ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಪೊಲೀಸ್‌ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ

Published 2 ಡಿಸೆಂಬರ್ 2023, 16:20 IST
Last Updated 2 ಡಿಸೆಂಬರ್ 2023, 16:20 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಪಿ.ಬಿ.ರಸ್ತೆಯಿಂದ ಮಾಗನಹಳ್ಳಿ ರಸ್ತೆಯವರೆಗೆ ರಿಂಗ್‌ರೋಡ್‌ ನಿರ್ಮಾಣ ಮಾಡಲು ರಾಮಕೃಷ್ಣ ಹೆಗಡೆ ನಗರದಲ್ಲಿ ಶನಿವಾರ ತೀವ್ರ ಪ್ರತಿಭಟನೆಯ ನಡುವೆಯೂ ಪೊಲೀಸ್‌ ಭದ್ರತೆಯಲ್ಲಿ ‘ವಸತಿ ರಹಿತ ಒತ್ತುವರಿದಾರರ ತೆರವು ಕಾರ್ಯಾಚರಣೆ’ ಆರಂಭವಾಗಿದೆ.

‘ಬೆಳಿಗ್ಗೆ ಏಕಾಏಕಿ ಕಾರ್ಯಾಚರಣೆ ಆರಂಭಿಸಲಾಗಿದೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ ಮನೆ ಕೆಡವಿದ್ದರಿಂದ ಸಾಕಷ್ಟು ಹಾನಿಯಾಗಿದೆ’ ಎಂದು ಸ್ಥಳೀಯರು ದೂರಿದರು.

ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶನಿವಾರ ಬೆಳಿಗ್ಗೆ 5 ಗಂಟೆಯಿಂದ ಭಾನುವಾರ ಬೆಳಿಗ್ಗೆ 5 ಗಂಟೆವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿ ಉಪವಿಭಾಗಾಧಿಕಾರಿ (ಎ.ಸಿ.) ದುರ್ಗಾಶ್ರೀ ಅವರು ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದರು.

ಎಡಿಸಿ ಲೋಕೇಶ್, ಎಎಸ್‌ಪಿ ವಿಜಯಕುಮಾರ್‌ ಸಂತೋಷ, ಎ.ಸಿ. ದುರ್ಗಾಶ್ರೀ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಆಯುಕ್ತರಿಗೆ ತರಾಟೆ:

‘ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ ಮನೆ ಕೆಡವಿದರು’ ಎಂದು ಆರೋಪಿಸಿ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಆಯುಕ್ತರಾದ ರೇಣುಕಾ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ‘ನೀವು ಪೊಲೀಸ್, ಜೆಸಿಬಿ ತಂದು ಹೆದರಿಸಿದರೆ ನಾವು ಹೆದರಲ್ಲ, ನೀವು ಹಠ ಸಾಧಿಸುತ್ತಿದ್ದೀರಿ. ಹಠ ಸಾಧಿಸಿ ಏನ್ ಮಾಡ್ತೀರಿ’ ಎಂದು ಪ್ರಶ್ನಿಸಿದರು.

ಸ್ಥಳೀಯರನ್ನು ಬೆಂಬಲಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು. ಕೆಲವರಿಗೆ ಮಾತ್ರ ನಿವೇಶನ ನೀಡಿ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಬಹುತೇಕರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ನಿವೇಶನ ಗುರುತಿಸಿದ ಸ್ಥಳದಲ್ಲಿ ಶೆಡ್ ನಿರ್ಮಿಸಿ ತೆರವು ಮಾಡಬೇಕಿತ್ತು’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ತರ್‌ ರಜಾ ವೃತ್ತದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಎಸ್‌ಯುಸಿಐ ಸಂಘಟನೆಯ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ, ನಗರದ ಡಿಎಆರ್ ಪೊಲೀಸ್ ಮೈದಾನಕ್ಕೆ ಕರೆದೊಯ್ದರು. ಕೆಲವು ಗಂಟೆಗಳ ಬಳಿಕ ಅವರನ್ನು ಬಿಡುಗಡೆಗೊಳಿಸಿದರು.

ಶಾಶ್ವತ ಪರಿಹಾರ ಒದಗಿಸಿ:

‘ಕಳೆದ 30–40 ವರ್ಷಗಳಿಂದ ಹೆಗಡೆ ನಗರದಲ್ಲಿ ಸಣ್ಣ ಸಣ್ಣ ಮನೆಗಳಲ್ಲಿ ವಾಸಿಸುತ್ತಿರುವ ಬಡವರನ್ನು ಏಕಾಏಕಿ ಒಕ್ಕಲೆಬ್ಬಿಸುವುದು ಸರಿಯಲ್ಲ. ಯಾವುದೇ ಮೂಲ ಸೌಲಭ್ಯಗಳಿಲ್ಲದ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ನಾಗರಿಕರನ್ನು ಸ್ಥಳಾಂತರಿಸುತ್ತಿರುವುದು ಸಮಂಜಸವಲ್ಲ. ಅವರಿಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಮುಖಂಡ ಮಂಜುನಾಥ್ ಕೈದಾಳೆ ಆಗ್ರಹಿಸಿದರು.

‘ಇಲ್ಲಿನ ಬಡಜನರು ಅನಕ್ಷರಸ್ಥರಾಗಿದ್ದು, ಅವರಿಗೆ ನೋಟಿಸ್ ಬಗ್ಗೆ ಅರಿವಿಲ್ಲ. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿದ್ದು ಸರಿಯಲ್ಲ’ ಎಂದು ಎಸ್‌ಯುಸಿಐ ಕಾರ್ಯಕರ್ತರಾದ ಭಾರತಿ, ಪೂಜಾ, ತಿಪ್ಪೇಸ್ವಾಮಿ, ಮಹಾಂತೇಶ್, ಮಂಜುನಾಥ್ ರೆಡ್ಡಿ, ಪರಶುರಾಮ್, ಅಸಮಾಧಾನ ವ್ಯಕ್ತಪಡಿಸಿದರು.

‘ನಿವೇಶನ ನೀಡಿರುವ ಜಾಗದಲ್ಲಿ ಮೂಲಸೌಕರ್ಯ ಇಲ್ಲ. ರಸ್ತೆ, ಚರಂಡಿ, ವಿದ್ಯುತ್‌ನಂತಹ ಸರಿಯಾದ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಕರಿಬಸಪ್ಪ ಒತ್ತಾಯಿಸಿದರು.

ಏಕಾಏಕಿ ಮನೆ ತೆರವು ಮಾಡಿದ್ದರಿಂದ ವಾಸಿಸಲು ಬೇರೆ ಮನೆ ಇಲ್ಲ. ಬಾಡಿಗೆ ಮನೆ ಹುಡುಕಿದರೂ ಸಿಕ್ಕಿಲ್ಲ ಹೀಗಾಗಿ ತಮ್ಮನ ಮನೆಗೆ ಹೋಗುತ್ತಿದ್ದೇವೆ. ಹಲವು ಕುಟುಂಬಗಳದ್ದು ಇದೇ ರೀತಿಯ ಸ್ಥಿತಿ ಇದೆ.
ಸಯ್ಯದ್‌ ಝಾಕೀರ್ ರಾಮಕೃಷ್ಣ ಹೆಗಡೆ ನಗರ
ಶಾಂತಿಯುತವಾಗಿ ನಡೆಯುತ್ತಿದೆ: ಎಸ್‌ಪಿ
‘ಸ್ಥಳಾಂತರಕ್ಕೆ ಎಲ್ಲರೂ ಸ್ವಯಂ ಪ್ರೇರಿತವಾಗಿ ಒಪ್ಪಿಕೊಂಡಿದ್ದಾರೆ. ಹಕ್ಕುಪತ್ರ ಸಿಗದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಕ್ಕು ಪತ್ರ ಪಡೆದವರು ಸ್ವಯಂ ಪ್ರೇರಿತವಾಗಿ ಸ್ಥಳಾಂತರವಾಗುತ್ತಿದ್ದಾರೆ’ ಎಂದು ರಾಮಕೃಷ್ಣ ಹೆಗಡೆ ನಗರಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ‘ಪಾಲಿಕೆ ಆಯುಕ್ತರು ಸ್ಥಳದಲ್ಲೇ ಇದ್ದು ದಾಖಲೆಗಳ ವಿಚಾರದಲ್ಲಿ ಉಂಟಾಗಿರುವ ಗೊಂದಲ ಪರಿಹರಿಸುತ್ತಿದ್ದಾರೆ. ಸ್ಥಳಾಂತರಕ್ಕೆ ಯಾರ ವಿರೋಧವಿಲ್ಲ. ಎಲ್ಲ ಶಾಂತಿಯುತವಾಗಿ ನಡೆಯುತ್ತಿದೆ’ ಎಂದು ಹೇಳಿದರು.
ಸ್ಥಳೀಯರಿಗೆ ಮೊದಲೇ ತಿಳಿಸಲಾಗಿತ್ತು: ಆಯುಕ್ತರು
‘ರಾಮಕೃಷ್ಣ ಹೆಗಡೆ ನಗರದಲ್ಲಿ ಈಗಾಗಲೇ 243 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. 87 ಜನರಿಗೆ ನಿವೇಶನ ಮಂಜೂರಾತಿ ಪತ್ರ ಕೊಟ್ಟಿದ್ದೇವೆ’ ಎಂದು ಪಾಲಿಕೆ ಆಯುಕ್ತರಾದ ರೇಣುಕಾ ‘ಪ್ರಜಾವಾಣಿ’ಗೆ ತಿಳಿಸಿದರು. 20 ಕುಟುಂಬಗಳು ಸರಿಯಾಗಿ ದಾಖಲೆ ನೀಡಿಲ್ಲ. 20 ಕುಟುಂಬಗಳಿಗೆ ಬೇರೆ ಕಡೆ ನಿವೇಶನ ಗುರುತಿಸಲಾಗಿದೆ. ಇನ್ನೂ 20 ಕುಟುಂಬಗಳು ಮನೆ ಬಿದ್ದಿದ್ದರಿಂದ ಬೇರೆ ಕಡೆ ವಾಸಿಸುತ್ತಿದ್ದೆವು. ನಮಗೂ ನಿವೇಶನ ಕಲ್ಪಿಸಿ ಎಂದು ಮನವಿ ಮಾಡಿದ್ದಾರೆ. ಅದನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು. ‘ಹಕ್ಕುಪತ್ರ ವಿತರಿಸುವಾಗಲೇ ಮನೆ ಖಾಲಿ ಮಾಡಲು ತಿಳಿಸಲಾಗಿತ್ತು. ಅದಕ್ಕೆ ಸ್ಥಳೀಯರು ಒಪ್ಪಿದ್ದರು. ಈಚೆಗೆ ಅಲ್ಲಿನ ಮುಖಂಡರೊಂದಿಗೆ ಸಭೆ ನಡೆಸಿ ತೆರವು ಕಾರ್ಯಾಚರಣೆ ಬಗ್ಗೆ ತಿಳಿಸಲಾಗಿತ್ತು. ಇದು ಏಕಾಏಕಿ ಕಾರ್ಯಾಚರಣೆ ಅಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT