುಲಿಗೆಯಂತಹ ಕೃತ್ಯಕ್ಕೆ ಇಳಿದಿದ್ದಾರೆ. ಅಕ್ರಮ ಮದ್ಯ ಮಾರಾಟವೂ ಇದಕ್ಕೆ ಪ್ರೇರಣೆ ನೀಡುತ್ತಿದೆ’ ಎಂದರು.

‘ಇತ್ತೀಚೆಗೆ ಪತ್ರಕರ್ತ ಪಿ.ಬಸವರಾಜ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದು, ಪೊಲೀಸರ ಕ್ರಮ ಶ್ಲಾಘನೀಯ. ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು’ ಎಂಬುದು ಹಲವರ ಅಭಿಪ್ರಾಯ.

ಶಾಲೆ–ಕಾಲೇಜು ತೊರೆದವರೇ ಹೆಚ್ಚು

‘ಅಪರಾಧ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗುವವರು ಕೊಳೆಗೇರಿಗಳಲ್ಲಿ ಶಾಲಾ– ಕಾಲೇಜುಗಳಿಂದ ಹೊರಗುಳಿದವರೇ ಹೆಚ್ಚಾಗಿದ್ದು, ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಕರೆಸಿ ಪರಿಶೀಲಿಸಲಾಗುತ್ತಿದೆ. ಅಪರಾಧ ಮಾಸಾಚರಣೆ ಕಾರ್ಯಕ್ರಮದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರಾತ್ರಿ ವೇಳೆ ಗಸ್ತು ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ. ಇಂತಹ ಪ್ರಕರಣಗಳು ಸಂಭವಿಸಿದ ಕೂಡಲೇ ಪೊಲೀಸರಿಗೆ ದೂರು ನೀಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಮಹಿಳೆಯರಿಗೆ ಹಗಲಿನಲ್ಲಿಯೇ ಸುರಕ್ಷತೆ ಇಲ್ಲವಾಗಿದೆ. ಗಾರ್ಮೆಂಟ್ಸ್‌, ಕಾರ್ಖಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಭದ್ರತೆ ಕಲ್ಪಿಸಬೇಕು. ಮನೆಗೆ ತಲುಪಲು ವಾಹನದ ಸೌಲಭ್ಯ ಕಲ್ಪಿಸಬೇಕು.
ಜಬೀನಾಖಾನಂ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ
ಕಳ್ಳತನ, ಸುಲಿಗೆ ನಡೆಯಲು ನಿರುದ್ಯೋಗ, ಸರ್ಕಾರದ ನೀತಿಗಳು ಕಾರಣ. ಯುವಕರಿಗೆ ಉದ್ಯೋಗ ಕಲ್ಪಿಸಬೇಕು. ಪ್ರಕರಣಗಳನ್ನು ತಡೆಯಲು ಪೊಲೀಸರು ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು.
ಆವರಗೆರೆ ವಾಸು, ಕಾರ್ಮಿಕ ಮುಖಂಡ

ಗಸ್ತು ಪೊಲೀಸರು ಕಾಣಿಸುವುದೇ ಇಲ್ಲ

ರಾತ್ರಿ ವೇಳೆ ಜನರ ಸುರಕ್ಷತೆಗಾಗಿ ಪೊಲೀಸರು ಗಸ್ತು ತಿರುಗಬೇಕು. ಮಹಿಳೆಯರ ಸುರಕ್ಷತೆಗಂತೂ ಅವರ ಕಣ್ಗಾವಲು ಮತ್ತಷ್ಟು ಹೆಚ್ಚಬೇಕು. ಆದರೆ, ಗಸ್ತು ಪೊಲೀಸರ ಸುಳಿವೇ ಇರುವುದಿಲ್ಲ ಎಂಬುದು ನಗರ ನಿವಾಸಿಗಳ ಆರೋಪವಾಗಿದೆ.

‌ಮಧ್ಯ ಕರ್ನಾಟಕ ಭಾಗದಲ್ಲಿರುವ ದಾವಣಗೆರೆಗೆ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಬಳ್ಳಾರಿ, ಶಿವಮೊಗ್ಗ ಕಡೆಯಿಂದ ಮಧ್ಯರಾತ್ರಿ ನಂತರ ಸಾರ್ವಜನಿಕರು ಬಸ್‌, ರೈಲುಗಳಲ್ಲಿ ಬರುತ್ತಾರೆ. ಅಂಥವರಲ್ಲಿ ಕೆಲವರು ಬಸ್‌ ನಿಲ್ದಾಣ, ರೈಲು ನಿಲ್ದಾಣಗಳ ಬಳಿ ಇರಿಸಿರುವ ಬೈಕ್‌ಗಳ ಮೂಲಕ ಮನೆ ತಲುಪುತ್ತಾರೆ. ಅವರೆಲ್ಲರೂ ಈಗ ಆತಂಕದಲ್ಲೇ ಮನೆ ತಲುಪುವಂತಾಗಿದೆ ಎಂಬುದು ಸಾರ್ವಜನಿಕರ ದೂರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT