ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | 'ಶೇ 60ರಷ್ಟು ಕನ್ನಡ; ನಾಳೆಯಿಂದ ಕಡ್ಡಾಯ'

Published 12 ಮಾರ್ಚ್ 2024, 7:34 IST
Last Updated 12 ಮಾರ್ಚ್ 2024, 7:34 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡ ಭಾಷಾ ಸಮಗ್ರ ಅಭಿವೃದ್ದಿ ವಿಧೇಯಕ-2024 ರ ತಿದ್ದುಪಡಿಯನ್ವಯ ನಾಮಫಲಕದ ಮೇಲ್ಬಾಗದಲ್ಲಿ ಶೇ 60ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದ್ದು, ಇದರ ಅನುಷ್ಠಾನ ಮಾರ್ಚ್ 13ರಿಂದ ಜಾರಿಗೆ ಬರಲಿದೆ. ಆದರೆ ಸ್ವಯಂಪ್ರೇರಿತವಾಗಿ ಕನ್ನಡ ಭಾಷೆ ಪ್ರದರ್ಶನಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

ಸೋಮವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯದಲ್ಲಿನ ಎಲ್ಲಾ ಉದ್ದಿಮೆಗಳು, ಕಾರ್ಖಾನೆಗಳು, ಬ್ಯಾಂಕ್‍ಗಳು, ಸಂಘ, ಸಂಸ್ಥೆಗಳು, ಅಂಗಡಿಗಳು, ಶಾಲಾ, ಕಾಲೇಜುಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ 60ರಷ್ಟು ಕನ್ನಡ ಭಾಷೆಯ ಪ್ರದರ್ಶನ ಇರಲೇಬೇಕಾಗುತ್ತದೆ. ಕನ್ನಡವನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ₹5000ದಿಂದ ₹10,000ದವರೆಗೆ ದಂಡ ವಿಧಿಸಲಾಗುತ್ತದೆ’ ಎಂದು ಎಚ್ಚರಿಸಿದರು.

‘ರಾಜ್ಯದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಎಲ್ಲರೂ ಸ್ವಯಂ ಪ್ರೇರಿತವಾಗಿ ಕನ್ನಡ ಬಳಕೆ ಮಾಡಬೇಕು. ಒಂದು ವೇಳೆ ಸಂಪೂರ್ಣವಾಗಿ ಕನ್ನಡ ಬಳಕೆ ಮಾಡುವುದಾದರೇ ಯಾವುದೇ ಅಭ್ಯಂತರ ಇರುವುದಿಲ್ಲ. ಬ್ಯಾಂಕ್, ಉದ್ದಿಮೆಗಳು ತ್ರಿಭಾಷಾ ಸೂತ್ರ ಪಾಲನೆ ಮಾಡುತ್ತಿದ್ದಲ್ಲಿ ಮೊದಲ ಸಾಲಿನಲ್ಲಿ ಕನ್ನಡ ಭಾಷೆ ಇರಬೇಕು’ ಎಂದರು.

‘ಜಿಲ್ಲೆಯ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆದ 12,846 ಜನರು ಇದ್ದು, ಈಗಾಗಲೇ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಉದ್ದಿಮೆದಾರರ ಫಲಕಗಳಲ್ಲಿ ಶೇ 60ರಷ್ಟು ಕನ್ನಡ ಪ್ರದರ್ಶನದ ಅನುಷ್ಠಾನ ಮಾಡಲಾಗಿದೆ. ಶೇ 50ಕ್ಕಿಂತಲೂ ಹೆಚ್ಚಿದೆ. ಇದನ್ನು ಶೇ 100ರಷ್ಟು ಅನುಷ್ಠಾನ ಮಾಡಲು ಕಾರ್ಯಪಡೆಯನ್ನು ರಚಿಸಲಾಗಿದೆ. ಕಾನೂನು ಅನುಷ್ಠಾನಕ್ಕೂ ಮೊದಲು ಸ್ವಯಂ ಪ್ರೇರಿತವಾಗಿ ಅಳವಡಿಸಿಕೊಳ್ಳಲು ಮಾರ್ಚ್ 13 ರವರೆಗೆ ಅವಕಾಶ ನೀಡಲಾಗಿದೆ. ನಂತರದಲ್ಲಿ ಅನುಷ್ಠಾನ ಮಾಡದ ಉದ್ದಿಮೆದಾರರು ಹಾಗೂ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಜರುಗಿಸುವ ಮೂಲಕ ಕಡ್ಡಾಯವಾಗಿ ಅನುಷ್ಠಾನ ಮಾಡಲು ಆಯಾ ವಿಭಾಗದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಗ್ರಾಮೀಣ ಭಾಗದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉದ್ದಿಮೆ, ಸಂಘ, ಸಂಸ್ಥೆಗಳಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆಯ ಶೇ 60ರಷ್ಟು ಪ್ರದರ್ಶನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ತಿಳಿಸಿದರು.

 ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರಾದ ಮಹಂತೇಶ್ ಮಾತನಾಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ದುರ್ಗಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ಕನ್ನಡ ಪರ ಸಂಘಟನೆಯ ರಾಮೇಗೌಡ, ಶಿವಣ್ಣ, ನಾಗೇಂದ್ರ ಬಂಡೀಕರ್, ಸುಧಾಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT