ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕಾರಾಗೃಹದಲ್ಲಿ ಗಲಾಟೆ; ಇಬ್ಬರಿಗೆ ಗಾಯ

Published 30 ಜನವರಿ 2024, 6:44 IST
Last Updated 30 ಜನವರಿ 2024, 6:44 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದು ಇಬ್ಬರು ಕೈದಿಗಳು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಬೆಳಿಗ್ಗೆ ಸ್ಥಳೀಯ ಹಾಗೂ ಉತ್ತರ ಪ್ರದೇಶ ಮೂಲದ ವಿಚಾರಣಾಧೀನ ಕೈದಿಗಳ ಮಧ್ಯೆ ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಕೈದಿಗಳ ತಲೆಗೆ ಪೆಟ್ಟಾಗಿದೆ.

ಗಲಾಟೆಯನ್ನು ಗಮನಿಸಿದ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣವೇ ಧಾವಿಸಿ, ಕೈದಿಗಳನ್ನು ಚದುರಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡಿದ್ದ ಇಬ್ಬರು ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದ ನಂತರ ಕೈದಿಗಳನ್ನು ಮರಳಿ ಜೈಲಿಗೆ ಕರೆ ತರಲಾಗಿದ್ದು, ಯಾರಿಗೂ ಅಂತಹ ಗಂಭೀರ ಪೆಟ್ಟುಗಳಾಗಿಲ್ಲ.

ಆರೋಪಿಗಳಾದ ಸಂಜೀತ್ ಸಿಂಗ್, ಬೊಲೆ, ಸುನೀಲ್, ಪವನಕುಮಾರ, ಅಭಿಲಾಷ್, ವೆಂಕಟೇಶ, ರಮೇಶ, ಮಂಜುನಾಥ, ಆಕಾಶ, ಹನುಮಂತ, ಇಮ್ರಾನ್ ಖಾನ್, ಸಲ್ಮಾನ್ ಖಾನ್ ವಿರುದ್ಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಲಾಟೆ ಬಗ್ಗೆ ಸಿ.ಸಿ.ಟಿವಿ ಕ್ಯಾಮೆರಾ ಪರಿಶೀಲಿಸಲಾಗಿದೆ. ಇತರೆ ಕೈದಿಗಳ ಹೇಳಿಕೆ ಪಡೆದು, ಸೂಕ್ತ ತನಿಖೆ ನಡೆಸಲಾಗುತ್ತಿದೆ. ಕಾರಾಗೃಹದ ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದು, ವರದಿ ಕೈಸೇರಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಅಡಿಕೆ ಕಳವು; ದೂರು

ದಾವಣಗೆರೆ: ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಅಡಿಕೆ ತುಂಬಿಟ್ಟಿದ್ದ ಚೀಲಗಳನ್ನು ಕಳವು ಮಾಡಿದ್ದಾರೆ ಎಂದು ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ.

‘ಜಿಲ್ಲೆಯ ವಿವಿಧೆಡೆಯಿಂದ ಅಡಿಕೆ ಖರೀದಿಸಿ ವಿನಾಯಕ ಬಡಾವಣೆಯ ನಿವಾಸಿ, ಸ್ನೇಹಿತ ಸೂರಜ್‌ ಎಂಬುವವರ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದೆ. ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ಅವರ ಗೋದಾಮಿನಲ್ಲಿ 75 ಕೆ.ಜಿ. ತೂಕದ 133 ಚೀಲಗಳಲ್ಲಿ ಅಡಿಕೆಯನ್ನು ಇಡಲಾಗಿತ್ತು. ನಾನು ಶಬರಿಮಲೆಗೆ ಹೋಗಿ ಬಂದ ನಂತರ ನೋಡಿದಾಗ 96 ಚೀಲಗಳು ಇರಲಿಲ್ಲ, ಕೇವಲ 37 ಚೀಲಗಳು ಮಾತ್ರ ಇದ್ದವು. ಸೂರಜ್‌ ಹಾಗೂ ಅವರ ತಂದೆ ರಾಘವೇಂದ್ರ ಅವರೇ ಅಂದಾಜು ₹ 36 ಲಕ್ಷ ಮೌಲ್ಯದ ಅಡಿಕೆಯನ್ನು ಕಳವು ಮಾಡಿ, ಮಾರಾಟ ಮಾಡಿದ್ದಾರೆ’ ಎಂದು ನಿಜಲಿಂಗಪ್ಪ ಬಡಾವಣೆಯ ನಿವಾಸಿ ನವೀನ್‌ ಎಂ. ನಲವಡಿ ದೂರಿನಲ್ಲಿ ತಿಳಿಸಿದ್ದಾರೆ.

‘ಗೋದಾಮಿನ ಒಂದು ಬೀಗ ಸೂರಜ್ ಬಳಿ ಇತ್ತು. ಗೋದಾಮಿನ ಬೀಗ ಒಡೆದಿಲ್ಲ, ಎಲ್ಲಿಯೂ ಡ್ಯಾಮೇಜ್‌ ಕೂಡ ಆಗಿಲ್ಲ. ಅಡಿಕೆ ಚೀಲಗಳ ಬಗ್ಗೆ ಪ್ರಶ್ನಿಸಿದರೆ ಸೂರಜ್‌ ಹಾಗೂ ಅವರ ತಂದೆ ಸರಿಯಾಗಿ ಮಾಹಿತಿ ನೀಡದೇ, ಗದರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು; ಬಂಧನ

ದಾವಣಗೆರೆ: ಆಟೊಮೊಬೈಲ್ಸ್‌ ಅಂಗಡಿಯೊಂದರಲ್ಲಿ ₹ 40,000 ಕಳವು ಮಾಡಿದ್ದ ಆರೋಪಿಗಳನ್ನು ಕೆ.ಟಿ.ಜೆ. ನಗರ ಠಾಣೆ ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಆಟೊ ಹಾಗೂ ಬೈಕ್‌ ವಶಪಡಿಸಿಕೊಂಡಿದ್ದಾರೆ.

ನಿಟುವಳ್ಳಿಯ ನಿವಾಸಿಗಳಾದ ಅಜಯ, ಚಂದ್ರ ಬಂಧಿತರು. ಆರೋಪಿಗಳ ವಿರುದ್ಧ ಕೆ.ಟಿ.ಜೆ. ನಗರ ಠಾಣೆಯಲ್ಲಿ 2 ಹಾಗೂ ವಿದ್ಯಾನಗರ ಠಾಣೆಯಲ್ಲಿ 1 ಪ್ರಕರಣ ಇವೆ. ಆರೋಪಿಗಳು ಅಂಗಡಿಯ ಚಾವಣಿಯನ್ನು ತೆಗೆದು ನಗದು ಕಳವು ಮಾಡಿದ್ದರು.

ಇನ್‌ಸ್ಪೆಕ್ಟರ್‌ ಶಶಿಧರ್ ಯು.ಎ. ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಮಂಜುಳಾ ಜಿ.ಎ., ಸಾಗರ ಅತ್ತರವಾಲಾ, ಸಿಬ್ಬಂದಿಯಾದ ಶಂಕರ್ ಜಾಧವ್, ಪ್ರಕಾಶ್ ಟಿ., ಷಣ್ಮುಖ ಕೆ., ಎಂ.ಮಂಜಪ್ಪ, ಶಿವರಾಜ್ ಎಂ.ಎಸ್‌., ಸತೀಶ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

2 ಚೀಲ ಅಡಿಕೆ ಕಳವು

ಚನ್ನಗಿರಿ: ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದ ಯಶವಂತ ಅವರು ಅಡಿಕೆ ಕೇಣಿ ಮನೆಯಲ್ಲಿ ಒಣಗಲು ಹಾಕಿದ್ದ 2 ಚೀಲ ಒಣ ಅಡಿಕೆಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಭಾನುವಾರ ನಡೆದಿದೆ. ಅಡಿಕೆ ಮೌಲ್ಯ ₹ 80 ಸಾವಿರ ಎಂದು ಅಂದಾಜಿಸಲಾಗಿದೆ.

ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT