ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ | ಮಕ್ಕಳಲ್ಲಿ ಐಎಎಸ್‌ ಕನಸನ್ನು ಬಿತ್ತಿ

ಇನ್‌ಸೈಟ್‌ ಐಎಎಸ್ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್‍ಕುಮಾರ್ ಸಲಹೆ
Published 24 ಜನವರಿ 2024, 7:35 IST
Last Updated 24 ಜನವರಿ 2024, 7:35 IST
ಅಕ್ಷರ ಗಾತ್ರ

ಹೊನ್ನಾಳಿ: ಮಕ್ಕಳನ್ನು ಮೊಬೈಲ್‌ನಿಂದ ದೂರವಿರಿಸಿ, ಅವರಲ್ಲಿ ಐಎಎಸ್ ಕನಸು ಬಿತ್ತಿ. ಈಗ ಯಾರೂ ಪುಸ್ತಕಗಳನ್ನು ಓದದ ಕಾರಣ ಧೈರ್ಯ ಬರುತ್ತಿಲ್ಲ. ಧೈರ್ಯ ಬರಬೇಕಾದರೆ ಪುಸ್ತಕಗಳನ್ನು ಓದಬೇಕು. ನೀವು ಯಾರಿಗಾದರೂ ಏನನ್ನಾದರೂ ಕೊಡಲು ಬಯಸಿದರೆ ಪುಸ್ತಕಗಳನ್ನು ಮಾತ್ರ ಕೊಡಿ ಎಂದು ಇನ್‌ಸೈಟ್‌ ಐಎಎಸ್ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್‍ಕುಮಾರ್ ಸಲಹೆ ನೀಡಿದರು.

ಪಟ್ಟಣದ ಕನಕ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಚಿಕ್ಕವನಿದ್ದಾಗಲೇ ಪುಸ್ತಕ ಓದುವಂತೆ ನನ್ನ ತಂದೆ ಹೇಳುತ್ತಿದ್ದರು. ಕಥೆ ಪುಸ್ತಕ ಸೇರಿ ಒಳ್ಳೆಯ ಪುಸ್ತಕಗಳನ್ನು ತಂದುಕೊಡುತ್ತಿದ್ದರು. 5 ನೇ ತರಗತಿ ಇರುವಾಗಲೇ ನಾನು ತರಾಸು ಅವರ ದುರ್ಗಾಸ್ತಮಾನ ಕಾದಂಬರಿ ಓದಿದ್ದೆ. ಅದು ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಸ್ಮರಿಸಿದರು.

ಸಂಸ್ಥೆಯಿಂದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ದೆಹಲಿ, ಲಕ್ನೋ, ಹೈದರಾಬಾದ್, ಧಾರವಾಡ ಈಚೆಗೆ ಶ್ರೀನಗರದಲ್ಲೂ ಐಎಎಸ್ ತರಬೇತಿ ಸಂಸ್ಥೆಯನ್ನು ತೆರೆಯಲಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ನಂಜರಾಜ್ ಮಾತನಾಡಿ, ‘ಸರ್ಕಾರಿ ಅಥವಾ ಖಾಸಗಿ ಶಾಲೆ ಒಟ್ಟಿನಲ್ಲಿ ಉತ್ತಮ ಶಿಕ್ಷಣ ನೀಡಬೇಕು. ಆ ಕೆಲಸವನ್ನು ಕನಕ ಎಜುಕೇಶನ್ ಸೊಸೈಟಿ ಮಾಡುತ್ತಾ ಬಂದಿರುವುದು ಹೆಮ್ಮೆಯ ವಿಷಯ’ ಎಂದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎಸ್. ಷಹಜಾನ್, ಇಂಗ್ಲಿಷ್ ಶಿಕ್ಷಕ ಯೋಗೇಂದ್ರ ನಾಯ್ಕ, ಹಾಲುಮತ ಸಮುದಾಯದ ಮಹಿಳಾ ತಾಲ್ಲೂಕು ಘಟಕದ ಅಧ್ಯಕ್ಷೆ ಪಂಕಜಾಕ್ಷಿ ಮಾತನಾಡಿದರು. ಎನ್.ಕೆ. ಆಂಜನೇಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಪಾಲಕರು ಮತ್ತು ಮಕ್ಕಳಿಗೆ ಏರ್ಪಡಿಸಿದ್ದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್‍ಕೆಜಿಯಿಂದ 7ನೇ ತರಗತಿವರೆಗೆ ಡಿಸ್ಟಿಂಕ್ಷನ್ ಪಡೆದ 24 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯಶಿಕ್ಷಕಿ ಜಿ. ವಾಣಿ, ಶಿಕ್ಷಕರಾದ ಗಜೇಂದ್ರ, ಶೃತಿಕುಮಾರಿ, ಎಸ್.ಆರ್.ಹೇಮಾ, ರೇಖಾ, ಸಂಗೀತಾ, ಲಕ್ಷ್ಮಿ,  ಚಂದನ, ಶಕುಂತಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT